ಜೀಪ್ ಉರುಳಿ ನಾಲ್ವರಿಗೆ ಗಾಯ
ಗುಲ್ಬರ್ಗ: ಜೀಪೊಂದು ಉರುಳಿ ಬಿದ್ದ ಪರಿಣಾಮ ಚಾಲಕ ಸೇರಿ ನಾಲ್ವರು ಗಾಯಗೊಂಡ ಘಟನೆ ಶಹಾಬಾದ್ ವಾಡಿ ರಸ್ತೆಯ ಮಧ್ಯದಲ್ಲಿ ನಡೆದಿದೆ. ದೊಡ್ಡಮ್ಮ ಗಂಡ ಸಂಜೀವಪ್ಪ ಯರಗೋಳ ಮತ್ತು ಆಕೆಯ ಮಗ ನಿಂಗಪ್ಪ ಮತ್ತು ಜೀಪ್ ಚಾಲಕ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ದೊಡ್ಡಮ್ಮ ಎಂಬುವರು ತಮ್ಮ ಮಗನೊಂದಿಗೆ ಫಿರೋಜಾಬಾದ್ಗೆ ಹೋಗಲು ಜೀಪಿನಲ್ಲಿ ಕುಳಿತು ಹೋಗುತ್ತಿದ್ದಾಗ ಚಾಲಕ ತೀವ್ರವಾಗಿ ಚಲಾಯಿಸಿರುವುದರಿಂದ ಶಹಾಬಾದ್ ಮತ್ತು ವಾಡಿ ರಸ್ತೆ ಮಧ್ಯದಲ್ಲಿ ಜೀಪ್ ಉರುಳಿ ಬಿದ್ದಿದೆ. ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕಿಗೆ ಗಾಯ
ಗುಲ್ಬರ್ಗ: ಜೀಪೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕಿಯೊಬ್ಬಳು ಗಾಯಗೊಂಡ ಘಟನೆ ರೋಜಾ ಗೋಸ್ ಮಾರ್ಕೆಟ್ ಬಳಿ ನಡೆದಿದೆ. 6 ವರ್ಷದ ಬಾಲಕಿ ಉಮ್ಮೆ ಸುವೇಬಾ ರಸ್ತೆಯ ಮೇಲೆ ಹೋಗುತ್ತಿದ್ದಾಗ ಜೀಪ್ ಚಾಲಕ ಡಿಕ್ಕಿ ಹೊಡೆದು ಗಾಯಗೊಳಿಸಿದ್ದಾನೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗ-ನಾಣ್ಯ ಕಳವು
ಗುಲ್ಬರ್ಗ: ನಗರದ ಶಾಂತಿ ನಗರದಲ್ಲಿರುವ ಮನೆಯೊಂದರ ಬೀಗ ಮುರಿದು ಕಳ್ಳರು 45 ಸಾವಿರ ಮೌಲ್ಯದ ನಗ- ನಾಣ್ಯ ದೋಚಿಕೊಂಡು ಹೋದ ಘಟನೆ ಭಾನುವಾರ ನಡೆದಿದೆ. ಅಫ್ತಾಬ್ ತಂದೆ ಅಬ್ದುಲ್ ರಜಾಕ್ ಪಟೇಲ್ ಎಂಬುವರ ಮನೆಯೇ ಕಳ್ಳತನವಾಗಿರುವುದು. ಇವರು ಅಫಜಲ್ಪುರಕ್ಕೆ ಹೋದ ಸಂದರ್ಭದಲ್ಲಿ ಕಳ್ಳರು ಮನೆಯ ಬೀಗ ಮುರಿದು ಮನೆಯಲ್ಲಿದ್ದ 30 ಸಾವಿರ, 15 ಸಾವಿರ ಮೌಲ್ಯದ ಬಂಗಾರದ ಜುಮಕಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.