ಸಂಕ್ಷಿಪ್ತ ಸುದ್ದಿ
ನಾಳೆ ಪಾದಯಾತ್ರೆ
ಗುಲ್ಬರ್ಗ: ಇಂಚಗೇರಿ ಶಾಖಾ ಮಠದಿಂದ ಜೂ. 9ರಂದು ಇಂಡಿ ತಾಲೂಕು ಶ್ರೀಕ್ಷೇತ್ರ ಇಂಚಗೇರಿ ಮಠಕ್ಕೆ ದಿಂಡಿ ಪಲ್ಲಕ್ಕಿ ಪಾದಯಾತ್ರೆ ಕೈಗೊಳ್ಳಲಾಗಿದೆ. ಶ್ರೀಸದ್ಗುರು ಸಮರ್ಥ ಮಾಧವಾನಂದ ಪ್ರಭುಗಳ ಪುಣ್ಯತಿಥಿ ಸಪ್ತಾಹದ ಅಂಗವಾಗಿ ಈ ಪಲ್ಲಕ್ಕಿ ಪಾದಯಾತ್ರೆ ಕೈಗೊಳ್ಳಲಾಗುತ್ತಿದ್ದು, ಜೂ. 10 ರಂದು ಸಕರಡಗಿ (ಬಿ), ಬಣಮಗಿ, ಗೌನಳ್ಳಿ, 11 ರಂದು ಜನವಾರ, ಸೊನ್ನ, 12 ರಂದು ಮಂದೇವಾಲ, ಮೊರಟಗಿ, 13 ರಂದು ಯರಗಲ್, ಸಿಂದಗಿ, 14 ರಂದು ಬಂದಾಳಕ್ರಾಸ್ (ಕನ್ನೊಳ್ಳಿ), ದೇವರ ಹಿಪ್ಪರಗಿ, 15 ರಂದು ಶಿವಣಗಿ, ಕೌಲಗಿ, 16 ರಂದು ಮಹಲ್ ಅಲ್ಲಾಪುರ ತಾಂಡಾ, ವಿಜಾಪುರ, 17 ರಂದು ಇಂಟಗೇರಿ ತಾಂಡಾ ಮಾರ್ಗವಾಗಿ ಇಂಚಗೇರಿ ಮಠಕ್ಕೆ ಪಾದಯಾತ್ರೆ ತಲುಪಲಿದೆ.ಈ ಪಾದಯಾತ್ರೆಗೆ ಶ್ರೀಕ್ಷೇತ್ರ ಇಂಚಗೇರಿ ಮಠದ ರೇವಣಸಿದ್ದೇಶ್ವರ ಮಹಾರಾಜರು ಅಲ್ಲಿಗೆ ಆಗಮಿಸಿ ಪ್ರವಚನ ನೀಡಲಿದ್ದಾರೆ.
ನಾಳೆ ಸಮ್ಮೇಳನ
ಗುಲ್ಬರ್ಗ: ಕರ್ನಾಟಕ ಪ್ರಾಂತ ರೈತ ಸಂಘದ ಜೇವರ್ಗಿ ತಾಲೂಕು 4ನೇ ಸಮ್ಮೇಳನ ಜೂ. 9ರಂದು ಜೇವರ್ಗಿ ಕನ್ಯಾ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಜ್ಯೋತಿಬಸ್ಸು ವೇದಿಕೆಯಲ್ಲಿ ನಡೆಯುವ ಸಮ್ಮೇಳನದಲ್ಲಿ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ, ಉಪಾಧ್ಯಕ್ಷ ಯು. ಬಸವರಾಜ, ಜಿಲ್ಲಾ ಕಾರ್ಯದರ್ಶಿ ಗೌರಮ್ಮ ಪಾಟೀಲ್ ಪಾಲ್ಗೊಳ್ಳಲಿದ್ದಾರೆ. ತಾಲೂಕು ಸಮಿತಿ ನವೀಕರಣ ಸದಸ್ಯರನ್ನು ಇದೇ ಸಂದರ್ಭದಲ್ಲಿ ನೇಮಕ ಮಾಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಪದಾಧಿಕಾರಿಗಳು ಭಾಗವಹಿಸಬೇಕೆಂದು ತಾಲೂಕು ಅಧ್ಯಕ್ಷ ಸುಭಾಷ ಹೊಸಮನಿ, ಕಾರ್ಯದರ್ಶಿ ಸಿದ್ದರಾಮ ಪ್ರಕಟಣೆಯಲ್ಲಿ ಕೋರಿದ್ದಾರೆ.
10ರಂದು ತಾಪಂ ಸಭೆ
ಗುಲ್ಬರ್ಗ: ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಜೂ.10ರಂದು ಬೆಳಗಿನ 11 ಗಂಟೆಗೆ ಗುಲ್ಬರ್ಗ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
ಕಚೇರಿ ಸ್ಥಳಾಂತರ
ಗುಲ್ಬರ್ಗ: ಹಿರಿಯ ನಾಗರಿಕರ ಸಹಾಯವಾಣಿ ಕಚೇರಿಯನ್ನು ನಗರದ ಪ್ರಮುಖ ರಸ್ತೆ ಹೊಂದಿಕೊಂಡಿರುವ ಪೊಲೀಸ್ ಅಧೀಕ್ಷರ ಕಚೇರಿ ಸಮೀಪದ ನಂ.2/481, ಮಾಡಗಿ ಕಾಂಪ್ಲೆಕ್ಸ್, ಜಗತ್ ಸರ್ಕಲ್, ಹೊಟೇಲ್ ಆಮಂತ್ರಣ ಹಿಂದುಗಡೆ ಸ್ಥಳಾಂತರಿಸಲಾಗಿದೆ ಎಂದು ಶಿವರುದ್ರ ಟ್ರಸ್ಟ್ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುರಸ್ಕಾರಕ್ಕೆ ಅರ್ಜಿ
ಗುಲ್ಬರ್ಗ: ಸಗರನಾಡಿನ ತಾಲೂಕುಗಳಾದ ಸುರಪುರ, ಶಹಾಪುರ, ಜೇವರ್ಗಿ ತಾಲೂಕುಗಳಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ತಾಲೂಕಿಗೆ ಪ್ರಥಮವಾಗಿ ತೇರ್ಗಡೆಯಾದ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ವಿ.ಸಿ. ನೀರಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಆಸಕ್ತಿ ವಹಿಸಿ ಜೂ.25ರೊಳಗಾಗಿ ಸಗರನಾಡು ನೌಕರರ ಕ್ಷೇಮಾಭಿವೃದ್ಧಿ ಸಂಘ, ಭಾಗ್ಯವಂತಿ ನಗರ, ಗುಲ್ಬರ್ಗ ವಿಳಾಸಕ್ಕೆ ಮಾಹಿತಿ ಸಲ್ಲಿಸಬಹುದು.