ಸೇನೆ ಸೇರಲು ಯುವ ಉತ್ಸಾಹ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.6
ಬೆಳಗಾವಿಯ ಆರ್ಮಿ ರಿಕ್ರೂಟಿಂಗ್ ಆಫೀಸ್ ವತಿಯಿಂದ ಹೈದ್ರಾಬಾದ್ ಕರ್ನಾಟಕ ಭಾಗದ ಗುಲ್ಬರ್ಗ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಕಾಯಂ ಆಗಿ ನೆಲೆಸಿರುವ ವಿದ್ಯಾವಂತ ಯುವಕರಿಗೆ ಭಾರತೀಯ ಸೇನೆಯ ವಿವಿಧ ಹುದ್ದೆಗಳಿಗೆ ಸೇರಲು ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸೇನಾ ಭರ್ತಿ ರ್ಯಾಲಿಯಲ್ಲಿ ಹೈ.ಕ. ಪ್ರದೇಶದ ವಿವಿಧ ಭಾಗಗಳಿಂದ ಸಾವಿರಾರು ಯುವಕರು ಗುರುವಾರ ಹಾಜರಾಗಿದ್ದರು.
ಆರಂಭದ ದಿನವಾದ ಗುರುವಾರ ಸೇನೆಯಲ್ಲಿ ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಜರುಗಿತು. ಈ ಹುದ್ದೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ. 45 ಅಂಕ ಗಳಿಸಿ ಉತ್ತೀರ್ಣರಾಗಿದ್ದು, ಹದಿನೇಳುವರೆ ವರ್ಷದಿಂದ 21 ವರ್ಷದೊಳಗಿನ ಸುಮಾರು 800ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದು, ಅವರಲ್ಲಿ 200 ಮಂದಿ ಓಟದ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ದೈಹಿಕ ಪರೀಕ್ಷೆಯ ಪ್ರಕ್ರಿಯೆ ಹಾಗೂ ದಾಖಲಾತಿ ಪರಿಶೀಲನಾ ಕಾರ್ಯವು ಪ್ರಗತಿಯಲ್ಲಿದೆ ಎಂದು ಆರ್ಮಿ ರಿಕ್ರೂಟಿಂಗ್ ಬೆಳಗಾವಿ ವಿಂಗ್ನ ನಿರ್ದೇಶಕ ವಿಧಾನ ಶರಣ ತಿಳಿಸಿದ್ದಾರೆ.
ಶಾಲೆಗಳಲ್ಲಿ ವಾಸ್ತವ್ಯ: ಹೈದ್ರಾಬಾದ್ ಕರ್ನಾಟಕ ಪ್ರದೇಶದ ವಿವಿಧ ಭಾಗಗಳಿಂದ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ಬಂದಿರುವ ಆಸಕ್ತ ಅರ್ಹ ಯುವಕರಿಗೆ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಸಮೀಪದ ಶಾಲೆಗಳಲ್ಲಿ ವಾಸ್ತವ್ಯಕ್ಕೆ ಏರ್ಪಾಡು ಮಾಡಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
ಮಧ್ಯವರ್ತಿಗಳ ಮೊರ ಹೋಗಬೇಡಿ: ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಉಚಿತ ಹಾಗೂ ಪಾರದರ್ಶಕವಾಗಿದ್ದು, ಯಾವೊಬ್ಬ ಅಭ್ಯರ್ಥಿಯೂ ಮಧ್ಯವರ್ತಿಗಳ ಮೊರೆ ಹೋಗಬಾರದು. ನೇಮಕಾತಿಯ ವಿವಿಧ ಹಂತಗಳ ಪ್ರಕ್ರಿಯೆಗಳನ್ನು ಆನ್ಲೈನ್ನಲ್ಲಿ ವೀಕ್ಷಿಸಬಹುದಾಗಿದ್ದು, ಆನ್ಲೈನ್ನಲ್ಲಿ ಅಭ್ಯರ್ಥಿಗಳು ವಿವಿಧ ಪರೀಕ್ಷೆಗಳಲ್ಲಿ ಗಳಿಸಿದ ವಿವರವನ್ನು ಕಾಣಬಹುದಾಗಿದೆ ಎಂದು ಹೇಳಿದರು.
50 ಸಾವಿರಕ್ಕೂ ಅಧಿಕ ಪಾಲ್ಗೊಳ್ಳುವ ನಿರೀಕ್ಷೆ: ಗುಲ್ಬರ್ಗ ಉಪ ತಹಸೀಲ್ದಾರರು, ಶಿಕ್ಷಣ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳದಲ್ಲಿದ್ದಾರೆ ಎಂದ ಅವರು, ಪ್ರಥಮ ಚಿಕಿತ್ಸೆ ನೀಡಲು ಸ್ಥಳದಲ್ಲಿಯೇ ಆ್ಯಂಬುನ್ಸ್ನ ವ್ಯವಸ್ಥೆ ಮಾಡಲಾಗಿದೆ. ಈ ಭಾಗದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚಿನ ಮಂದಿ ಈ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸುವರೆಂದು ನಿರೀಕ್ಷಿಸಲಾಗಿದೆ. ದೈಹಿಕ ಸಾಮರ್ಥ್ಯದ ಪರೀಕ್ಷೆ ನಡೆಸಲು ಆರು ಮಂದಿ ಮಿಲಿಟರಿ ವೈದ್ಯಾಧಿಕಾರಿಗಳು ತಂಡದಲ್ಲಿದ್ದಾರೆ ಎಂದು ಅವರು ತಿಳಿಸಿದರು.
ಯಾರ್ಯಾರಿಗೆ ಯಾವಾಗ ರ್ಯಾಲಿ: ಜೂ.7ರಂದು ಬೆಳಗಾವಿ, ಬೈಲಹೊಂಗಲ, ಸವದತ್ತಿ ತಾಲೂಕುಗಳ ಅಭ್ಯರ್ಥಿಗಳು, ಜೂ. 8ರಂದು ಚಿಕ್ಕೋಡಿ, ಅಥಣಿ ಮತ್ತು ರಾಯಭಾಗ ತಾಲೂಕುಗಳ, ಜೂ. 9ರಂದು ಗೋಕಾಕ ಮತ್ತು ಹುಕ್ಕೇರಿ ತಾಲೂಕುಗಳ ಅಭ್ಯರ್ಥಿಗಳು, ಜೂ.10ರಂದು ಬೆಳಗಾವಿ ಜಿಲ್ಲೆಯ ರಾಮದುರ್ಗ ಮತ್ತು ಖಾನಾಪುರ ತಾಲೂಕುಗಳ ಅಭ್ಯರ್ಥಿಗಳು ಈ ರ್ಯಾಲಿಯಲ್ಲಿ ಭಾಗವಹಿಸಬಹುದು ಎಂದು ಹೇಳಿದರು. ಜೂ.11ರಂದು ಸೋಲ್ಡ್ಜರ್ ಟೆಕ್ನಿಕಲ್, ಸೋಲ್ಡ್ಜರ್ ನರ್ಸಿಂಗ್ ಅಸಿಸ್ಟಂಟ್, ಸೋಲ್ಡ್ಜರ್ ಕ್ಲರ್ಕ, ಸ್ಟೋರ್ ಕೀಪರ್ ಟೆಕ್ನಿಕಲ್ ಹುದ್ದೆಗಳಿಗೆ ಬೆಳಗಾವಿ, ಬಳ್ಳಾರಿ, ಬೀದರ್, ಗುಲ್ಬರ್ಗ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಬಹುದು.
ಜೂ.12ರಂದು ಬೆಳಗಾವಿ, ಬಳ್ಳಾರಿ, ಬೀದರ್, ಗುಲ್ಬರ್ಗ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಬಹುದು. ಜೂ.13 ರಂದು ಸೋಲ್ಡ್ಜರ್ ಟ್ರೇಡ್ಮನ್ ಹುದ್ದೆಗೆ ಬೆಳಗಾವಿ, ಬಳ್ಳಾರಿ, ಬೀದರ್, ಗುಲ್ಬರ್ಗ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಬಹುದು.
ಜು.27ರಂದು ಲಿಖಿತ ಪರೀಕ್ಷೆ: ನೇಮಕಾತಿಗೆ ನಡೆಸುವ ದೈಹಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಜು.27ರಂದು ಬೆಳಗಾವಿಯ ಶಿವಾಜಿ ಕ್ರೀಡಾಂಗಣದಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು.
ಲಿಖಿತ ಪರೀಕ್ಷೆ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿರುತ್ತದೆ. ಲಿಖಿತ ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಪಡೆಯುವ ಸಂದರ್ಭದಲ್ಲಿ, ಈ ಹಿಂದೆ ನಡೆಸಲಾದ ಪರೀಕ್ಷೆಗಳ ಹಳೆಯ ಪ್ರಶ್ನೆಪತ್ರಿಕೆಗಳನ್ನು ಅಭ್ಯರ್ಥಿಯ ಅನುಕೂಲಕ್ಕೆಂದು ನೀಡಲಾಗುವುದು ಎಂದು ವಿಧಾನ ಶರಣ ಅವರುತಿಳಿಸಿದರು.