ಆಳಂದ; 89,545 ಹೆಕ್ಟೇರ್ ಬಿತ್ತನೆ ಗುರಿ
ಕನ್ನಡಪ್ರಭ ವಾರ್ತೆ ಆಳಂದ ಜೂ.7
ತಾಲೂಕಿನ ರೈತರು ಮತ್ತೆ ಪ್ರಸಕ್ತ ಮುಂಗಾರು ಹಂಗಾಮಿನ ಬಿತ್ತನೆಗೆ ಕೂರಿಗೆ ಹಿಡಿದು ನಿಂತಿದ್ದಾರೆ.
ಲಿಂಗದಳ್ಳಿ, ತಡಕಲ್, ಕಿಣ್ಣಿಸುಲ್ತಾನ, ಖಜೂರಿ, ಹೊನ್ನಳ್ಳಿ, ತೆಲಾಕುಣಿ, ಮಟಕಿ, ತೀರ್ಥ ಸೇರಿದಂತೆ ಮತ್ತಿತರ ಕಡೆ ಗುರುವಾರ ಕೆಲವೇ ಕೆಲವು ರೈತರು ಬಿತ್ತನೆ ಆರಂಭಿಸಿದ್ದಾರೆ.
ಜೂನ್ ಮೊದಲು ವಾರವೇ ಆಶಾದಾಯಕವಾಗಿ ಮಳೆ ಸುರಿದ ಕಾರಣ ಹಿಂದೆ ಮುಂದೆ ನೋಡದೆ ರೈತರು ಬಿತ್ತನೆಗೆ ಮುಂದಾಗಿದ್ದಾರೆ. ಇನ್ನೂ ಮಳೆಗಾಗಿ ಕೆಲವರು ನಿರೀಕ್ಷೆಯದ್ದಾರೆ. ಬಂದ ಮಳೆಯಲ್ಲೇ ಮಳೆ ಬರಬಹುದೆಂಬ ಆಸೆಯನಿಟ್ಟುಕೊಂಡು ಅನೇಕರು ಬಿತ್ತನೆ ಶುರು ಮಾಡಿದ್ದಾರೆ.
ಬಿತ್ತನೆ ಬೀಜ ವಿತರಣೆ ಪ್ರಕ್ರಿಯೆ ಆರಂಭ: ಸರ್ಕಾರದ ಸಬ್ಸಿಡಿ ಬಿತ್ತನೆ ಬೀಜವನ್ನು ಆಳಂದ, ನಿಂಬರಗಾ ಮತ್ತು ನರೋಣಾ ರೈತ ಸಂಪರ್ಕ ಕೇಂದ್ರದಲ್ಲಿ ಏಕಕಾಲಕ್ಕೆ ಬಿತ್ತನೆ ಬೀಜ ವಿತರಿಸುವ ಪ್ರಕ್ರಿಯೆ ಶುಕ್ರವಾರ ಆರಂಭವಾಗಿದೆ. ಉಳಿದ ಖಜೂರಿ ಮತ್ತು ಮಾದನಹಿಪ್ಪರಗಾ ಕೇಂದ್ರದಲ್ಲಿ ಶನಿವಾರದಿಂದ ಬಿತ್ತನೆ ಬೀಜ ವಿತರಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಶಶಾಂಕ್ ಶಹಾ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಈಗಾಗಲೇ ಆಳಂದ ವಲಯದಲ್ಲಿ 44 ಮಿ.ಮೀ., ಖಜೂರಿ 35.7 ಮಿ.ಮೀ., ನರೋಣಾ 25.4 ಮಿ.ಮೀ., ನಿಂಬರಗಾ 40 ಮಿ.ಮೀ., ಮಾದನಹಿಪ್ಪರಗಾ 41.7 ಮಿ.ಮೀ., ಸರಸಂಬಾ 18.6 ಮಿ.ಮೀ., ಕೊರಳ್ಳಿ 18.2 ಮಿ.ಮೀ ಮಳೆಯಾಗಿದೆ. ಫೆಬ್ರವರಿ ತಿಂಗಳಿಂದ ಇದುವರೆಗೂ ಆಳಂದ ವ್ಯಾಪ್ತಿಯಲ್ಲಿ 103 ಮಿ.ಮೀ. ಮಳೆಯಾಗಿದೆ.
ಆಳಂದ, ಖಜೂರಿ, ನಿಂಬರಗಾ, ಮಾದನಹಿಪ್ಪರಗಾ ಮತ್ತು ನರೋಣಾ ಈ ಐದು ವಲಯದಲ್ಲಿ ಏಕದಳ, ಬೇಳೆಕಾಳು, ಎಣ್ಣೆಕಾಳು ವಾಣಿಜ್ಯ ಬೆಳೆ ಸೇರಿ ಒಟ್ಟು 10 ಸಾವಿರ ನೀರಾವರಿ ಹಾಗೂ 79,545 ಹೆಕ್ಟೇರ್ ಖುಷ್ಕಿ ಜಮೀನು ಸೇರಿ ಒಟ್ಟು 89,545 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯಿಂದ ತಾಲೂಕಿನ ವ್ಯವಸಾಯ ಸೇವಾ ಸಹಕಾರ ಸಂಘ, ರೈತ ಶಕ್ತಿ ಗುಂಪು ಹೀಗೆ 29 ಕಡೆ ಗೊಬ್ಬರ ಮಾರಾಟಕ್ಕೆ ಪರವಾನಗಿ ನೀಡಲಾಗಿದೆ. ದಾಸ್ತಾನು ಕೈಗೊಂಡು ಮಾರಾಟ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.