10 ವರ್ಷದಲ್ಲಿ 2.18 ಲಕ್ಷ ಜನಸಂಖ್ಯೆ ವೃದ್ಧಿ
ಕನ್ನಡಪ್ರಭ ವಾರ್ತೆ ಯಾದಗಿರಿ ಜೂ.9
ಜಿಲ್ಲೆಯ ಒಟ್ಟು ಜನಸಂಖ್ಯೆ 11,74,271ಕ್ಕೇರಿದೆ. ಇದರಲ್ಲಿ 5,90,329 ಪುರುಷರು ಹಾಗೂ 5,83,942 ಮಹಿಳೆಯರು ಇದ್ದಾರೆ. 2001ರ ಜನಗಣತಿ ಪ್ರಕಾರ ಜಿಲ್ಲೆಯ ಜನಸಂಖ್ಯೆ 9,56,180 ಇತ್ತು. ಅಂದರೆ 10 ವರ್ಷಗಳಲ್ಲಿ 2.18 ಲಕ್ಷ ಜನಸಂಖ್ಯೆ ಹೆಚ್ಚಾಗಿದೆ. 2011ರ ಜನಗಣತಿಯಲ್ಲಿ ಇಂತಹ ಹಲವು ಕುತೂಹಲಕರ ಸಂಗತಿ ಹೊರಬಿದ್ದಿದೆ.
ಒಟ್ಟು ಜನಸಂಖ್ಯೆಯಲ್ಲಿ 6 ವರ್ಷದೊಳಗಿನ ಮಕ್ಕಳ ಸಂಖ್ಯೆ 1,90,279 ಆಗಿದೆ. ಸಾಕ್ಷರತಾ ಪ್ರಮಾಣ ಶೇ. 51.83 ಆಗಿದ್ದು, ರಾಜ್ಯಮಟ್ಟದಲ್ಲಿ ಯಾದಗಿರಿ ಸಾಕ್ಷರತೆಯಲ್ಲಿ ಕೊನೆ ಸ್ಥಾನದಲ್ಲಿದೆ.
ಆದರೆ ಒಟ್ಟು ಜನಸಂಖ್ಯೆಯಲ್ಲಿ ಮಕ್ಕಳ ಪ್ರಮಾಣ ಶೇ.16.20 ಇದ್ದು, ಇದು ರಾಜ್ಯದಲ್ಲಿ ಅತಿ ಹೆಚ್ಚಾಗಿದೆ. ನಂತರದ ಸ್ಥಾನ ರಾಯಚೂರು ಪಡೆದುಕೊಂಡಿದೆ. ಜನಸಂಖ್ಯೆ ಹೆಚ್ಚಳದ ಪ್ರಮಾಣದಲ್ಲಿ ಬೆಂಗಳೂರು ನಂತರದ ಸ್ಥಾನ ಯಾದಗಿರಿಗೆ ಸಿಕ್ಕಿದೆ. ಜಿಲ್ಲೆಯ ಜನಸಂಖ್ಯೆ ಹೆಚ್ಚಳದ ಪ್ರಮಾಣ ಶೇ. 22.81 ಆಗಿದೆ.
ಜನಸಾಂದ್ರತೆ ಪ್ರಮಾಣವೂ ವೃದ್ಧಿ: ಜಿಲ್ಲೆಯ ಜನಸಾಂದ್ರತೆ ಪ್ರಮಾಣವೂ 10 ವರ್ಷಗಳಲ್ಲಿ ಜಾಸ್ತಿಯಾಗಿದೆ. ಪ್ರತಿ ಚದರ್ ಕಿಲೋ ಮೀಟರ್ ವ್ಯಾಪ್ತಿಯಲ್ಲಿ 223 ಜನರು ವಾಸಿಸುತ್ತಿದ್ದಾರೆ. ಇದು 2001ರಲ್ಲಿ 183 ಇತ್ತು. ಜಿಲ್ಲೆಯ ವಿಸ್ತೀರ್ಣ 5,270 ಚದರ್ ಕಿಲೋ ಮೀಟರ್ ಇದೆ.
ಸಾಕ್ಷರತೆ- ಕೊನೆ ಸ್ಥಾನದಲ್ಲಿದ್ರೂ ಅಲ್ಪ ತೃಪ್ತಿ: ಜಿಲ್ಲೆಯ ಸಾಕ್ಷರತಾ ಪ್ರಮಾಣ ಶೇ. 51.83 ಆಗಿದೆ. 2001ರ ಜನಗಣತಿ ಪ್ರಕಾರ ಜಿಲ್ಲೆಯ ಸಾಕ್ಷರತಾ ಪ್ರಮಾಣ 39.90 ಆಗಿತ್ತು. ಶೇ. 62.25ರಷ್ಟು ಪುರುಷ ಸಾಕ್ಷರರು ಹಾಗೂ 41.38 ಮಹಿಳಾ ಸಾಕ್ಷರರು ಇದ್ದಾರೆ. 2001ರಲ್ಲಿ ಶೇ. 51.35 ಪುರುಷ ಹಾಗೂ ಶೇ. 28.32 ಮಹಿಳಾ ಸಾಕ್ಷರರಿದ್ದರು. ಜಿಲ್ಲೆಯಲ್ಲಿ ಸದ್ಯ 3,06,751 ಪುರುಷ ಹಾಗೂ 2,03,252 ಮಹಿಳೆಯರು ಸೇರಿದಂತೆ 5,10,003 ಜನ ಸಾಕ್ಷಕರಿದ್ದಾರೆ.
ಜಿಲ್ಲೆಯಲ್ಲಿ ಪುರುಷ ಹಾಗೂ ಸ್ತ್ರೀಯರ ಅನುಪಾತದಲ್ಲಿ ಈ ಬಾರಿ ಕೊಂಚ ಏರಿಕೆ ಕಂಡಿದೆ. ಪ್ರತಿ 1000 ಪುರುಷರಿಗೆ 989 ಮಹಿಳೆಯರಿದ್ದಾರೆ. 2001ರಲ್ಲಿ 983 ಮಹಿಳೆಯರಿದ್ದರು. ಅಂದರೆ 10 ವರ್ಷಗಳ ಅವಧಿಯಲ್ಲಿ ಪ್ರತಿ ಸಾವಿರ ಪುರುಷರಿಗೆ 6ರಷ್ಟು ಸ್ತ್ರೀಯರು ಹೆಚ್ಚಾಗಿದ್ದಾರೆ.
ಮಕ್ಕಳ ಸಂಖ್ಯೆ ಹೆಚ್ಚಳ: ಜಿಲ್ಲೆಯಲ್ಲಿ 0- 6 ವರ್ಷದೊಳಗಿನ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. 2011ರ ಗಣತಿ ಪ್ರಕಾರ ಜಿಲ್ಲೆಯಲ್ಲಿ 6 ವರ್ಷದೊಳಗಿನ 1,90,279 ಮಕ್ಕಳಿದ್ದಾರೆ. ಇದರಲ್ಲಿ 97,522 ಬಾಲಕರು ಹಾಗೂ 92,757 ಬಾಲಕಿಯರಿದ್ದಾರೆ.
ಮಕ್ಕಳ ಪ್ರಮಾಣ ಹೆಚ್ಚಿರುವ ಅಂಶದಲ್ಲಿ ರಾಜ್ಯದಲ್ಲೇ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಶೇ. 16.20ರಷ್ಟು ಮಕ್ಕಳಿದ್ದಾರೆ. ಆದರೆ ಮಕ್ಕಳ ಲಿಂಗಾನುಪಾತದಲ್ಲಿ ವ್ಯಾಪಕ ಕಂದಕ ಏರ್ಪಟ್ಟಿದೆ. ಪ್ರತಿ 100 ಬಾಲಕರಿದ್ದರೆ 951 ಬಾಲಕಿಯರಿದ್ದಾರೆ.
ನಗರ ಜನಸಂಖ್ಯೆ: ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಶೇ. 18.79ರಷ್ಟು ಜನರು ನಗರಗಳಲ್ಲಿ ವಾಸಿಸುತ್ತಿದ್ದಾರೆ. ಒಟ್ಟು 2,20,677 ಜನರು ನಗರವಾಸಿಗಳಾಗಿದ್ದು, ಅವರಲ್ಲಿ 1,11,251 ಪುರುಷರು, 1,09,426 ಮಹಿಳೆಯರಿದ್ದಾರೆ.
ನಗರದಲ್ಲಿ ಸ್ತ್ರೀ- ಪುರುಷ ಲಿಂಗಾನುಪಾತ 984 ಆಗಿದೆ. 0- 6 ವರ್ಷದೊಳಗಿನ 32,152 ಮಕ್ಕಳು ನಗರಗಳಲ್ಲಿದ್ದಾರೆ. ನಗರ ಜನಸಂಖ್ಯೆಯಲ್ಲಿ ಶೇ. 72.01ರಷ್ಟು ಸಾಕ್ಷರತಾ ಪ್ರಮಾಣ ಹೊಂದಿದ್ದು, ಅವರಲ್ಲಿ ಪುರುಷರು ಶೇ. 80.03 ಹಾಗೂ ಮಹಿಳೆಯರು ಶೇ. 63.92 ಆಗಿದೆ. ಅಂದರೆ ಜಿಲ್ಲೆಯ ನಗರಗಳಲ್ಲಿ 1,35,759 ಜನರು ಸಾಕ್ಷರರಿದ್ದಾರೆ.
ಗ್ರಾಮೀಣ ಜನಸಂಖ್ಯೆ: 2011ರ ಜನಗಣತಿ ಪ್ರಕಾರ- ಜಿಲ್ಲೆಯ ಒಟ್ಟು ಜನಸಂಖ್ಯೆಯ ಶೇ. 81.21ರಷ್ಟು ಜನರು ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದಾರೆ. 4,79,078 ಪುರುಷ ಹಾಗೂ 4,74,516 ಮಹಿಳೆಯರು ಸೇರಿದಂತೆ ಒಟ್ಟು 9,53,594 ಜನರು ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಪ್ರತಿ 1000 ಪುರುಷರಿಗೆ 990 ಮಹಿಳೆಯರಿದ್ದಾರೆ. 0- 6 ವರ್ಷದೊಳಗಿನ 80,922 ಬಾಲಕರು ಹಾಗೂ 77,205 ಬಾಲಕಿಯರು ಸೇರಿದಂತೆ 1,58,127 ಮಕ್ಕಳು ಗ್ರಾಮೀಣ ಭಾಗದಲ್ಲಿದ್ದಾರೆ.
ಗ್ರಾಮೀಣ ಭಾಗದ ಸಾಕ್ಷರತಾ ಪ್ರಮಾಣ ಶೇ. 47.05 ಆಗಿದ್ದು, ಪುರುಷರು ಶೇ.58.02ರಷ್ಟು, ಮಹಿಳೆಯರು ಶೇ. 36.05ರಷ್ಟು ಸಾಕ್ಷರರಿದ್ದಾರೆ. ಅಂದರೆ ಜಿಲ್ಲೆಯ ಗ್ರಾಮೀಣ ಭಾಗದ 2,30,998 ಪುರುಷರು ಹಾಗೂ 1,43,246 ಮಹಿಳೆಯರು ಸೇರಿದಂತೆ ಒಟ್ಟು 3,74,244 ಜನ ಸಾಕ್ಷರರಾಗಿದ್ದಾರೆ.
ತಾಲೂಕುಗಳ ಜನಸಂಖ್ಯೆ..
1. ಯಾದಗಿರಿ ತಾಲೂಕಿನಲ್ಲಿ ಒಟ್ಟು 3,98,359 ಜನಸಂಖ್ಯೆಯಿದ್ದು, ಅದರಲ್ಲಿ 1,98,698 ಪುರುಷರು, 1,99,661 ಮಹಿಳೆಯರಿದ್ದಾರೆ. ಈ ಪೈಕಿ 1,48,430 ಪುರುಷ ಹಾಗೂ 1,49,589 ಮಹಿಳೆಯರು ಸೇರಿದಂತೆ 2,98,019 ಜನರು ಗ್ರಾಮೀಣ ಪ್ರದೇಶದಲ್ಲಿದ್ದಾರೆ. ನಗರ ಪ್ರದೇಶದಲ್ಲಿ 1,00,340 ಜನರಿದ್ದು, 50,2068 ಪುರುಷ ಹಾಗೂ 50,072 ಮಹಿಳೆಯರಿದ್ದಾರೆ.
2. ಶಹಾಪುರ ತಾಲೂಕಿನ ಜನಸಂಖ್ಯೆ 3,63,621. ಅವರಲ್ಲಿ 1,83,458 ಪುರುಷ ಹಾಗೂ 1,80,163 ಮಹಿಳೆಯರಿದ್ದಾರೆ. 2,94,682 ಜನರು ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದರೆ, 68,939 ಜನ ನಗರ ಪ್ರದೇಶದವರಾಗಿದ್ದಾರೆ.
3. ಸುರಪುರ ತಾಲೂಕಿನ ಜನಸಂಖ್ಯೆ 4,12,291. ಅವರಲ್ಲಿ 2,08,173 ಪುರುಷ, 2,04,118 ಮಹಿಳೆಯರು. 1,82,403 ಪುರುಷ, 1,78,490 ಮಹಿಳೆ ಸೇರಿ 3,60,893 ಜನ ಗ್ರಾಮೀಣ ಭಾಗದಲ್ಲಿದ್ದಾರೆ. 25,770 ಪುರುಷ, 25,628 ಮಹಿಳೆ ಸೇರಿ 51,398 ಜನ ನಗರದಲ್ಲಿದ್ದಾರೆ.
ತಾಲೂಕುವಾರು ಸಾಕ್ಷರತೆ..
1. ಯಾದಗಿರಿ ತಾಲೂಕಿನ ಒಟ್ಟು 3,98,359 ಜನಸಂಖ್ಯೆ ಪೈಕಿ 1,64,419 ಜನರು ಸಾಕ್ಷರರಾಗಿದ್ದಾರೆ. ಅವರಲ್ಲಿ 97,333 ಪುರುಷ ಹಾಗೂ 67,086 ಮಹಿಳೆಯರಿದ್ದಾರೆ.
2. ಶಹಾಪುರ ತಾಲೂಕಿನ 3,63,621 ಜನರ ಪೈಕಿ 1,56,686 ಜನರು ಸಾಕ್ಷರರಾಗಿದ್ದಾರೆ. ಅವರಲ್ಲಿ 94,271 ಪುರುಷ ಹಾಗೂ 62,415 ಮಹಿಳಾ ಸಾಕ್ಷರರಿದ್ದಾರೆ.
3. ಸುರಪುರ ತಾಲೂಕಿನ ಒಟ್ಟು 4,12,291 ಜನಸಂಖ್ಯೆ ಪೈಕಿ 1,88,898 ಜನರು ಸಾಕ್ಷರರಾಗಿದ್ದಾರೆ. ಅವರಲ್ಲಿ 1,15,147 ಪುರುಷ ಹಾಗೂ 73,751 ಮಹಿಳೆಯರಿದ್ದಾರೆ.