ಮರ ಉಳಿದರೆ ಮಳೆ: ಬಡಗಾ
ಸುರಪುರ: ಮಲೆನಾಡು ಪ್ರದೇಶಗಳಲ್ಲಿ ಮರಗಳು ಹೆಚ್ಚಾಗಿರುವುದರಿಂದ ಅಲ್ಲಿ ಮಳೆ ಹೆಚ್ಚಾಗುತ್ತದೆ. ನಮ್ಮ ಭಾಗದಲ್ಲಿ ಮರದ ಬದಲು ಕಾಂಕ್ರೀಟ್ ಮನೆಗಳಿಂದ ಬರಗಾಲ ಆವರಿಸುತ್ತಿದೆ. ಕಾರಣ ಮರ ಬೆಳೆಸಿ ಉಳಿಸಿದರೆ ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಎಂದು ಶ್ರೀಪ್ರಭು ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಎಸ್.ಬಡಗಾ ಹೇಳಿದರು.
ಕಾಲೇಜಿನ ಮೈದಾನದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿ ಬೆಳೆಸಿದರೆ. ಮಕ್ಕಳಂತೆ ಬೆಳೆದು ಹೆಮ್ಮರವಾಗಿ ಉತ್ತಮ ಗಾಳಿ ಮತ್ತು ಮಳೆಯನ್ನು ನೀಡುತ್ತದೆ. ಕಾರಣ ಪ್ರತಿಯೊಬ್ಬರು ಮರಗಳನ್ನು ಬೆಳಸಿ ಪರಿಸರ ರಕ್ಷಣೆ ಮಾಡುವುದು ಅವಶ್ಯ ಎಂದರು.
ಪ್ರೊ. ವಾರಿಸ್ ಕುಂಡಾಲೆ ಮಾತನಾಡಿ, ಇಂದು ಪರಿಸರ ನಾಶದಿಂದ ನಾವುಗಳು ಅಪಾರ ನಷ್ಟ ಅನುಭವಿಸುತ್ತಿದ್ದೇವೆ. ಮಳೆ, ಬೆಳೆ ಇಲ್ಲದೆ ಪರಿತಪಿಸುವಂತಾಗಿದೆ. ಪರಿಸರ ನಾಶದಿಂದ ರೋಗಗಳು ನಮ್ಮನ್ನು ಆವರಿಸುತ್ತಿವೆ. ಕಾರಣ ಪರಿಸರ ಉಳಿವಿಗಾಗಿ ನಾವುಗಳು ಒತ್ತುಕೊಡಬೇಕಾದ ಅವಶ್ಯಕತೆಯಿದೆ ಎಂದರು. ವಲಯ ಉಪ ಅರಣ್ಯಾಧಿಕಾರಿ ರೇವಣಸಿದ್ದ ತಾವರಖೇಡ್, ಉಪನ್ಯಾಸಕ ಮಹೇಶ ಗಂವ್ಹಾರ ಇದ್ದರು. ಎಸ್.ಸಿ. ಶಿರವಾಳ, ರಂಗನಾಥ ಜೇವರ್ಗಿ, ಬಿಒ ಬೋಮ್ಮಪ್ಪ ಇತರರು ಇದ್ದರು.