ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪುರಪಿತೃಗಳಿಗಿಲ್ಲದ ಅಧಿಕಾರ; ವಿಲೇವಾರಿಯಾಗದ ತ್ಯಾಜ್ಯ

Lingaraj Badiger
Updated On : 5 Jun 2013, 11:21 am

ಕನ್ನಡಪ್ರಭ ವಾರ್ತೆ, ಯಾದಗಿರಿ, ಜೂ.3
ಕಳೆದ ಮೂರು ತಿಂಗಳಿಂದ ನಗರಸಭೆಗೆ ಆಯ್ಕೆಯಾದ ಪುರಪಿತೃಗಳಿಗೆ ಇನ್ನೂ ಅಧಿಕಾರ ಸ್ವೀಕರಿಸುವ ಭಾಗ್ಯ ಒದಗಿ ಬಾರದ ಕಾರಣ ನಗರದ ಅಭಿವೃದ್ಧಿ ಬಗ್ಗೆ ಗಮನ ನೀಡುವವರೇ ಇಲ್ಲವಾಗಿದ್ದಾರೆ. ಇದರಿಂದ ಸ್ವಚ್ಛತೆ ಎಂಬುದು ಇಲ್ಲಿ ಮರೀಚಿಕೆಯಾಗಿದೆ.
  ಇಡೀ ನಗರವನ್ನೊಮ್ಮೆ ಪ್ರದಕ್ಷಿಣೆ ಹಾಕಿದರೂ ಒಂದು ಚರಂಡಿಯನ್ನೂ ಸ್ವಚ್ಛಗೊಳಿಸುವ ಗೋಜಿಗೆ ಹೋಗದಿರುವುದಕ್ಕೆ ಜನತೆ ತೀವ್ರ ಅಸಮಾಧಾನಗೊಂಡಿದ್ದಾರೆ. ನಗರದ ಮುಖ್ಯ ರಸ್ತೆಗಳಲ್ಲಿ ದಿನ ಬೆಳಗಾದರೆ ಸಾಕು ಚರಂಡಿ ತುಂಬಿ ಕೊಳಚೆ ನೀರು ಹರಿಯುತ್ತಿರುವುದನ್ನು ಕಾಣಬಹುದು.
ಕಸದ ತೊಟ್ಟಿಯೊಳಗೇ ಬೆಂಕಿ!: ಈಗ ಮಳೆಗಾಲ ಆರಂಭಗೊಂಡಿದ್ದು, ನಗರ ಗಬ್ಬೆದ್ದು ನಾರುತ್ತಿದೆ. ನಗರದ ಬಡಾವಣೆಗಳಲ್ಲಿ ಕಸ ವಿಲೇವಾರಿ ಮಾಡುವ ತೊಟ್ಟಿಗಳನ್ನು ಇಡಲಾಗಿದೆ. ಅದರಲ್ಲಿ  ಜನತೆ ಕಸ ತುಂಬಿ ಅದರೊಳಗೆ ಬೆಂಕಿ ಹಚ್ಚುತ್ತಿರುವುದರಿಂದ ಕೆಟ್ಟ ಹೊಗೆ ಬರುತ್ತಿದೆ. ಇದರಿಂದ ಜನತೆ ರಸ್ತೆಯ ಮೇಲೆ ಮೂಗಿ ಮುಚ್ಚಿಕೊಂಡೇ ತೆರಳುವಂತಹ ಸ್ಥಿತಿ ನಿರ್ಮಾಣವಾಗಿದೆ. ವಾಯುಮಾಲಿನ್ಯವಾಗುತ್ತಿದ್ದರೂ ಆ ಕಸವನ್ನು ಸಮರ್ಪಕ ವಿಲೇವಾರಿ ಮಾಡುವ ಗೋಜಿಗೆ ನಗರಸಭೆ ಮುದಾಗದಿರುವುದು ವಿಪರ್ಯಾಸ.
ಜನರ ಆಕ್ರೋಶ: ನಗರದ ವಾರ್ಡ್ ಸಂಖ್ಯೆ 3ರ ಶಹಾಪುರಪೇಟ ಬಡಾವಣೆಯಲ್ಲಿ ಚರಂಡಿ ತುಂಬಿ ತಿಂಗಳುಗಳೇ ಕಳೆದರೂ ಇನ್ನೂ ಸ್ವಚ್ಛಗೊಳಿಸಲು ನಗರಸಭೆ ಮುಂದಾಗುತ್ತಿಲ್ಲ ಎಂದು ನಿವಾಸಿ ಅಂಬರೀಷ್ ದೂರಿದ್ದಾರೆ.
  ಮಾತ್ರವಲ್ಲ 'ಈ ಬಗ್ಗೆ ಹಲವು ಬಾರಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಚರಂಡಿಯ ನೀರು ರಸ್ತೆ ಮೇಲೆ ಹರಿದ ಪರಿಣಾಮ ಸೊಳ್ಳೆಗಳ ಕಾಟ ಹೆಚ್ಚಿದೆ. ಈ ಮಾರ್ಗದ ಮೂಲಕ ಹಾದು ಹೋಗಬೇಕಾದರೆ ದುರ್ನಾತ ಬೀರುತ್ತಿದೆ. ಹಲವು ಸಾಂಕ್ರಾಮಿಕ ರೋಗಗಳ ಆಹ್ವಾನ ಕೇಂದ್ರವಾಗಿ ಮಾರ್ಪಟ್ಟಿದೆ. ಚುನಾಯಿತ ಪ್ರತಿನಿಧಿ ಆಯ್ಕೆಯಾದ ಮೇಲೆ ಈ ಕಡೆ ತಲೆಎತ್ತಿ ಕೂಡ ನೋಡುತ್ತಿಲ್ಲ. ತಮಗೂ ಇದಕ್ಕೂ ಏನು ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ' ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಮೇಲೆ ಕೊಳಚೆ ನೀರು: ಒಳಚರಂಡಿ ನೀರು ತ್ಯಾಜ್ಯ ವಸ್ತುಗಳು ಸಂಗ್ರಹವಾಗಿ ಸರಾಗವಾಗಿ ಹರಿಯಲು ವ್ಯವಸ್ಥೆ ಇಲ್ಲದಂತಾಗಿದೆ. ಅದಕ್ಕಾಗಿ ರಸ್ತೆ ಮಧ್ಯೆ ಸಾಕಷ್ಟು ಪ್ರಮಾಣದಲ್ಲಿ ಕೊಳಚೆ ನೀರು ಹರಿಯುತ್ತಿದೆ. ಇದರಿಂದ ನಗರದಲ್ಲಿ ಪಾದಾಚಾರಿಗಳು ಓಡಾಡುವುದು ಬಲು ಕಠಿಣವಾಗಿದೆ. ಬಡಾವಣೆ ಸುತ್ತಲೂ ಸಾರ್ವಜನಿಕರು ಸಾಕಷ್ಟು ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಕಸ ಸಂಗ್ರಹದ ತೊಟ್ಟಿಯಿಲ್ಲ, ಜನರು ಬಯಲು ಪ್ರದೇಶದಲ್ಲಿಯೇ ಕಸ ಬಿಸಾಡುತ್ತಾರೆ. ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಕಲುಷಿತ ನೀರು ಸೊಳ್ಳೆಗಳ ಉತ್ಪಾದನೆಗೆ ಹೇಳಿ ಮಾಡಿಸಿದಂತಹ ಸ್ಥಳವಾಗಿದೆ. ಹೀಗಾಗಿ ಕೂಡಲೇ ನಗರಸಭೆ ನಗರದ ಸ್ವಚ್ಛತೆಗೆ ಮುಂದಾಗಬೇಕೆಂಬುದು ನಾಗರಿಕರ ಆಗ್ರಹ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement