ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಡೆಂಘೀ ನಿಗ್ರಹಕ್ಕೆ ಕ್ರಿಯಾಯೋಜನೆ: ಡಿಎಚ್‌ಒ

Lingaraj Badiger
Updated On : 5 Jun 2013, 11:18 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.4
ಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದರಿಂದ ಜಿಲ್ಲಾ ಆರೋಗ್ಯ ಇಲಾಖೆ ರೋಗ ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಕ್ರಿಯಾಯೋಜನೆ ರೂಪಿಸಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಶಿವರಾಜ ಸಜ್ಜನಶೆಟ್ಟಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಎಚ್‌ಐಟಿ ಸಭಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಜೇವರ್ಗಿ ತಾಲೂಕಿನ ಅಂಕಲಗಾ ಮತ್ತು ಆಂದೋಲಾ ಗ್ರಾಮಗಳಲ್ಲಿ ಎರಡು ಡೆಂಘೀ ಪ್ರಕರಣಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಈ ಹತೋಟಿಗೆ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದರು.
ನಗರದಲ್ಲೇ ರಕ್ತ ಪರೀಕ್ಷೆ ಸೌಲಭ್ಯ: ಸಂಶಯಾಸ್ಪದ ಡೆಂಘೀ ಮತ್ತು ಚಿಕೂನ್‌ಗುನ್ಯಾ ರೋಗ ಪ್ರಕರಣಗಳನ್ನು ಕಂಡು ಹಿಡಿಯಲು ರೋಗಿಯ ರಕ್ತ ಮಾದರಿ ಪರೀಕ್ಷೆ ಮಾಡಲು ಈ ಹಿಂದೆ ಬೀದರ್ ಜಿಲ್ಲೆಗೆ ಕಳುಹಿಸಲಾಗುತ್ತಿತ್ತು. ಕಳೆದ ಮೂರು ತಿಂಗಳಿಂದ ಗುಲ್ಬರ್ಗದ ಜಿಲ್ಲಾ ಸಮೀಕ್ಷಾ ಘಟಕದಲ್ಲಿ ರಕ್ತ ಮಾದರಿ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಸಜ್ಜನಶೆಟ್ಟಿ ಹೇಳಿದರು.
ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸಂಶಯಾಸ್ಪದ ಡೆಂಘೀ ಮತ್ತು ಚಿಕೂನ್‌ಗುನ್ಯಾ ರೋಗಿಗಳ ರಕ್ತ ಮಾದರಿಯನ್ನು ಜಿಲ್ಲಾ ಸಮೀಕ್ಷಾ ಘಟಕಕ್ಕೆ ಕಳುಹಿಸಿಕೊಡುವಂತೆ ತಿಳಿಸಲಾಗಿದೆ. ಇಲ್ಲಿವರೆಗೆ ಒಟ್ಟು 116 ರಕ್ತ ಮಾದರಿಗಳು ಕೇಂದ್ರಕ್ಕೆ ಬಂದಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಳೆದ ವರ್ಷ ಜಿಲ್ಲೆಯಲ್ಲಿ 4 ಡೆಂಘೀ ಪ್ರಕರಣ ಕಾಣಿಸಿಕೊಂಡಿದ್ದವು. ಈ ವರ್ಷ ಕೇವಲ ಎರಡು ಪ್ರಕರಣಗಳು ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆ ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಇಳಿಕೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ ಎಂದರು.
ಇಂದು ಕಾರ್ಯಾಗಾರ: ಜಿಲ್ಲೆಯ ಎಲ್ಲ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ಡೆಂಘೀ ಮತ್ತು ಚಿಕೂನ್‌ಗುನ್ಯಾ ಕುರಿತು ಮಾಹಿತಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜೂ.5ರಂದು ನಗರದ ಕುಟುಂಬ ಮತ್ತು ಕಲ್ಯಾಣ ಅಧಿಕಾರಿಗಳ ಆವರಣದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಕಾರ್ಯಾಗಾರದಲ್ಲಿ ಮಾಹಿತಿ ಪಡೆದ ಎಲ್ಲ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ತಮ್ಮ ವ್ಯಾಪ್ತಿಯ ಎಲ್ಲ ಬಡಾವಣೆಗಳಿಗೆ ತೆರಳಿ ಜಾಗೃತಿ ಮೂಡಿಸಲು ರೋಗ ಹರಡದಂತೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಜಿಲ್ಲೆಯ ಎಲ್ಲ ಗ್ರಾಮ ಮತ್ತು ನಗರಗಳಿಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಒಂದು ವಾರ ಕಾಲ ರೋಗ ಲಕ್ಷಣ ಮತ್ತು ಕೈಗೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳ ಕುರಿತು ಮುದ್ರಿಸಿರುವ ಕರಪತ್ರಗಳೊಂದಿಗೆ ಪ್ರತಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಿದ್ದಾರೆ ಎಂದರು.
ಗುಲ್ಬರ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಕೊಳಚೆ ಪ್ರದೇಶಗಳಲ್ಲಿ ಸ್ವಚ್ಛತೆ ಕೈಗೊಂಡು ರೋಗ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಆಯುಕ್ತರಿಗೆ ಮನವಿ ಮಾಡಲಾಗಿದೆ. ಅವರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಡೆಂಘೀ ಜ್ವರ: ಇದು ಇಡಿಸ್ ಈಜಿಪ್ಟೈ ಎಂಬ ಜಾತಿಯ ಸೊಳ್ಳೆಗಳ ಕಡಿತದಿಂದ ಒಬ್ಬರಿಂದೊಬ್ಬರಿಗೆ ಹರಡುವ ಒಂದು ವೈರಸ್ ಕಾಯಿಲೆ. ಈ ರೋಗಕ್ಕೆ ನಿಖರವಾದ ಔಷಧೋಪಚಾರ ಇಲ್ಲದಿರುವುದರಿಂದ ರೋಗದ ತಡೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ ಎಂದು ಡಾ. ಶಿವರಾಜ ಅಲಶೆಟ್ಟಿ ತಿಳಿಸಿದರು.
ರೋಗದ ಲಕ್ಷಣಗಳು: ಇಡಿಸ್ ಈಜಿಪ್ಟೈ ಎಂಬ ಜಾತಿಯ ಸೊಳ್ಳೆಗಳು ಮನೆಯ ಒಳಗಡೆ ಅಂದರೆ ಹೂದಾನಿಗಳ ನೀರಿನಲ್ಲಿ, ಏರ್ ಕೂಲರ್ ನೀರಿನಲ್ಲಿ, ಬಳಸಲು ಉಪಯೋಗಿಸುವ ತೊಟ್ಟಿಗಳಲ್ಲಿ ಹೆಚ್ಚಾಗಿ ಉತ್ಪತ್ತಿ ಆಗುತ್ತವೆ. ಈ ಜಾತಿಯ ಸೊಳ್ಳೆಗಳು ಮನುಷ್ಯನನ್ನು ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಇದ್ದಕ್ಕಿದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳಲಿದೆ.
ನಿಯಂತ್ರಣ ಕ್ರಮಗಳು: ಮನೆಯೊಳಗೆ ಮತ್ತು ಛಾವಣಿಯ ನೀರಿನ ತೊಟ್ಟಿಗಳಲ್ಲಿ ತಪ್ಪದೆ ವಾರಕ್ಕೊಮ್ಮೆ ನೀರನ್ನು ಖಾಲಿ ಮಾಡಿ ಒಣಗಿಸಿ ಮತ್ತೆ ಭರ್ತಿ ಮಾಡಿ ಭದ್ರವಾಗಿ ಮುಚ್ಚಳಿಕೆಯಿಂದ ಮುಚ್ಚಬೇಕು. ಮನೆಯ ಸುತ್ತು ಮುತ್ತಲೂ ತ್ಯಾಜ್ಯ ವಸ್ತುಗಳಲ್ಲಿ ಯಾವುದೇ ಕಾರಣಕ್ಕೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಒಡೆದ ಬಾಟಲಿ, ಟಿನ್, ಟೈರ್ ಇತ್ಯಾದಿಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಏರ್‌ಕೂಲರ್‌ಗಳಲ್ಲಿ ಹಾಗೂ ಬೆಂಕಿ ಆರಿಸಲು ಉಪಯೋಗಿಸುವ ಬಕೆಟ್‌ಗಳಲ್ಲಿರುವ ನೀರನ್ನು ಆಗಾಗ್ಗೆ ಬದಲಾಯಿಸುತ್ತಿರಬೇಕು.
ಮಲಗುವಾಗ ಸೊಳ್ಳೆ ಪರದೆ ತಪ್ಪದೇ ಉಪಯೋಗಿಸಬೇಕು. ಹಗಲಿನಲ್ಲಿಯೂ ಸೊಳ್ಳೆಗಳ ಕಡಿತದಿಂದ ರಕ್ಷಣೆ ಹೊಂದಬೇಕು ಎಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ. ಶ್ರೀಧರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement