ಹೊಸ ಮೊರಾರ್ಜಿ ಶಾಲೆಗೆ ಪ್ರವೇಶ ಸ್ಥಗಿತ
ನಾರಾಯಣ ಹೆಗಡೆ
ಯಾದಗಿರಿ: ರಾಜ್ಯಾದ್ಯಂತ ಪ್ರಸಕ್ತ ಶೈಕ್ಷಣಿಕ ಸಾಲಿಗಾಗಿ ಮಂಜೂರಾದ ಮೊರಾರ್ಜಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಿಗೆ ಜಿಲ್ಲಾ ಮಟ್ಟದಲ್ಲಿ ಈಗಾಗಲೇ ಕೌನ್ಸೆಲಿಂಗ್ ನಡೆದು ಪ್ರವೇಶ ಪಡೆದ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಈ ವರ್ಷದಿಂದಲೇ ಪ್ರವೇಶ ಪಡೆಯುವಂತೆ ಸೂಚಿಸಿದ್ದ ಸರ್ಕಾರ ಈಗ ಏಕಾಏಕಿಯಾಗಿ ಪ್ರವೇಶ ಪಡೆಯದಂತೆ ಸೂಚಿಸಿದೆ.
ಹಿಂದಿನ ಬಿಜೆಪಿ ಸರ್ಕಾರ 2013-14ನೇ ಸಾಲಿಗಾಗಿ ರಾಜ್ಯಾದ್ಯಂತ 50 ಮೊರಾರ್ಜಿ ವಸತಿ ಶಾಲೆ, 8 ಅಟಲ್ ಬಿಹಾರಿ ವಾಜಪೇಯಿ ಮಾದರಿ ಶಾಲೆ ಹಾಗೂ 12 ಏಕಲವ್ಯ ಶಾಲೆಗಳನ್ನು ಮಂಜೂರು ಮಾಡಿತ್ತು. ಈ ವಸತಿ ಶಾಲೆಗಳು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಡಿಯಲ್ಲಿ ನಿರ್ವಹಿಸಲಾಗುತ್ತಿತ್ತು. ಶೈಕ್ಷಣಿಕ ವರ್ಷದ ಆರಂಭಕ್ಕೂ ಮೊದಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿ, ಹೊಸ ವಸತಿ ಶಾಲೆಗಳಿಗೆ 6ನೇ ತರಗತಿಗಾಗಿ ಮಕ್ಕಳ ಪ್ರವೇಶ ಪಡೆಯುವಂತೆ ನಿರ್ದೇಶನ ನೀಡಿತ್ತು.
ಅದರಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಕಳೆದ ಒಂದು ವಾರದಿಂದ ಕೌನ್ಸೆಲಿಂಗ್ ಕೂಡ ಆರಂಭಿಸಿದ್ದರು. ಕೆಲ ಜಿಲ್ಲೆಗಳಲ್ಲಿ ಕೌನ್ಸೆಲಿಂಗ್ ಮುಗಿದಿದ್ದು, ವಿದ್ಯಾರ್ಥಿಗಳು ಪ್ರವೇಶವನ್ನೂ ಪಡೆದಿದ್ದಾರೆ. ಈ ಮಧ್ಯೆ ಎರಡು ದಿನಗಳ ಹಿಂದೆ ಹಿರಿಯ ಅಧಿಕಾರಿಗಳು ಮೌಖಿಕವಾಗಿ ಸೂಚನೆ ನೀಡಿ, ಹೊಸದಾಗಿ ಮಂಜೂರಾದ ವಸತಿ ಶಾಲೆಗಳಿಗೆ ಪ್ರವೇಶ ಪಡೆಯದಂತೆ ತಿಳಿಸಿದ್ದಾರೆ. ಇದರಿಂದ ಕೆಲ ಜಿಲ್ಲೆಗಳಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ.
ಅತಂತ್ರ ವಿದ್ಯಾರ್ಥಿಗಳು: ಊರಿನ ಸಮೀಪದಲ್ಲೇ ವಸತಿ ಶಾಲೆ ಆರಂಭವಾಗುತ್ತದೆ ಎಂದು ತಿಳಿದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ಸಮುದಾಯಕ್ಕೆ ಸೇರಿದ ಪಾಲಕರು ಮಕ್ಕಳನ್ನು ಹೊಸ ಶಾಲೆಗೆ ಕಳುಹಿಸಲು ತಯಾರಿ ನಡೆಸಿದ್ದರು. ಅದರಂತೆ ಸಂಬಂಧಪಟ್ಟ ಇಲಾಖೆ ನೀಡಿದ ಪ್ರಕಟಣೆಯಂತೆ 5ನೇ ತರಗತಿ ಪಾಸಾದ ವಿದ್ಯಾರ್ಥಿಗಳು ಕೌನ್ಸೆಲಿಂಗ್‌ಗೆ ಹಾಜರಾಗಿದ್ದರು. ಪ್ರತಿ ಶಾಲೆಯಲ್ಲಿ ತಲಾ 50 ಮಕ್ಕಳಿಗೆ ಪ್ರವೇಶ ನೀಡಲಾಗುತ್ತಿತ್ತು. ಕೌನ್ಸೆಲಿಂಗ್‌ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ಅನೇಕರು ಪ್ರವೇಶ ಪಡೆದಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಅನೇಕ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇನ್ನೂ ಕೆಲ ಜಿಲ್ಲೆಗಳಲ್ಲಿ ಸರ್ಕಾರ ಸೂಚನೆ ಮೇರೆಗೆ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ಈ ಸಂಬಂಧ ವಿದ್ಯಾರ್ಥಿಗಳಿಗೆ ಯಾವುದೇ ಮುನ್ಸೂಚನೆ ನೀಡದಿರುವುದು ಆಶ್ಚರ್ಯ ಸಂಗತಿಯಾಗಿದೆ. ಪ್ರವೇಶ ಬಯಸಿ ಬಂದ ವಿದ್ಯಾರ್ಥಿಗಳನ್ನು ಅಧಿಕಾರಿಗಳು ವಾಪಸ್ ಕಳುಹಿಸುತ್ತಿದ್ದು, ಪಾಲಕರು ಹಾಗೂ ವಿದ್ಯಾರ್ಥಿಗಳು ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ.
ಪೇಚಿಗೆ ಸಿಲುಕಿರುವ ಅಧಿಕಾರಿಗಳು: ಪ್ರವೇಶ ನೀಡುವಂತೆ ಮೊದಲು ಸೂಚಿಸಿ ಎರಡು ದಿನಗಳ ಹಿಂದಷ್ಟೇ ಪ್ರವೇಶ ನೀಡದಂತೆ ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ. ಈಗಾಗಲೇ ಪ್ರವೇಶ ಪಡೆದ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರ ಪ್ರಶ್ನೆಗೆ ಉತ್ತರಿಸಲಾಗದೇ ತಡವರಿಸುತ್ತಿದ್ದಾರೆ. ಅಲ್ಲದೇ ಯಾವ ಕಾರಣಕ್ಕಾಗಿ ಪ್ರವೇಶ ನೀಡುವುದಿಲ್ಲ ಎಂಬ ಕುರಿತು ಲಿಖಿತ ಆದೇಶವೂ ಸ್ಥಳೀಯ ಅಧಿಕಾರಿಗಳಿಗೆ ಬಾರದ್ದರಿಂದ ತೊಂದರೆಗೆ ಸಿಲುಕಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳ ಮೌಖಿಕ ಸೂಚನೆಯನ್ನು ಪಾಲಿಸದಿರಲೂ ಸಾಧ್ಯವಾಗುತ್ತಿಲ್ಲ. ಆದರೆ ಇತ್ತ ಪಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪ್ರವೇಶ ಪಡೆದು ಈಗ ನಿರಾಕರಿಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಈ ಸಂಬಂಧ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಮನಗೌಡರನ್ನು ಕೇಳಿದಾಗ, ಇದು ನಮಗೂ ತಲೆನೋವಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ಕೌನ್ಸೆಲಿಂಗ್ ಕಾರ್ಯ ಪೂರ್ಣಗೊಂಡು ಕೆಲ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಗುಲ್ಬರ್ಗ, ಬೀದರ್ ಮುಂತಾದ ದೊಡ್ಡ ಜಿಲ್ಲೆಗಳಲ್ಲಿ ಕೌನ್ಸೆಲಿಂಗ್ ಅರ್ಧಕ್ಕೆ ನಿಲ್ಲಿಸಲಾಗಿದೆ. ಆದರೆ ಯಾದಗಿರಿಯಲ್ಲಿ ಪ್ರಕ್ರಿಯೆ ಮುಗಿದ ಮೇಲೆ ಹಿರಿಯ ಅಧಿಕಾರಿಗಳು ಹೊಸ ವಸತಿ ಶಾಲೆಗಳಿಗೆ ಪ್ರವೇಶ ಬೇಡ ಎಂದು ಹೇಳಿದ್ದಾರೆ. ಕಟ್ಟಡ ಇನ್ನಿತರ ಮೂಲಸೌಲಭ್ಯ ಇಲ್ಲದೇ ಶಾಲೆ ಆರಂಭಿಸುವುದು ಬೇಡ ಎಂದು ತಿಳಿಸಿದ್ದಾರೆ. ಈ ಸೂಚನೆಯನ್ನು 15 ದಿನ ಹಿಂದೆ ನೀಡಿದ್ದರೆ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಇದನ್ನು ಉಸ್ತುವಾರಿ ಸಚಿವರ ಗಮನಕ್ಕೆ ತಂದು ಮುಂದೇನು ಮಾಡಬೇಕು ಎಂಬುದರ ಬಗ್ಗೆ ಗಮನ ಹರಿಸಲಾಗುವುದು ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಮುಂದಾಲೋಚನೆ ಇಲ್ಲದೇ ಸರ್ಕಾರ ಕೈಗೊಂಡ ನಿರ್ಧಾರದಿಂದ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳಿಗೆ ಸೇರಿದ ಮಕ್ಕಳು ಈಗ ಅತಂತ್ರರಾಗಿದ್ದಾರೆ.