'ಜೈವಿಕ ಇಂಧನ ಬೆಳೆಯಿಂದ ಎರಡು ಲಾಭ'
ಯಾದಗಿರಿ: ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ನೀಡಿರುವ ನಿಯಮಗಳ ಪ್ರಕಾರ ಪ್ರತಿ ಗ್ರಾಪಂನಲ್ಲಿ ರೈತರಿಗೆ ಸಸಿಗಳನ್ನು ಬೆಳೆಸುವುದರ ಬಗ್ಗೆ ಮತ್ತು ಪೋಷಣೆಯಲ್ಲಿ ಅವರ ಜವಾಬ್ದಾರಿಗಳ ಬಗ್ಗೆ ಸ್ವಯಂ ಸೇವಾ ಸಂಸ್ಥೆಯವರು ಪ್ರೇರಣೆ ನೀಡಬೇಕು. ತಾಲೂಕಿನಲ್ಲಿ ಜೈವಿಕ ಇಂಧನ ಯೋಜನೆಯನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕೆಂದು ತಾಪಂ ಇಒ ಶಿವರಾಮ ಚವ್ಹಾಣ ಹೇಳಿದರು.
ಇಲ್ಲಿಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಜೈವಿಕ ಇಂಧನ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯಿಂದ ಸಣ್ಣ, ಅತೀ ಸಣ್ಣ ರೈತರು ಹಾಗೂ ದೊಡ್ಡ ರೈತರಿಗಾಗಿ ಸುವರ್ಣ ಭೂಮಿ, ಹಸಿರು ಹೊನ್ನು, ಬರಡು ಬಂಗಾರ, ಹಸಿರು ಕರ್ನಾಟಕ ಯೋಜನೆಗಳ ಅಡಿಯಲ್ಲಿ ಪ್ರತಿ ಗ್ರಾಪಂ.ಗಳಲ್ಲಿ ಸ್ವಯಂ ಸೇವಾ ಸಂಸ್ಥೆಯವರು ಪ್ರಚಾರಾಂದೋಲನ ಕೈಗೊಂಡು ರೈತರಿಗೆ ಜೈವಿಕ ಇಂಧನ ಸಸಿಗಳನ್ನು ಬೆಳೆಸಲು ಪ್ರೋತ್ಸಾಹಿಸಬೇಕು ಮತ್ತು ಇದರಿಂದ ದೊರೆಯುವ ಲಾಭಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ಜೈವಿಕ ಇಂಧನ ಬಳಕೆಗೆ ಸಲಹೆ: ಗುಲ್ಬರ್ಗದ ಹೈ-ಕ ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್ ಪ್ರತಿನಿಧಿ ಸೈಯದ್ ಖಮರುಲ್ ಮಾತನಾಡಿ, ನಮ್ಮ ನಾಡಿನ ಪರಿಸರ ಸಮತೋನವನ್ನು ಕಾಪಾಡಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು. ಜೈವಿಕ ಇಂಧನ ಬೆಳೆ ಬೆಳೆಯುವುದರಿಂದ ಆರ್ಥಿಕವಾಗಿಯೂ ಲಾಭ ಗಳಿಸಬಹುದು ಎಂದು ತಿಳಿಸಿದರು.
ಜೈವಿಕ ಇಂಧನ ಯೋಜನೆ ಜಿಲ್ಲಾ ಸಂಯೋಜಕ ಅನಂತರೆಡ್ಡಿ ಮಾತನಾಡಿ, ಪ್ರತಿ ಗ್ರಾಪಂಗೆ ನೇಮಕವಾಗಿರುವ ಸ್ವಯಂ ಸೇವಾ ಸಂಸ್ಥೆಯವರು ಜೈವಿಕ ಇಂಧನದ ಯೋಜನಗಳನ್ನು ರೈತರ ಮತ್ತು ಸಮುದಾಯದ ಮುಖಾಂತರವಾಗಿ ಸಸಿಗಳನ್ನು ಬೆಳಿಸಿ ಇಂಧನದ ಮಹತ್ವವನ್ನು ಮನವರಿಕೆ ಮಾಡಿಕೊಡಬೇಕೆಂದು ಹೇಳಿದರು. ಈ ವೇಳೆ ಸಹಾಯಕ ನಿರ್ದೇಶಕ ಶಂಕರರಾವ್, ಆನಂದರಾವ್, ಕಾಶಿನಾಥ ಇದ್ದರು. ಸೈದಪ್ಪ ಗುತ್ತೆದಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.