ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಮಗ್ರ ಅಭಿವೃದ್ಧಿಗೆ ಕ್ರಮ

Lingaraj Badiger
Updated On : 7 Jun 2013, 11:09 am

ಯಾದಗಿರಿ ಜೂ.6
ಜಿಲ್ಲೆಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ, ನೀರಾವರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸುವ ದಿಶೆಯಲ್ಲಿ ಅಧ್ಯಯನ ನಡೆಸಿ ವರದಿಯೊಂದನ್ನು ರೂಪಿಸಲು ನಿರ್ಧರಿಸಲಾಗಿದೆ.
  ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜಿಪಂ ಹಾಗೂ ಕಲಿಕೆ ಸರ್ ರತನ್ ಟಾಟಾ ಟ್ರಸ್ಟ್ ಇವರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಿದ್ದ ಮಾನವ ಅಭಿವೃದ್ಧಿ ಸೂಚ್ಯಂಕ ಕುರಿತ ಕಾರ್ಯಾಗಾರದಲ್ಲಿ ಈ ಕುರಿತು ಚರ್ಚಿಸಲಾಯಿತು.
ರತನ್ ಟಾಟಾ ಸಂಸ್ಥೆಗೆ ವರದಿ ಜವಾಬ್ದಾರಿ: ಜಿಲ್ಲೆಯ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಆರ್ಥಿಕ, ನೀರಾವರಿ, ವ್ಯವಸಾಯ, ಆರೋಗ್ಯ ಕ್ಷೇತ್ರ, ಸೇರಿದಂತೆ ವಿವಿಧ ರಂಗಗಳಲ್ಲಿ ಅಭಿವೃದ್ಧಿ ಸಾಧಿಸುವ ಕುರಿತು ಮಾರ್ಗೋಪಾಯಗಳನ್ನು ಹಾಗೂ ಈವರೆಗೆ ಅಭಿವೃದ್ಧಿ ಸಾಧನೆಯಲ್ಲಿ ತೊಡಕಾಗಿರುವ ಸಮಸ್ಯೆಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ. ಈ ಕುರಿತ ಜವಾಬ್ದಾರಿಯನ್ನು ರತನ್ ಟಾಟಾ ಸಂಸ್ಥೆಗೆ ನೀಡಿರುವುದರಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಸಂಸ್ಥೆಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲು ನಿರ್ಧರಿಸಲಾಯಿತು.
ಸಹಕಾರ ನೀಡಲು ಸೂಚನೆ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ. ಜಿಲಾನಿ ಮಾತನಾಡಿ, ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಈ ವರದಿ ತಯಾರಿಸಬೇಕು. ನೂತನ ಜಿಲ್ಲೆಯಾಗಿರುವುದರಿಂದ ಯಾವ ಕ್ಷೇತ್ರದಲ್ಲಿ ಹಿಂದುಳಿದಿರುವ ಕುರಿತು ಮತ್ತು ಯಾವ ದಿಶೆಯಲ್ಲಿ ಕಾರ್ಯಪ್ರವೃತ್ತರಾಗುವುದರಿಂದ ಅಭಿವೃದ್ಧಿ ಸಾಧಿಸಲು ಸಾದ್ಯವಿದೆ ಎಂಬುವುದನ್ನು ಚರ್ಚಿಸಲು ಇಲ್ಲಿ ಅಧಿಕಾರಿಗಳಿಗೆ ಕಾರ್ಯಾಗಾರ ಏರ್ಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇದಕ್ಕಾಗಿ ಸಂಪೂರ್ಣ ಸಹಕಾರ ನೀಡುವಂತೆ ಸೂಚನೆ ನೀಡಿದರು.
ಶಿಕ್ಷಣ, ಆರೋಗ್ಯ, ಕೃಷಿಯಲ್ಲಿ ಹಿನ್ನಡೆ: ಜಿಪಂ ಸದಸ್ಯ ಬಸವರಾಜ ಖಂಡ್ರೆ ಮಾತನಾಡಿ, ಜಿಲ್ಲೆ ಶಿಕ್ಷಣ, ಆರೋಗ್ಯ, ವ್ಯವಸಾಯದಲ್ಲಿ ಹಿಂದುಳಿದಿದೆ. ವಿದ್ಯಾರ್ಥಿಗಳಿಗೆ ಗುಣಾತ್ಮಕ ಹಾಗೂ ಸ್ಪರ್ಧಾತ್ಮಕ ಶಿಕ್ಷಣ ದೊರೆಯಬೇಕಾಗಿದೆ. ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕಾಗಿದೆ. ಈ ವಿಷಯದಲ್ಲಿ ಪೂರಕ ವರದಿ ಸರ್ಕಾರಕ್ಕೆ ಸಲ್ಲಿಸಲು ಎಲ್ಲರೂ ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಸಲಹೆ ನೀಡಿದರು.
  ಕಾರ್ಯಾಗಾರದಲ್ಲಿ ಮಕ್ಕಳ ಶೈಕ್ಷಣಿಕ ವ್ಯವಸ್ಥೆ, ಆರೋಗ್ಯ ಸ್ಥಿತಿಗತಿ, ಪಡಿತರ ವಿತರಣಾ ವ್ಯವಸ್ಥೆ ವಸತಿ ವ್ಯವಸ್ಥೆ, ಶೈಕ್ಷಣಿಕ ಗುಣಮಟ್ಟ, ಸಮುದಾಯದ ಭಾಗವಹಿಸುವಿಕೆ, ಅಧಿಕಾರಿಗಳ ಜವಾಬ್ದಾರಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲಾಯಿತು. ಕಾರ್ಯಾಗಾರವನ್ನು ಜಿಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ಯಾಮಲಾ ಕಮತಗಿ ಉದ್ಫಾಟಿಸಿದರು. ಈ ಸಂದರ್ಭದಲ್ಲಿ ಜಿಪಂ ಮರೆಮ್ಮ ಶ್ಯಾಣೆನೋರ್, ಜಿಪಂ ಯೋಜನಾಧಿಕಾರಿ ಬಸವರಾಜ, ಕಲಿಕೆ ಯೋಜನಾ ನಿರ್ದೇಶಕ ರಮೇಶ ಗೊಂಗಡಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement