'ಖಾತ್ರಿ' ಅವ್ಯವಸ್ಥೆ; ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಯಾದಗಿರಿ ಜೂ.5
ಗ್ರಾಮದ ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆ ವೇತನ ಬಿಡುಗಡೆ ಮಾಡದಿರುವುದು, ಕೂಲಿಕಾರರಿಗೆ ಕೆಲಸ ಕೊಡದಿರುವುದು ಹಾಗೂ ಒಂದು ತಿಂಗಳಿಂದ ಪಿಡಿಒ ಕಾರ್ಯಾಲಯಕ್ಕೆ ಬಾರದಿರುವುದನ್ನು ಖಂಡಿಸಿ ತಾಲೂಕಿನ ಅಜಲಾಪುರ ಗ್ರಾಪಂ ಕಾರ್ಯಾಲಯದ ಎದುರು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಗ್ರಾಮದ ಕೂಲಿಕಾರರು ಪ್ರತಿಭಟನೆ ನಡೆಸಿದರು.
ತಾಲೂಕಿನ ಅಜಲಾಪುರ ಗ್ರಾಪಂ ವ್ಯಾಪ್ತಿಯ ಬದ್ದೇಪಲ್ಲಿ ಮತ್ತು ಅಜಲಾಪುರ ಗ್ರಾಮದ ಕೂಲಿಕಾರರು ಈಗಾಗಲೇ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ್ದು, ಇದುವರೆಗೂ ವೇತನ ಪಾವತಿಸಿಲ್ಲ. ಕೂಲಿಕಾರರಿಗೆ ಹೊಸದಾಗಿ ಕೆಲಸ ಕೂಡ ಕೊಡುತ್ತಿಲ್ಲ. ಕೂಡಲೇ ದುಡಿದ ಕೂಲಿಕಾರರಿಗೆ ವೇತನ ಬಿಡುಗಡೆ ಮಾಡಬೇಕು ಹಾಗೂ ಈ ಕೂಲಿಕಾರರಿಗೆ ಕೂಡಲೇ ಕೆಲಸ ನೀಡಬೇಕು. ಪಿಡಿಒ ಕಳೆದ ಒಂದು ತಿಂಗಳಿಂದ ಗೈರು ಹಾಜರಾಗಿದ್ದು, ಇದರಿಂದ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಆದ್ದರಿಂದ ಅವರ ಜಾಗಕ್ಕೆ ಬೇರೆಯವರನ್ನು ನಿಯೋಜಿಸಬೇಕೆಂದು ಆಗ್ರಹಿಸಿದರು.
ಯಂತ್ರದಿಂದ ಕಾಮಗಾರಿ: ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಯನ್ನು ಜೆಸಿಬಿ ಯಂತ್ರದಿಂದ ನಿರ್ವಹಿಸಿದ್ದು, ಈ ಬಗ್ಗೆ ದೂರು ಕೊಟ್ಟರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಲ್ಲಿಗಳ ನೀರು ಸಂಪರ್ಕವನ್ನು ನೇರವಾಗಿ ಟ್ಯಾಂಕ್ನಿಂದ ಗ್ರಾಮದ ಮನೆಗಳಿಗೆ ಬರುವಂತೆ ಮಾಡಬೇಕು. ಈಗಾಗಲೇ ಮೋಟಾರ್ನಿಂದ ನೇರವಾಗಿ ಸಂಪರ್ಕ ಕೊಟ್ಟಿದ್ದು, ನೀರು ಬೇಕಾಬಿಟ್ಟಿಯಾಗಿ ಹರಿಯುತ್ತಿದೆ. ಅಜಲಾಪುರ ಗ್ರಾಮದ ಅನೇಕ ಕಾಮಗಾರಿಗಳು ಮುಗಿದಿದ್ದು, ಉದ್ದೇಶಪೂರ್ವಕವಾಗಿ ಪರ್ಸೆಂಟೇಜ್ ನೀಡಲ್ಲ ಎಂದು ಪಿಡಿಒ ಎನ್ಎಂಆರ್ ದಾಖಲಿಸುತ್ತಿಲ್ಲ. ಆದ್ದರಿಂದ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಅಶೋಕ ಕಲಾಲ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವರಾಮ ಚವ್ಹಾಣ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಶಾಂತಯ್ಯ ಕಟ್ಟಿಮನಿ, ಬಾಬು ಕಲಾಲ್, ನರಸಿಂಹಲು, ಅಕ್ಕಮ್ಮ ಉಪ್ಪಾರ, ತಾಯಮ್ಮ ಇತರರು ಇದ್ದರು.