ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದಿನಿಂದ ರಾಜಧಾನಿಗೆ ಸ್ಲೀಪರ್ ಕೋಚ್ ಬಸ್

Lingaraj Badiger
Updated On : 4 Jun 2013, 11:11 am

ಯಾದಗಿರಿ: ಯಾದಗಿರಿ- ಬೆಂಗಳೂರು ಮಧ್ಯೆ ಸ್ಲೀಪರ್ ನಾನ್ ಎಸಿ ಹೊಸ ಸಾರಿಗೆಯನ್ನು ಈಶಾನ್ಯ ಸಾರಿಗೆ ಸಂಸ್ಥೆಯಿಂದ ಪ್ರಾರಂಭಿಸಲಾಗಿದೆ. ಈ ಸೇವೆಯು ಜೂ. 4ರಿಂದಲೇ ಆರಂಭವಾಗುತ್ತಿದೆ. ಯಾದಗಿರಿ ಬಸ್ ನಿಲ್ದಾಣದಿಂದ ಸಂಜೆ 7 ಗಂಟೆಗೆ ಬಿಟ್ಟು ಬೆಂಗಳೂರಿಗೆ ಮರುದಿನ ಬೆಳಗ್ಗೆ 6.15ಕ್ಕೆ ತಲುಪಲಿದೆ. ಯಾದಗಿರಿಯಿಂದ ವಾಯಾ ಶಹಾಪುರ, ಸುರಪುರ, ಲಿಂಗಸ್ಗೂರು, ಸಿಂಧನೂರು, ಬಳ್ಳಾರಿ, ಚಳ್ಳಕೆರೆ, ತುಮಕೂರು ಮಾರ್ಗವಾಗಿ ಬಸ್ಸು ಸಂಚರಿಸಲಿದೆ. ಬೆಂಳೂರಿನಿಂದ ರಾತ್ರಿ 8.30ಕ್ಕೆ ಬಿಟ್ಟು ಯಾದಗಿರಿಗೆ ಬೆ.7.15ಕ್ಕೆ ತಲುಪುತ್ತದೆ. ಯಾದಗಿರಿಯಿಂದ ಬೆಂಗಳೂರಿಗೆ ಪ್ರಯಾಣ ದರ 720 ಇರುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷಕುಮಾರ ತಿಳಿಸಿದ್ದಾರೆ.
ಜಿಲ್ಲಾ ಸಾಹಿತ್ಯ
ಸಮ್ಮೇಳನ ಮುಂದಕ್ಕೆ
ಸುರಪುರ: ಜೂನ್ ಎರಡನೇ ವಾರದಲ್ಲಿ ನಡೆಯಬೇಕಾಗಿದ್ದ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಸಮಯದ ಅಭಾವ ಹಿನ್ನೆಲೆ ಮುಂದೂಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಶಾಂತಪ್ಪ ಬೂದಿಹಾಳ ತಿಳಿಸಿದ್ದಾರೆ. ರಂಗಂಪೇಟೆಯ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಸಭೆಯಲ್ಲಿ ಸದಸ್ಯರ ಒಪ್ಪಿಗೆ ಮೇರೆಗೆ ಜೂನ್ ಎರಡನೇ ವಾರದಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರನ್ನೇ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಮಾಡಬೇಕಾಗಿತ್ತು. ಅಲ್ಲದೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಮೂವರು ಶಾಸಕರ ಅನುಮತಿ ಪಡೆಯಬೇಕು ಮತ್ತು ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಒಪ್ಪಿಗೆ ಪಡೆಯಬೇಕು. ಸ್ಮರಣ ಸಂಚಿಕೆ ಬಿಡುಗಡೆಗಾಗಿ ಸಿದ್ಧತೆ, ಸಮಿತಿಗಳ ರಚನೆ, ಇಷ್ಟೆಲ್ಲಾ ಕಾರ್ಯವನ್ನು ಕೆಲವೇ ದಿನಗಳಲ್ಲಿ ಮಾಡಿಕೊಂಡು ಸಮ್ಮೇಳನ ನಡೆಸುವುದು ಕಷ್ಟವೆಂದು ಭಾವಿಸಿ ಸಮ್ಮೇಳನ ಮುಂದೂಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಮಾನತು ಆದೇಶ
ಹಿಂಪಡೆಯಲು ಆಗ್ರಹ
ಸುರಪುರ: ಯಕ್ತಾಪೂರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅನ್ಸರ್ ಪಟೇಲ್ ಅವರ ಅಮಾನತು ಆದೇಶವನ್ನು ಕೂಡಲೇ ಹಿಂಪಡೆದು ಸೇವೆಯಲ್ಲಿ ಮುಂದುವರೆಸಬೇಕೆಂದು ಕರವೇ ತಾಲೂಕು ಘಟಕ ಆಗ್ರಹಿಸಿದೆ. ಅನ್ಸರ್ ಪಟೇಲ್ ಒಬ್ಬ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಯಾಗಿದ್ದಾರೆ. ಅವರು ಅನೇಕ ಗ್ರಾಪಂಗಳಲ್ಲಿ ಕೆಲಸ ಮಾಡಿದ್ದಾರೆ. ಎಲ್ಲಿಯೂ ಭ್ರಷ್ಟತೆಗೆ ಅವಕಾಶ ಮಾಡಿಕೊಟ್ಟಿಲ್ಲ. ಅವರ ದಕ್ಷತೆಯನ್ನು ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಪಿತೂರಿ ನಡೆಸಿ ಇಲ್ಲ ಸಲ್ಲದ ಆರೋಪ ಮಾಡಿ ದೂರು ಸಲ್ಲಿಸಿದ್ದಾರೆ. ಆದರೆ ದೂರನ್ನು ಕೂಲಂಕಷವಾಗಿ ಪರಿಶೀಲಿಸದೆ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಯಂತೆ ವರ್ತಿಸಿರುವ ಅಧಿಕಾರಿಗಳು ಪಟೇಲರನ್ನು ಅಮಾನತುಗೊಳಿಸಿರುವುದು ಖಂಡನೀಯ ಎಂದು ತಾಪಂ ಇಒಗೆ ದೂರಿದೆ. 3 ದಿನದಲ್ಲಿ ಅಮಾನತು ಆದೇಶ ಹಿಂಪಡೆಯಬೇಕು. ಇಲ್ಲವಾದಲ್ಲಿ ಕರವೇಯಿಂದ ಹೋರಾಟ ಎದುರಿಸಬೇಕಾಗುತ್ತದೆ ಎಂದು ಸಂಘಟನೆಯ ಅಧ್ಯಕ್ಷ ವೆಂಕಟೇಶ ಪ್ಯಾಪ್ಲಿ, ಉಪಾಧ್ಯಕ್ಷ ಅಂಬ್ಲಯ್ಯ, ಕಾರ್ಯದರ್ಶಿ ವೆಂಕಟೇಶನಾಯಕ ಬೈರಿಮಡ್ಡಿ ಎಚ್ಚರಿಸಿದ್ದಾರೆ.

ಮೊರಾರ್ಜಿ, ಅಟಲ್, ಏಕಲವ್ಯ ಶಾಲೆಗಳ ಪ್ರವೇಶಕ್ಕಾಗಿ ಕರವೇ ಆಗ್ರಹ
ಕನ್ನಡಪ್ರಭ ವಾರ್ತೆ  ಯಾದಗಿರಿ  ಜೂ.3
ಜಿಲ್ಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮಂಜೂರಾದ ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಿಗೆ ಜಿಲ್ಲಾ ಮಟ್ಟದಲ್ಲಿ ಈಗಾಗಲೇ ಕೌನ್ಸೆಲಿಂಗ್ ನಡೆದು ಆಯ್ಕೆಯಾದ 280 ವಿದ್ಯಾರ್ಥಿಗಳು ಈಗ ಅತಂತ್ರರಾಗಿದ್ದಾರೆ. ಈ ವರ್ಷದಿಂದಲೇ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕೆಂದು ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
 ಬಿಜೆಪಿ ಸರ್ಕಾರ ಈ ಶೈಕ್ಷಣಿಕ ಸಾಲಿಗಾಗಿ ರಾಜ್ಯಾದ್ಯಂತ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಅಟಲ್ ಬಿಹಾರಿ ವಾಜಪೇಯಿ ಮಾದರಿ ಶಾಲೆ ಹಾಗೂ ಏಕಲವ್ಯ ಶಾಲೆಗಳನ್ನು ಮಂಜೂರು ಮಾಡಿತ್ತು. ಶೈಕ್ಷಣಿಕ ವರ್ಷದ ಆರಂಭಕ್ಕೂ ಮೊದಲೇ ಸಂಬಂದಪಟ್ಟ ಇಲಾಖೆ ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿ, ಹೊಸ ವಸತಿ ಶಾಲೆಗಳಿಗೆ 6ನೇ ತರಗತಿಗಾಗಿ ಮಕ್ಕಳ ಪ್ರವೇಶ ಪಡೆಯುವಂತೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ವಸತಿ ಶಾಲೆಗಳಿಗೆ ಕೌನ್ಸೆಲಿಂಗ್ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ ಈಗ ಸರ್ಕಾರ ಆದೇಶ ಹೊರಡಿಸಿ ಹೊಸ ವಸತಿ ಶಾಲೆಗಳಿಗೆ ಪ್ರವೇಶ ಪಡೆಯದಂತೆ ತಿಳಿಸಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಲಿದೆ. ಆದ್ದರಿಂದ ಕೂಡಲೇ ಹೊಸ ವಸತಿ ಶಾಲೆಗಳನ್ನು ಪ್ರಾರಂಭಿಸಬೇಕೆಂದು ಕರವೇ ಜಿಲ್ಲಾ ಘಟಕ ಆಗ್ರಹಿಸುತ್ತದೆ. ಒಂದು ವೇಳೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಸರ್ಕಾರದ ವಿರುದ್ಧ ಜಿಲ್ಲಾದ್ಯಂತ ಕರವೇ ಉಗ್ರವಾದ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement