ಆಸ್ಪತ್ರೆ ಸಿಬ್ಬಂದಿ, ಪೊಲೀಸ್ ಪೇದೆ ಮೇಲೆ ಹಲ್ಲೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.5
108 ಆರೋಗ್ಯ ಕವಚ ಆ್ಯಂಬುಲನ್ಸ್‌ನಲ್ಲಿ ರೋಗಿಯನ್ನು ಕರೆತಂದಿದ್ದ ಆತನ ಸಹಾಯಕರು ಜಿಲ್ಲಾ ಆಸ್ಪತ್ರೆಯ ಗ್ರೂಪ್ ಡಿ ಸಿಬ್ಬಂದಿ, ಸ್ಥಳದಲ್ಲಿದ್ದ ಕ್ಯಾಜುಲಿಟಿ ವಿಭಾಗದ ಪೊಲೀಸ್ ಪೇದೆ ಹಾಗೂ ಆ್ಯಂಬುಲನ್ಸ್‌ನ ಚಾಲಕ- ಸಹಾಯಕನನ್ನು ಥಳಿಸಿದ ಘಟನೆ ಮಂಗಳವಾರ ಮಧ್ಯರಾತ್ರಿ ನಡೆದಿದೆ.
ನಗರದ ಸೇಡಂ ರಸ್ತೆಯಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಆ್ಯಂಬುಲನ್ಸ್ ಮೂಲಕ ಕಮಲಾಪುರದ ಗೋಗಿಯಿಂದ ರೋಗಿಯನ್ನು ಕರೆತರಲಾಗಿತ್ತು. ರೋಗಿಗೆ ಆಸ್ಪತ್ರೆ ಸಿಬ್ಬಂದಿ ತಕ್ಷಣ ಆರೋಗ್ಯ ಸೇವೆ ಒದಗಿಸಿದ್ದರೂ ವಿನಾಕಾರಣ ಕೋಪದಲ್ಲಿದ್ದ ಬಂಧುಗಳು ಜಗಳ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿರುವ ನೊಂದ ಸಿಬ್ಬಂದಿ, ಬುಧವಾರ ಆಸ್ಪತ್ರೆಗೆ ಬೀಗ ಜಡಿದು ಕೆಲಕಾಲ ಧರಣಿ ನಡೆಸಿ ಜಿಲ್ಲಾಡಳಿತದ ಗಮನ ಸೆಳೆದರು.
ಘಟನೆ: ಆಸ್ಪತ್ರೆಗೆ ಆ್ಯಂಬುಲನ್ಸ್‌ನಲ್ಲಿ ಬಂದಾಗ ತಕ್ಷಣ ಡಿ ಗುಂಪಿನ ಸಿಬ್ಬಂದಿ ಸೇವೆ ನೀಡಿದ್ದಾರೆ. ನರ್ಸ್‌ಗಳು ಐವಿ ಫ್ಲುಯಿಡ್ ಹಚ್ಚುವಷ್ಟರಲ್ಲೇ ರೋಗಿಯ ಸಂಬಂಧಿಯೊಬ್ಬ ಬಂದು ಅದನ್ನೆಲ್ಲ ಕಿತ್ತೆಸೆದು ಖಾಸಗಿ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ದಿದ್ದಾನೆ. ಈ ಹಂತದಲ್ಲಿ ಮಧ್ಯಸ್ಥಿಕೆ ವಹಿಸಿದ ಪೊಲೀಸ್ ಪೇದೆಗೂ ಥಳಿಸಲಾಗಿದೆ. ಈ ಘಟನೆಯಲ್ಲಿ ಹಲ್ಲೆಗೊಳಗಾದ ಡಿ ಗುಂಪಿನ ಸಿಬ್ಬಂದಿ ಬ್ರಹ್ಮಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜಿಲ್ಲಾಧಿಕಾರಿಗೆ ಮಾಹಿತಿ: ಈ ಘಟನೆ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ. ನಳಿನಿ ನಮೋಶಿ, ಹಲ್ಲೆ ಮಾಡಿರುವ ರೋಗಿಯ ಬಂಧುಗಳೂ ಪೊಲೀಸ್ ಠಾಣೆಯಲ್ಲಿ ಆಸ್ಪತ್ರೆ ಸಿಬ್ಬಂದಿಯೇ ಬಂಗಾರ ಕಳವು ಮಾಡಿ ಹಲ್ಲೆ ಮಾಡಿದ್ದಾರೆಂದು ಪ್ರತಿದೂರು ದಾಖಲಿಸಿದ್ದಾರೆ. ಇದರಿಂದ ಮನನೊಂದ ಸಿಬ್ಬಂದಿ ಬುಧವಾರ ಧರಣಿ ನಡೆಸಿದ್ದಾರೆ. ಈ ಬೆಳವಣಿಗೆ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸಹಾಯಕ ಆಯುಕ್ತ ಭೇಟಿ: ಸಿಬ್ಬಂದಿ ಬೀಗ ಜಡಿದು ಆಸ್ಪತ್ರೆಯಲ್ಲಿನ ಸೇವೆ ಸ್ಥಗಿತಗೊಳಿಸಿ ಧರಣಿ ನಡೆಸಿದಾಗ ಜಿಲ್ಲಾಡಳಿತದ ಪರವಾಗಿ ಸಹಾಯಕ ಆಯುಕ್ತ ಹರ್ಷಾ ಶೆಟ್ಟಿ ಸ್ಥಳಕ್ಕೆ ಆಗಮಿಸಿ ಸಿಬ್ಬಂದಿ ಮನವಿ ಆಲಿಸಿದ್ದಾರೆ. ಸರ್ಜನ್ ಡಾ. ನಳಿನಿ ನಮೋಶಿಯವರ ಜೊತೆಗೂ ಚರ್ಚಿಸಿದ್ದಾರೆ. ಈ ಭೇಟಿಯ ನಂತರವೇ ಧರಣಿ ಮುಕ್ತಾಯಗೊಳಿಸಿದ ಸಿಬ್ಬಂದಿ ಕೆಲಸಕ್ಕೆ ಮರಳಿದರು.
ಕರ್ತವ್ಯನಿರತ ಸಿಬ್ಬಂದಿಗೆ ಈ ರೀತಿ ಬೆದರಿಸಿ ಹಲ್ಲೆ ಮಾಡುವುದು ಅದೆಷ್ಟು ಸರಿ. ಈ ಬೆಳವಣಿಗೆ ಬಗ್ಗೆ ಈಗಾಗಲೇ ಜಿಲ್ಲಾ ಪೊಲೀಸ್ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಅವರು ಅಗತ್ಯ ಭದ್ರತೆ ಒದಗಿಸುವ ಭರವಸೆ ನೀಡಿದ್ದಾರೆಂದು ಡಾ. ನಳಿನಿ ಹೇಳಿದ್ದಾರೆ.
--