ಹಾಲಿನ ಹೊಳೆಗೆ ಕೊಚ್ಚಿಹೋಯ್ತು ಡೈರಿ ಬೊಕ್ಕಸ
-ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.2
ಆರಕ್ಕೇರದ... ಮೂರಕ್ಕಿಳಿಯದ... ಎಂಬಂತಿರುವ ಗುಲ್ಬರ್ಗ- ಬೀದರ್ ಹಾಲು ಒಕ್ಕೂಟಕ್ಕೆ ತನ್ನ ವ್ಯಾಪ್ತಿಯ ಗುಲ್ಬರ್ಗ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿನ ಕ್ಷೀರಕ್ರಾಂತಿ ವರವಾಗದೆ ಎರವಾಗಿರುವ ಬೆಳವಣಿಗೆ ತಡವಾಗಿ ಬೆಳಕಿಗೆ ಬಂದಿದ್ದು, ಇದರಿಂದಾಗಿ ಡೈರಿ ಬೊಕ್ಕಸ ಲಕ್ಷಾಂತರ ರುಪಾಯಿ ಹಾನಿ ಅನುಭವಿಸಿದೆ.
2012ರ ಸಾಲಿನ ಸೆಪ್ಟೆಂಬರ್ನಿಂದ ಡಿಸೆಂಬರ್ವರೆಗಿನ ನಾಲ್ಕು ತಿಂಗಳಲ್ಲಿ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲಿನ ಹೊಳೆ ಹರಿಯಿತು. ಏಕೆಂದರೆ- ನಬಾರ್ಡ್ ನೆರವಿನಿಂದ ಡಿಸಿಸಿ ಬ್ಯಾಂಕ್ ಕಾಮಧೇನು ಯೋಜನೆ ರೂಪಿಸಿ ರೈತರಿಗೆ ಸಾಲ ಕೊಟ್ಟು ಹೈನುಗಾರಿಕೆಗೆ ಅನುಕೂಲ ಮಾಡಿದ್ದರಿಂದ ಹಾಲು ಉತ್ಪಾದನೆಯಲ್ಲಿ ಭಾರಿ ಹೆಚ್ಚಳ ಕಂಡಿತ್ತು.
ಕಂಗಾಲಾದ ಡೈರಿ: ಅನಿರೀಕ್ಷಿತ ಈ ಬೆಳವಣಿಗೆ ಡೈರಿಯವರನ್ನು ಆತಂಕಕ್ಕೀಡು ಮಾಡಿದ್ದು ವಾಸ್ತವ. ಹೆಚ್ಚುವರಿ ಹಾಲನ್ನು ಅದ್ಹೇಗೆ ಬಳಸಬೇಕೆಂಬ ದೂರದೃಷ್ಟಿ ಯೋಜನೆಗಳೇ ಹೊಂದಿರದ ಡೈರಿ ಹೆಚ್ಚಿನ ಪ್ರೋತ್ಸಾಹಧನ ಕೊಟ್ಟು ಹಾಲು ಖರೀದಿಸಿತೇ ಹೊರತು ಅದರ ಸೂಕ್ತ ಮಾರುಕಟ್ಟೆ ಮಾಡುವಲ್ಲಿ ಮುಗ್ಗರಿಸಿತು. ಇದು ಡೈರಿಗೆ 41 ಲಕ್ಷಕ್ಕೂ ಹೆಚ್ಚು ಹಾನಿ ಸಂಭವಿಸಲು ಕಾರಣವಾಯ್ತು.
ಬಲ್ಲ ಮೂಲಗಳ ಪ್ರಕಾರ- 2012ರ ನಾಲ್ಕು ತಿಂಗಳಲ್ಲಿ ರೈತರಿಂದ ನಿತ್ಯ 20 ಸಾವಿರ ಲೀಟರ್ ಹಾಲು ಖರೀದಿಸಲಾಯ್ತು. ಹೀಗೆ ಖರೀದಿಸಿದ ಒಟ್ಟು 80 ಲಕ್ಷ ಲೀಟರ್ ಹಾಲನ್ನು ಮಾರುಕಟ್ಟೆ ಮಾಡಲು ಆಗಲೇ ಇಲ್ಲ. ಅದಕ್ಕೇ ಹಾಲಿನ ಪುಡಿ ಮಾಡಲು ಅದನ್ನು ಬಳಸಲಾಯ್ತು. ಈ ಪುಡಿ ಮಾಡುವ ಪ್ರಕ್ರಿಯೆಯಲ್ಲೇ ಡೈರಿ ಬೊಕ್ಕಸಕ್ಕೆ ಭಾರಿ ಹೊಡೆತ ಬಿತ್ತು.
ಬಿಜಾಪುರ ಜಿಲ್ಲೆಯ ಆಸಂಗಿ ಹತ್ತಿರದ ಡೆಂಪೋ ಡೈರಿ ಹಾಗೂ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಬಳಿಯ ಖಾಸಗಿ ಡೈರಿಗಳಿಗೆ ಪುಡಿ ಮಾಡಲು ತನ್ನ ಹಾಲನ್ನು ಗುಲ್ಬರ್ಗ ಡೈರಿ ಒಪ್ಪಿಸಿತ್ತು. ಈ ಹಂತದಲ್ಲಾದ ವಿಪರೀತ ಸಾಗಾಣಿಕೆ ವೆಚ್ಚ, ಇತರೆ ಖರ್ಚುಗಳಿಂದ ಡೈರಿ ಹಾನಿ ಅನುಭವಿಸಿತು.
ಪ್ರತಿ ಲೀ. ಹಿಂದೆ 10 ನಷ್ಟ: ಮೂಲಗಳ ಪ್ರಕಾರ ಪ್ರತಿ ಲೀಟರ್ ಹಾಲನ್ನು ಪುಡಿಯಾಗಿ ಪರಿವರ್ತಿಸುವುದರ ಹಿಂದೆ ಗುಲ್ಬರ್ಗ ಡೈರಿಗೆ 10 ರುಪಾಯಿಯಂತೆ (ಪ್ರತಿ ಲೀಟರ್ಗೆ) ಹಾನಿ ಸಂಭವಿಸಿದೆ. ಡೈರಿಯಿಂದ ಪುಡಿ ಮಾಡಲು ಬಳಸಿದ 80 ಲಕ್ಷ ಲೀಟರ್ ಪೂರ್ತಿ ಹಾಲು ಇದೇ ಲೆಕ್ಕದಲ್ಲೇ ಪುಡಿಯಾಗಿದ್ದರಿಂದ ಹಾನಿ. ಪ್ರಮಾಣವೂ ಹೆಚ್ಚಾಗಲೂ ಕಾರಣವಾಯ್ತು.
ರಾಜ್ಯದಲ್ಲಿರುವ ಹಾಲು ಒಕ್ಕೂಟಗಳಲ್ಲೇ ಹಸು ಹಾಗೂ ಎಮ್ಮೆ ಹಾಲಿಗೆ ಹೆಚ್ಚಿನ ಪ್ರೋತ್ಸಾಹ ಧನ ಕೊಡುತ್ತಿರುವುದು ಗುಲ್ಬರ್ಗ ಹಾಲು ಒಕ್ಕೂಟದವರೇ. ಕಾಮಧೇನು ಯೋಜನೆಯಡಿ ಹೆಚ್ಚಿನ ಬೆಲೆಗೇ ಹಾಲು ಖರೀದಿಸಿದ್ದೂ ಹಾನಿಯಾಗಲು ಪ್ರಮುಖ ಕಾರಣ ಎನ್ನಲಾಗಿದೆ.
ಜಿಲ್ಲೆಯಲ್ಲಿ ನಂದಿನಿ ಹಾಲಿಗೆ ಬೇಡಿಕೆ ಸಾಕಷ್ಟಿದ್ದರೂ ಪೂರೈಸಲಾಗುತ್ತಿಲ್ಲ. 1.50 ಲಕ್ಷ ಲೀಟರ್ ವಿವಿಧ ನಮೂನೆ ಹಾಲು ಪೈಕಿ ನಂದಿನಿ 60 ಸಾವಿರ ಲೀಟರ್ ಮಾರುಕಟ್ಟೆ ಹೊಂದಿದೆ. ತನ್ನ ಮಾರುಕಟ್ಟೆ ಜಾಲ ವಿಸ್ತರಣೆಗೆ ಅವಕಾಶಗಳಿದ್ದರೂ ನಂದಿನಿ ಹೆಚ್ಚು ಲಕ್ಷ ನೀಡದೆ ಹೋಗಿದ್ದೂ ಕ್ಷೀರಕ್ರಾಂತಿ ಹಿಂದುಳಿದ ನೆಲದಲ್ಲಿ ವ್ಯರ್ಥವಾಗಲು ಕಾರಣವಾಗಿದೆ.
ಇನ್ನಾದರೂ ಪಾಠ ಕಲಿಯುವರೇ?: ಕಳೆದ ಸಾಲಿನ ತಪ್ಪಿನಿಂದ ಗುಲ್ಬರ್ಗ ಡೈರಿ ಪಾಠ ಕಲಿತರೆ ಪಾಡು. ಏಕೆಂದರೆ- ಪ್ರಸಕ್ತ ವರ್ಷದಲ್ಲೂ 25 ಕೋಟಿಯಷ್ಟು ಆರ್ಥಿಕ ಅನುದಾನ ರೈತರಿಗೆ ವಿತರಿಸಿ ಹೈನುಗಾರಿಕೆಗೆ ಬೆಂಬಲಿಸಲು ಯೋಜಿಸಲಾಗುತ್ತಿದೆ. ಈ ಬಾರಿಯೂ ಸುಗ್ಗಿಯ ದಿನಗಳಲ್ಲಿ ಹಾಲು ಉಕ್ಕೇರುವುದು ಖಚಿತ. ಹೆಚ್ಚುವರಿ ಹಾಲಿನ ಸೂಕ್ತ ಮಾರುಕಟ್ಟೆ- ಸದ್ವಿನಿಯೋಗಕ್ಕೆ ಅಧಿಕಾರಿಗಳು, ಆಡಳಿತ ಮಂಡಳಿ ಈಗಿನಿಂದಲೇ ಎಚ್ಚೆತ್ತು ಕೆಲಸ ಮಾಡಬೇಕು. ಇಲ್ಲದಿದ್ದರೆ ಕಳೆದ ಸಾಲಿನಂತೆ ಡೈರಿ ಖಜಾನೆ ನಷ್ಟ ಅನುಭವಿಸುವುದರಲ್ಲಿ ಎರಡು ಮಾತಿಲ್ಲ.
ಸ್ಥಳೀಯವಾಗಿ ವಿವಿಧ ಇಲಾಖೆಗಳ ನಡುವಿನ ಸಮನ್ವಯ ಕೊರತೆಯೂ ಡೈರಿಗೆ ಕಾಡಿದೆ. ಬರುವ ದಿನಗಳಲ್ಲಿ ಇಂತಹ ಸಂವಹನ ಕೊರತೆಗಳನ್ನು ಮೆಟ್ಟಿ ನಿಂತು ಡೈರಿ ಹೆಚ್ಚುವರಿ ಹಾಲಿನ ಬಳಕೆಗೆ ಸಮರ್ಥ ಜಾಲ ರೂಪಿಸಸುವ ಸವಾಲನ್ನು ಅದ್ಹೇಗೆ ಎದುರಿಸುವುದೋ ಕಾದುನೋಡಬೇಕಾಗಿದೆ.