ಬಾಲ್ಯ ವಿವಾಹಕ್ಕೆ ಅಧಿಕಾರಿಗಳಿಂದ ಬ್ರೇಕ್
ಗುಲ್ಬರ್ಗ: ಜಿಲ್ಲೆಯ ಜೇವರ್ಗಿ ತಾಲೂಕಿನ ಕುಮ್ಮನ ಸಿರಸಗಿ ಗ್ರಾಮದಲ್ಲಿ ನಿಶ್ಚಯವಾಗಿದ್ದ ಬಾಲ್ಯ ವಿವಾಹವೊಂದು ಅಧಿಕಾರಿಗಳ ಮಧ್ಯೆ ಪ್ರವೇಶದಿಂದ ರದ್ದಾಗಿದೆ. ಕುಮ್ಮನ ಸಿರಸಗಿ ಗ್ರಾಮದಲ್ಲಿ ಮಂಗಳವಾರ ಜೂ. 4 ರಂದು ಎರಡು ಬಾಲ್ಯ ವಿವಾಹಗಳ ಮೂಹರ್ತಗಳನ್ನು ನಿಗದಿಪಡಿಸಲಾಗಿತ್ತು. 21 ವರ್ಷ ವಯಸ್ಸಿನ ಯುವಕ ಮತ್ತು 7ನೇ ತರಗತಿಯಲ್ಲಿ ಓದುತ್ತಿರುವ 13 ವರ್ಷ ವಯಸ್ಸಿನ ಬಾಲಕಿಯೊಂದಿಗೆ ಹಾಗೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ 37 ವರ್ಷ ವಯಸ್ಸಿನ ಯುವಕನ ಮದುವೆ 9ನೇ ತರಗತಿಯಲ್ಲಿ ಓದುತ್ತಿರುವ 14 ವರ್ಷದ ಬಾಲಕಿಯೊಂದಿಗೆ ಒಂದೇ ಮಂಟಪದಲ್ಲಿ ನಡೆಯುವುದರಲ್ಲಿತ್ತು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎನ್. ನಾರಾಯಣ ಸ್ವಾಮಿ, ಜಿಲ್ಲಾ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಭರತೇಶ ಶೀಲವಂತರ್ ಮತ್ತಿತರರು ಗ್ರಾಮಕ್ಕೆ ಭೇಟಿ ನೀಡಿ ಪೋಷಕರಿಗೆ ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಆಗ ಪಾಲಕರು ಮಗಳಿಗೆ 18 ವರ್ಷ ವಯಸ್ಸಾಗುವವರೆಗೆ ಮದುವೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡುವ ಮೂಲಕ ಈ ಮದುವೆ ನಿಂತಿತು. ಆದರೆ, 9ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಗೆ 18 ವರ್ಷಗಳು ತುಂಬಿದೆ ಎಂದು ಆಕೆಯ ಪಾಲಕರು ವೈದ್ಯಾಧಿಕಾರಿಗಳು ನೀಡಿದ ದೃಢೀಕರಣ ಪತ್ರ ಅಧಿಕಾರಿಗಳಿಗೆ ನೀಡಿದ್ದರಿಂದ ಆ ವಿವಾಹ ನೇರವೇರಿತು.