ಶಿಕ್ಷಕರ ವರ್ಗಾವಣೆ ಪರ್ವ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಯಾದಗಿರಿ ಜೂ.8
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮತ್ತೆ ಆರಂಭವಾಗಿದೆ. ಇದು ಜಿಲ್ಲೆಯ ಮಟ್ಟಿಗೆ ಶಿಕ್ಷಕರನ್ನು ಬೇರೆ ಕಡೆಗೆ ಕಳುಹಿಸುವ ಪ್ರಕ್ರಿಯೆಯಾಗಿದೆ. ಈ ಹಿಂದಿನ ವರ್ಷಗಳಲ್ಲಿ ನಡೆದ ವರ್ಗಾವಣೆಯಿಂದಾಗಿಯೇ ಜಿಲ್ಲೆಯಲ್ಲಿ ಸುಮಾರು 1100 ಪ್ರಾಥಮಿಕ ಶಾಲಾ ಶಿಕ್ಷಕರ ಕೊರತೆಯಿದ್ದು, ಈ ವರ್ಷ ಕೊರತೆ ಪ್ರಮಾಣ ಮತ್ತಷ್ಟು ಹೆಚ್ಚಲಿದೆ.ಇದು ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಯಾದಗಿರಿ ಸೇರಿದಂತೆ ಹೈ-ಕ ಭಾಗದಲ್ಲಿ ಶಿಕ್ಷಕರ ಕೊರತೆ ಸಾಕಷ್ಟಿದ್ದು, ನೇಮಕಾತಿ ಪ್ರಕ್ರಿಯೆಯೂ ಆಗುತ್ತಿಲ್ಲ. ಕಳೆದ ವರ್ಷ ನೇಮಕಾತಿ ಆದೇಶ ಮಾಡಲಾಗಿದ್ದರೂ ನಂತರ ಪ್ರಕ್ರಿಯೆ ಸ್ಥಗಿತಗೊಂಡಿತು. ಪ್ರಸ್ತುತ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಬಗ್ಗೆ ಪ್ರಸ್ತಾಪ ಮಾಡಿದ್ದು, ಇನ್ನಷ್ಟೇ ಪ್ರಕ್ರಿಯೆ ಆರಂಭವಾಗಬೇಕಿದೆ. ಆದರೆ ಹೈ-ಕ ಭಾಗದ ಅಭಿವೃದ್ಧಿಗಾಗಿ ತಿದ್ದುಪಡಿ ಮಾಡಿರುವ ಸಂವಿಧಾನದ 371ನೇ ಕಲಂ ಅನುಷ್ಠಾನವಾಗುವವರೆಗೆ ಶಿಕ್ಷಕರ ನೇಮಕಾತಿಯನ್ನೂ ತಡೆಹಿಡಿಯಲಾಗುತ್ತಿದೆ. ಇದರಿಂದ ಸದ್ಯ ಜಿಲ್ಲೆಯ ಪ್ರಾಥಮಿಕ ಶಾಲೆಗಳು ಶಿಕ್ಷಕರಿಲ್ಲದೇ ಕಾಲ ಕಳೆಯುವ ಅನಿವಾರ್ಯತೆ ಸೃಷ್ಟಿಯಾಗಿದೆ. ವರ್ಗಾವಣೆ ಕೋರಿ ಅರ್ಜಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದ್ದು, ಇನ್ನು ಮುಂದೆ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಅನುಪಾತದ ನಡುವೆ ಇನ್ನಷ್ಟು ಅಂತರ ಹೆಚ್ಚಲಿದೆ.
ಮಕ್ಕಳಿಗೆ ಕೊರತೆಯಿಲ್ಲ: ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲೇ ಈಗ ಸುಮಾರು 1100 ಶಿಕ್ಷಕರ ಹುದ್ದೆ ಖಾಲಿಯಾಗಿದೆ. ಇನ್ನು ಪ್ರೌಢಶಾಲೆಗಳಲ್ಲೂ ಶಿಕ್ಷಕರ ಕೊರತೆ ಸಾಕಷ್ಟಿದೆ. ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೇನೂ ಕೊರತೆಯಿಲ್ಲ. ಆದ್ದರಿಂದ ಕಡಿಮೆ ಮಕ್ಕಳಿರುವ ಶಾಲೆಗಳ ವಿಲೀನಗೊಳಿಸುವ ಸರ್ಕಾರದ ಕ್ರಮದಿಂದ ಯಾವುದೇ ಪರಿಣಾಮ ಬೀರದು. ಆದರೆ ಕಡಿಮೆ ಮಕ್ಕಳಿರುವ ಶಾಲೆಗಳನ್ನು ವಿಲೀನಗೊಳಿಸುವ ಸರ್ಕಾರ, ಹೆಚ್ಚಿನ ಸಂಖ್ಯೆಯ ಮಕ್ಕಳಿರುವಲ್ಲಿ ಶಿಕ್ಷಕರನ್ನು ನೇಮಿಸುವ ಬಗ್ಗೆ ಮಾತ್ರ ಗಮನಹರಿಸುತ್ತಿಲ್ಲ. ಆದ್ದರಿಂದ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಮಂಜೂರಾಗಿರುವ ಹುದ್ದೆಗಿಂತ ಕಡಿಮೆ ಶಿಕ್ಷಕರು ಕಾರ್ಯನಿರ್ವಹಿಸುವಂತಾಗಿದೆ.
ಹುದ್ದೆ 4896, ಖಾಲಿ 1100: ಈಗ ವರ್ಗಾವಣೆ ಪರ್ವ ಮತ್ತೆ ಆರಂಭಗೊಂಡಿದೆ. ವರ್ಗಾವಣೆ ಕೋರುವ ಶಿಕ್ಷಕರು ಜೂ.12ರೊಳಗೆ ಅರ್ಜಿ ಸಲ್ಲಿಸುವಂತೆ ಇಲಾಖೆ ಸೂಚಿಸಿದೆ. ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಜಿಲ್ಲೆಯ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಒಟ್ಟು 4896 ಶಿಕ್ಷಕರ ಹುದ್ದೆ ಮಂಜೂರಾಗಿದೆ. ಅದರಲ್ಲಿ ಕಳೆದ ವರ್ಷವೇ 1100ರಷ್ಟು ಶಿಕ್ಷಕರ ಹುದ್ದೆ ಖಾಲಿಯಿತ್ತು. ಈಗ ಮತ್ತೆ ಶಿಕ್ಷಕರು ಬೇರೆ ಜಿಲ್ಲೆಗಳಿಗೆ ವರ್ಗಾವಣೆಯಾಗುವುದು ನಿಶ್ಚಿತ. ವಿಪರ್ಯಾಸವೆಂದರೆ ಇಲ್ಲಿಗೆ ಬೇರೆ ಜಿಲ್ಲೆಗಳಿಂದ ವರ್ಗಾವಣೆ ಮಾಡಿಸಿಕೊಂಡು ಬರುವವರ ಪ್ರಮಾಣ ಬೆರಳೆಣಿಕೆಯಷ್ಟು ಶಿಕ್ಷಕರು ಮಾತ್ರ. ಆದ್ದರಿಂದ ಕೊರತೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಸಾಗಿದೆ.
ಬೇರೆ ಕಡೆಯಿಂದ ಬರುತ್ತಿಲ್ಲ: ಜಿಲ್ಲೆ ಶಿಕ್ಷಕರನ್ನು ಉತ್ಪಾದನೆ ಮಾಡುವ ಕೇಂದ್ರವಾಗಿದೆ. ರಾಜ್ಯದ ವಿವಿಧೆಡೆಯಿಂದ ಇಲ್ಲಿಗೆ ಬಂದು ಸೇವೆ ಆರಂಭಿಸುವ ಶಿಕ್ಷಕರು 2-3 ವರ್ಷಗಳಲ್ಲಿ ಇಲ್ಲಿಂದ ವರ್ಗಾವಣೆ ಮಾಡಿಕೊಂಡು ಹೋಗುತ್ತಾರೆ. ಆದರೆ ಬೇರೆ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯಾರೂ ಇಲ್ಲಿಗೆ ಬರುತ್ತಿಲ್ಲ. ಆದ್ದರಿಂದ ಪ್ರತಿ ವರ್ಗಾವಣೆ ಸಂದರ್ಭದಲ್ಲೂ ಶಿಕ್ಷಕರು ಖಾಲಿಯಾಗುತ್ತಿದ್ದಾರೆ. ಇದರಿಂದ ಖಾಲಿ ಹುದ್ದೆಗಳ ಸಂಖ್ಯೆ ಬೆಳೆಯುತ್ತಲೇ ಇದೆ. ಗುಣಮಟ್ಟದ ಶಿಕ್ಷಣ, ಹಿಂದುಳಿದ ಭಾಗಕ್ಕೆ ಆದ್ಯತೆ ಎಂದೆಲ್ಲ ಹೇಳುವ ಸರ್ಕಾರ, ಶಿಕ್ಷಕರ ಹುದ್ದೆ ತುಂಬಲು ಗಮನ ನೀಡುತ್ತಿಲ್ಲ.
ಶೀಘ್ರ 371 ಅನುಷ್ಠಾನವಾಗಬೇಕು: ಕಲಂ 371 ತಿದ್ದುಪಡಿಯಾಗಿದ್ದು, ಅದು ಈಗ ಅನುಷ್ಠಾನಗೊಳ್ಳಬೇಕಿದೆ. ಆಗ ಮಾತ್ರ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ದೊರೆಯುತ್ತದೆ. ಇದೇ ಕಾರಣಕ್ಕಾಗಿ 371 ಜಾರಿಯಾಗುವವರೆಗೆ ಯಾವುದೇ ನೇಮಕಾತಿ ನಡೆಸದಂತೆ ಒತ್ತಾಯಿಸಲಾಗುತ್ತಿದೆ.
ಈ ಒತ್ತಾಯವನ್ನು ಒಪ್ಪುವುದು ಕೂಡ ಅಗತ್ಯವಾಗಿದೆ. ಆದರೆ ಕಾಯ್ದೆ ಅನುಷ್ಠಾನ ಶೀಘ್ರವಾಗಿ ಆಗಬೇಕಿದೆ. ಇಲ್ಲದಿದ್ದರೆ ನೇಮಕಾತಿಯೇ ಇಲ್ಲದೇ ಖಾಲಿ ಹುದ್ದೆಗಳಲ್ಲೇ ಕಾಲ ಕಳೆಯಬೇಕಾಗುತ್ತದೆ. ಈ ಭಾಗದವರೇ ಶಿಕ್ಷಕರಾಗಿ ನೇಮಕಗೊಂಡಲ್ಲಿ ಮಾತ್ರ ವರ್ಗಾವಣೆ ಸಂದರ್ಭದಲ್ಲಿ ಹೊರ ಹೋಗುವವರ ಸಂಖ್ಯೆ ಕಡಿಮೆಯಾಗುತ್ತದೆ. ಆದ್ದರಿಂದ 371 ಶೀಘ್ರ ಅನುಷ್ಠಾನದ ಬಗ್ಗೆ ಸರ್ಕಾರ ಆದ್ಯತೆ ನೀಡಬೇಕಿದೆ. ನಂತರ ತಕ್ಷಣ ಶಿಕ್ಷಕರ ನೇಮಕಾತಿಗೆ ಗಮನ ನೀಡಬೇಕು. ಇಲ್ಲದಿದ್ದರೆ ಈ ಭಾಗದ ಶೈಕ್ಷಣಿಕ ಗುಣಮಟ್ಟ ಮತ್ತಷ್ಟು ಕುಸಿಯುವುದರಲ್ಲಿ ಅನುಮಾನವಿಲ್ಲ.