ಇಂದಿನಿಂದ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನ
ಗುಲ್ಬರ್ಗ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಶನಿವಾರ ನಗರದಲ್ಲಿ ನಡೆಯುವ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ಎರಡು ದಿನಗಳ ಕಾಲ ಸಂಭ್ರಮದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ವಿಲಾಸವತಿ ಖೂಬಾ ಆಯ್ಕೆಯಾಗಿದ್ದಾರೆ. ಶಾಸಕ ಅಲ್ಲಂಪ್ರಭು ಪಾಟೀಲ್ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದು, ಈ ಸಮ್ಮೇಳನ ಸಿದ್ಧತೆ ಪೂರ್ಣಗೊಂಡಿದೆ.
ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಈಶ್ವರಯ್ಯ ಮಠ. ಪ್ರೊ. ಕುಪೇಂದ್ರ ಪಾಟೀಲ್, ಕಾರ್ಯದರ್ಶಿಗಳಾದ ಪ್ರೊ. ಕಲ್ಯಾಣರಾವ ಪಾಟೀಲ್, ಶಿವರಾಜ ಅಂಡಗಿ, ಕೋಶಾಧ್ಯಕ್ಷ ಪ್ರೊ. ಕೆ. ವಿಶ್ವನಾಥ ಹಾಗೂ ಸದಸ್ಯರಾದ ಡಿ. ವಿ. ಪಾಟೀಲ್, ಸಂಬಣ್ಣ ಹೊಳಕುಂದಿ, ಮಾರುತಿ ಮಾಲೆ, ಜಿ. ವಿನೋದಕುಮಾರ, ವಿಜಯಕುಮಾರ ತೇಗಲತಿಪ್ಪಿ, ಪ್ರೊ. ಜಯಶ್ರೀ ದಂಡೆ, ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ್ ನೆರವು ನೀಡುತ್ತಿದ್ದಾರೆ.
ನಗರದ ವಿಶ್ವೇಶ್ವರಯ್ಯ ಭವನದಲ್ಲಿ ನಡೆಯುವ ಸಮ್ಮೇಳನವನ್ನು ಜೂ. 8 ರಂದು ಬೆಳಗ್ಗೆ 10 ಗಂಟೆಗೆ ಡಾ. ಬಸವಲಿಂಗ ಪಟ್ಟದೇವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬೆಂಗಳೂರು ಅಧ್ಯಕ್ಷ ಗೊ.ರು. ಚನ್ನಬಸಪ್ಪ, ಉಪಾಧ್ಯಕ್ಷ ಚಂದ್ರಕಾಂತ ಬೆಲ್ಲದ, ಶಾಸಕ ಬಿ. ಆರ್. ಪಾಟೀಲ್, ಮಾಜಿ ಶಾಸಕರಾದ ಶಶೀಲ್ ನಮೋಶಿ, ಎಂ. ವೈ. ಪಾಟೀಲ್ ಇತರ ಗಣ್ಯರು, ಶರಣ ಸಾಹಿತಿಗಳು, ಸಾಹಿತ್ಯಾಶಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಎರಡು ದಿನಗಳ ಕಾಲ ವಿವಿಧ ವಿಷಯಗಳ ಕುರಿತು ಉಪನ್ಯಾಸ ನಡೆಯಲಿದ್ದು, ಜೂ. 9 ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಅಪ್ಪಾರಾವ ಅಕ್ಕೋಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.