ಕುಡಿತ ಅಮಲಿನಲ್ಲಿ ಕುತ್ತಿಗೆ ಕೊಯ್ದುಕೊಂಡ ಭೂಪ!
ಗುಲ್ಬರ್ಗ/ಶಹಾಬಾದ್: ವಾಡಿ ಪಟ್ಟಣದಲ್ಲಿ ಮದುವೆಗೆ ಬಂದ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಕುತ್ತಿಗೆಗೆ ಈಳಿಗೆಯಿಂದ ಕೊಯ್ದುಕೊಂಡು ಗಾಯ ಮಾಡಿಕೊಂಡ ಘಟನೆ ನಡೆದಿದೆ. ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ ಮಹಾದೇವಪ್ಪ ನೀಲಪ್ಪ ಹಡಪದ ಗಾಯ ಮಾಡಿಕೊಂಡ ವ್ಯಕ್ತಿ. ವಾಡಿ ಪಟ್ಟಣದಲ್ಲಿ ತಮ್ಮ ಬಂಧುಗಳ ಮನೆಗೆ ಭಾನುವಾರ ನಡೆಯುವ ಮದುವೆಗೆ ಆಗಮಿಸಿದ ವ್ಯಕ್ತಿ ಕುಡಿದ ಅಮಲಿನಲ್ಲಿ ಶನಿವಾರ ತಡರಾತ್ರಿ ತರಕಾರಿ ಕತ್ತರಿಸಲು ತಂದಿಟ್ಟ ಈಳಿಗೆಯಿಂದ ಕುತ್ತಿಗೆಯನ್ನು ಕೊಯ್ದುಕೊಂಡಿ ಗಾಯಗೊಂಡಿದ್ದಾನೆ. ಗಾಯಗೊಂಡ ಅವನನ್ನು ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗೆ ಗುಲ್ಬರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚೇತರಿಸಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
ನಿಗಮ, ಮಂಡಳಿಯಲ್ಲಿ ಕಾರ್ಯಕರ್ತರಿಗೆ ಅವಕಾಶ ಸಿಗಲಿ
ಮೈಸೂರು: ನಿಗಮ, ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳ ನೇಮಕಾತಿಯಲ್ಲಿ ಪಕ್ಷದ ಶಾಸಕರ ಬದಲು, ಕಾರ್ಯಕರ್ತರಿಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಸಂಸದ ಎಚ್. ವಿಶ್ವನಾಥ್ ಅಭಿಪ್ರಾಯಪಟ್ಟರು. ಶಾಸಕರಿಗೆ ಈಗಾಗಲೇ ಅವಕಾಶ ನೀಡಲಾಗಿದೆ. ಹೀಗಾಗಿ, ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಕಾರ್ಯಕರ್ತರಿಗೆ ಅವಕಾಶ ನೀಡಬೇಕು. ಅದರಲ್ಲೂ ಈಗಾಗಲೇ ಅಧಿಕಾರ ಪಡೆವದರನ್ನು ಹೊರತುಪಡಿಸಿ, ಹಿಂದುಳಿದವ ವರ್ಗ, ಪರಿಶಿಷ್ಟರು ಹಾಗೂ ಮೇಲ್ವರ್ಗದಲ್ಲಿರುವ ಅತಿ ಕಡಿಮೆ ಜನಸಂಖ್ಯೆ ಇರುವ ಜಾತಿಯವರಿಗೆ ಅವಕಾಶ ನೀಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ದೇವರಾಜ ಅರಸು ನಂತರ ಹಿಂದುಳಿದ ನೇತಾರ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿರುವುದು ಸಂತೋಷ ತಂದಿದೆ ಎಂದರು.
ಅರ್ಹತೆಗೆ ಆದ್ಯತೆ: ಸ್ಪಷ್ಟನೆ
ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ವೇಳೆ ಯಾವುದೇ ರಾಜಕೀಯ ಪಕ್ಷಗಳ ಹಾಗೂ ಸಂಘ-ಸಂಸ್ಥೆಗಳ ಒತ್ತಡಕ್ಕೆ ಮಣಿದು ನೇಮಕಾತಿ ಮಾಡಿಲ್ಲ ಎಂದು ಕುಲಸಚಿವ ಪ್ರೊ.ವಿಷ್ಣುಕಾಂತ ಚಟಪಲ್ಲಿ ಸ್ಪಷ್ಟಪಡಿಸಿದ್ದಾರೆ. ನೇಮಕಾತಿ ಪ್ರಕ್ರಿಯೆ ವೇಳೆ ಅರ್ಹತೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದೆ ಹೊರತು ಬೇರೆ ಯಾವುದೇ ಪ್ರಭಾವಕ್ಕೆ ಒಳಗಾಗಿರುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏತ ನೀರಾವರಿ ಯೋಜನೆಗೆ ಆದ್ಯತೆ
ಆನೇಕಲ್ಲು: ದಕ್ಷಿಣ ಪಿನಾಕಿನಿ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಗೆ ನೀರಾವರಿ ಸೌಲಭ್ಯ ಒದಗಿಸಲು ಶ್ರಮಿಸುವುದಾಗಿ ಶಾಸಕ ಬಿ.ಶಿವಣ್ಣ ಭರವಸೆ ನೀಡಿದ್ದಾರೆ. ಅವರು ತಾಲೂಕಿನ ಯಮರೆ ಗ್ರಾಮದ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿ ತಾಲೂಕಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಹಲವು ಯೋಜನೆಗಳ ಬಗ್ಗೆ ಪರಿಶೀಲನೆ ನಡೆದಿದೆ. ಕಾವೇರಿ ನೀರು ಸರಬರಾಜಿಗಾಗಿ ಪ್ರಸ್ತಾಪ ಸಲ್ಲಿಸಿದ್ದು ಕಾರ್ಯಗತ ವಾಗುವವರೆವಿಗೂ ಅವಿರತ ಹೋರಾಟ ನಡೆಸುವುದಾಗಿ ತಿಳಿಸಿದರು.