ಸಾಮೂಹಿಕ ವಿವಾಹದಿಂದ ದಂದುವೆಚ್ಚಕ್ಕೆ ಕಡಿವಾಣ
ಕನ್ನಡಪ್ರಭ ವಾರ್ತೆ ಕೆಂಭಾವಿ ಜೂ.2
ಇಂದಿನ ದಿನಗಳಲ್ಲಿ ವಿವಾಹಗಳು ದುಂದು ವೆಚ್ಚಕ್ಕೆ ಕಾರಣವಾಗುತ್ತಿವೆ. ಅನಗತ್ಯವಾಗಿ ಮಾಡುವ ದುಂದು ವೆಚ್ಚಗಳನ್ನು ಕಡಿಮೆಗೊಳಿಸಿ ಸರಳ ವಿವಾಹಗಳು ನೆರವೇರಲು ಸಾಮೂಹಿಕ ಉಚಿತ ವಿವಾಹ ಕಾರ್ಯಕ್ರಮಗಳು ಮಾದರಿಯಾಗಿವೆ ಎಂದು ಶಾಸಕ ಗುರು ಪಾಟೀಲ ಶಿರವಾಳ ಹೇಳಿದರು.
ಸಮೀಪದ ನಗನೂರ ಗ್ರಾಮದ ನಗರೇಶ್ವರ ದೇವಸ್ಥಾನದಲ್ಲಿ ಭಾನುವಾರ ಖಂಡೆಪ್ಪ ತಾತಾನವರ ಪಟ್ಟಾಧಿಕಾರ ಮಹೋತ್ಸವ ಮತ್ತು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಭಾವೈಕ್ಯತೆಯ ಸಂಕೇತ: ಮಠ- ಮಾನ್ಯಗಳು ಇಂಥ ಮಾದರಿ ಕಾರ್ಯಕ್ರಮ ಏರ್ಪಡಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಬಡವರಿಗೆ ಇತ್ತೀಚಿನ ದಿನಗಳಲ್ಲಿ ವಿವಾಹ ಎಂದರೆ ಹಣಕಾಸಿನ ದೊಡ್ಡ ಸಮಸ್ಯೆಯಾಗುತ್ತಿವೆ. ಸಾಲ ಸೂಲ ಮಾಡಿ ವಿವಾಹ ಮಾಡುವುದು ಎಂದರೆ ಕಷ್ಟದ ಕೆಲಸ. ಇಂಥ ಉಚಿತ ವಿವಾಹ ಏರ್ಪಡಿಸುವುದರಿಂದ ಬಡವ-ಬಲ್ಲಿದ, ಜಾತಿ, ಧರ್ಮದ ಸಂಕೋಲೆಯಿಂದ ಹೊರಬರಲು ಸಹಾಯಕವಾಗುತ್ತದೆ. ಭಾವೈಕ್ಯತೆಯ ಸಂಕೇತ ಬಿಂಬಿಸುವ ಇಂಥ ಕಾರ್ಯಕ್ರಮಗಳು ಪ್ರತಿಯೊಂದು ಗ್ರಾಮಗಳಲ್ಲಿ ನಡೆಯಬೇಕು ಎಂದು ಹೇಳಿದರು.
119 ಜೋಡಿ ದಾಂಪತ್ಯಕ್ಕೆ: ಈ ಸಂದರ್ಭದಲ್ಲಿ 119 ಜೋಡಿ ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂತನ ಪೀಠಾಧಿಪತಿ ಖಂಡೆಪ್ಪ ತಾತಾ ವಹಿಸಿದ್ದರು. ಕಡಗಂಚಿ ಮಠದ ಡಾ. ವೀರಭದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಸಿದ್ಧರಾಮನಂದಪುರಿ ಕಾಗಿನೆಲೆ ಪೀಠ ತಿಂಥಣಿ, ಸೂಗೂರೇಶ್ವರ ಶಿವಾಚಾರ್ಯರು ನಗನೂರ, ಶಿವಾನಂದ ಸ್ವಾಮೀಜಿ ಸೊನ್ನ, ಮಹಾಂತ ಸ್ವಾಮೀಜಿ ಜೇರಟಗಿ, ಗುರುಪಾದೇಶ್ವರ ಸ್ವಾಮೀಜಿ ಶಹಾಪುರ, ಬಸಯ್ಯಸ್ವಾಮಿ ದಂಡಸೋಲಾಪುರ, ಶರಣಪ್ಪಶರಣರು ನಗನೂರ, ನಿಂಗಯ್ಯ ತಾತಾ, ಭೀಮರಾಯ ಪೂಜಾರಿ ಇದ್ದರು.