ಪಿಯು ಕಾಲೇಜು ಆಡಳಿತ ಮಂಡಳಿ ಜಾಣ ಕುರುಡು
ಹುಣಸಗಿ: ಪಟ್ಟಣದ ಯುಕೆಪಿ ಕ್ಯಾಂಪಿನಲ್ಲಿರುವ ಪದವಿ ಪೂರ್ವ ಕಾಲೇಜಿನ ಶೌಚಾಲಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ವಿದ್ಯಾರ್ಥಿನಿಯರೂ ಇರುವ ಈ ಕಾಲೇಜಿನಲ್ಲಿ ಶೌಚಾಲಯ ಅಸಹನೀಯವಾಗಿದ್ದು, ಇದನ್ನು ಕಂಡೂ ಕಾಣದಂತಿರುವ ಆಡಳಿತ ಮಂಡಳಿ ಬಗ್ಗೆ ಏನು ಹೇಳಬೇಕೋ ತಿಳಿಯದಂತಾಗಿದೆ.
8ನೇ ತರಗತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿರುವ ಈ ಕಾಲೇಜಿನಲ್ಲಿ ಬಾಲಕಿಯರೂ ಸೇರಿದಂತೆ ನೂರಾರು ವಿದ್ಯಾರ್ಥಿಗಳಿದ್ದಾರೆ. ಅವರು ಬಳಸಿಕೊಳ್ಳಲು ಇರುವ ಶೌಚಾಲಯಕ್ಕೆ ಸಂಪೂರ್ಣ ಗ್ರಹಣ ಬಡಿದಂತಾಗಿದೆ. ಆರು ಶೌಚಾಲಯಗಳನ್ನು ಕಾಲೇಜಿನಲ್ಲಿ ಕಟ್ಟಿಸಲಾಗಿದೆ. ಆದರೆ ಯಾವುದೂ ಬಳಕೆಗೆ ಯೋಗ್ಯವಾಗಿಲ್ಲ.
ವಿದ್ಯಾರ್ಥಿನಿಯರಿಗೆ ತೊಂದರೆ: ಈ ಕಾಲೇಜಿನ ಶೌಚಾಲಯವನ್ನು ಶಾಲಾ ಮಕ್ಕಳಿಗಿಂತ ಹೊರಗಿನ ಜನರೇ ಹೆಚ್ಚಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿನಿಯರು ಉಪಯೋಗಿಸುವ ಶೌಚಾಲಯವಂತೂ ಬಾಗಿಲು ಮುರಿದ ಸ್ಥಿತಿಯಲ್ಲಿದೆ. ಆದ್ದರಿಂದ ಅವರ ಸ್ಥಿತಿ ಹೇಳತೀರದಾಗಿದೆ.
ಎಲ್ಲೆಂದರಲ್ಲಿ ಮಲಮೂತ್ರ ವಿಸರ್ಜನೆ ಮಾಡಿ ಶೌಚಾಲಯವನ್ನು ಸಂಪೂರ್ಣ ಹಾಳುಗೆಡವಲಾಗಿದೆ. ಗಬ್ಬೆದ್ದು ಶೌಚಾಲಯದ ಒಳಗೆ ಪ್ರವೇಶ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಾಗಿಲು ಮುರಿದಿದ್ದು, ಭದ್ರತೆ ಇಲ್ಲದಂತಾಗಿದೆ. ಆದ್ದರಿಂದ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ನಿತ್ಯವೂ ಪರದಾಡುವಂತಾಗಿದೆ. ಈ ಬಗ್ಗೆ ಕಾಲೇಜು ಸುಧಾರಣಾ ಸಮಿತಿಯವರು ಈ ಬಗ್ಗೆ ಗಮನ ನೀಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.