ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಗ್ಗದ ಪ್ರಚಾರಕ್ಕೆ ಜೋತು ಬೀಳಬೇಡಿ...

Lingaraj Badiger
Updated On : 10 Jun 2013, 11:29 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.9
ವಚನಗಳನ್ನು ಬದುಕಿಗೆ ಬಂಡವಾಳವನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಬೇಡಿ. ಅಗ್ಗದ ಪ್ರಚಾರಕ್ಕೆ ಜೋತು ಬೀಳಬೇಡಿ ಎಂದು ಯುವ ವಚನಕಾರರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಗೊ.ರು. ಚನ್ನಬಸಪ್ಪ ಕಿವಿಮಾತು ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ನಗರದ ವಿಶ್ವೇಶ್ವರ ಭವನದಲ್ಲಿ ನಡೆಸಿದ ಜಿಲ್ಲಾ ಮಟ್ಟದ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜೀವನದಲ್ಲಿ ಅಳವಡಿಸಿಕೊಳ್ಳುತ್ತಿಲ್ಲ: 23,600 ಪ್ರಾಚೀನ ಶರಣರ ವಚನಗಳಿದ್ದರೆ, 60,600 ಆಧುನಿಕ ವಚನಕಾರರ ವಚನಗಳಿವೆ. ಇವುಗಳ ಪೈಕಿ ಬಸವಣ್ಣ ಸೇರಿದಂತೆ ಪ್ರಮುಖರ ವಚನಗಳನ್ನು ಜನರು ಅಧ್ಯಯನ ಮಾಡುತ್ತಾರೆ, ಪಠಣ ಮಾಡುತ್ತಾರೆ, ವಚನಗಳನ್ನು ಹಾಡುತ್ತಾರೆ. ಆದರೆ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆಯುವ ಮಾರ್ಗ ಮಾತ್ರ ಕಂಡುಕೊಳ್ಳುತ್ತಿಲ್ಲ ಎಂದು ವಿಷಾದಿಸಿದರು.
ವಚನಗಳ ಸಾರ ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಯಾರೂ ಪ್ರಯತ್ನ ಮಾಡುವುದಿಲ್ಲ. ಪ್ರಸ್ತುತ ದಿನಗಳಲ್ಲಿ ವಚನಗಳ ಮನನ ಮತ್ತು ಅಧ್ಯಯನ ಮಾಡುವುದು ಅಗತ್ಯವಾಗಿದೆ ಎಂದರು.
ಪರಿಷತ್ ಕಾರ್ಯಕ್ಕೆ ಶ್ಲಾಘನೆ: ವ್ಯಕ್ತಿಯ ವ್ಯಕ್ತಿತ್ವ, ಚಾರಿತ್ರ್ಯಶೀಲ ಹಾಗೂ ಉತ್ತಮ ಸಂಸ್ಕಾರ ನಿರ್ಮಾಣ ಮಾಡಲು ಇಂತಹ ಶರಣ ಸಾಹಿತ್ಯ ಸಮ್ಮೇಳನ ನಡೆಯುವುದು ಅತ್ಯವಶ್ಯ. ಈ ನಿಟ್ಟಿನಲ್ಲಿ ಶರಣ ಸಾಹಿತ್ಯ ಪರಿಷತ್ತು ಮೊದಲ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ ಎಂದರು.
ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಂಸ್ಕೃತಿ, ನೈತಿಕ ಮೌಲ್ಯ ಇಂದು ಅಧಃಪತನಕ್ಕೀಡಾಗುತ್ತಿವೆ. ಅವುಗಳನ್ನು ಉಳಿಸಿಕೊಂಡು ಹೋಗಬೇಕಾದರೆ ಶರಣ ವಚನಗಳ ಅಧ್ಯಯನ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಸಲಹೆ ನೀಡಿದರು.
ಇಂದಿನ ನಿಮ್ಮ ನಡೆ ಹೀಗಿರಲಿ..: ಹಿರಿಯರಿಗೆ, ಮಕ್ಕಳಿಗೆ, ಮಹಿಳೆಯರಿಗೆ, ಅನಾಥರಿಗೆ, ರೋಗಿಗಳಿಗೆ, ಬಡವರ ಬಗ್ಗೆ ಅನುಕಂಪ ಬೆಳೆಸಿಕೊಳ್ಳಿ. ವ್ಯಾಪಾರಿಗಳ, ಶ್ರೀಮಂತರ, ಅಧಿಕಾರಿಗಳ, ದಲ್ಲಾಳಿಗಳ ಬಗ್ಗೆ ಎಚ್ಚರದಿಂದ ಇರಿ. ವೈದ್ಯರು, ಕಲಾವಿದರು, ವಕೀಲರು, ಶ್ರಮಿಕರು, ಕಾರ್ಮಿಕರ ಬಗ್ಗೆ ಆಧಾರ ಅಭಿಮಾನ ಇರಲಿ. ಕಳ್ಳರು, ವಂಚಕರು, ಜೂಜುಕೋರರ, ಸೋಮಾರಿಗಳ ಬಗ್ಗೆ ಕಚ್ಚೆಚ್ಚರವಾಗಿರಿ ಎಂದು ಸಲಹೆ ಮಾಡಿದರು.
ಮುಂದಿನ ಪೀಳಿಗೆಗೆ ಮಾದರಿಯಾಗಿ: ಸಮ್ಮೇಳನಾಧ್ಯಕ್ಷೆ ಡಾ. ವಿಲಾಸವತಿ ಖೂಬಾ ಮಾತನಾಡಿ, ನಿರಂತರವಾಗಿ ಇಂತಹ ಶರಣ ಸಾಹಿತ್ಯ ಸಮ್ಮೇಳನ ನಡೆಸುವುದರ ಮೂಲಕ ಯುವ ಪೀಳಿಗೆಗೆ ಶರಣರ ವಚನಗಳು ತಿಳಿದುಕೊಳ್ಳಲು ಸಾಧ್ಯವಾಗಲಿದೆ ಎಂದರು.
ಹಿರಿಯರು ವಚನಗಳ ಸಾರ ಅರ್ಥೈಸಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಅವರ ಮುಂದಿನ ಪೀಳಿಗೆಯು ಅವರ ಮಾರ್ಗದಲ್ಲಿ ನಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಜನ ಪ್ರಯತ್ನಿಸಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಡಾ. ಮಹಾಂತ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಅಲ್ಲಂಪ್ರಭು ಪಾಟೀಲ್, ಉಪಾಧ್ಯಕ್ಷ ಡಿ.ವಿ. ಪಾಟೀಲ್, ಮಾರುತಿರಾವ ಮಾಲೆ, ಪರಿಷತ್ತಿನ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ, ಉಪಾಧ್ಯಕ್ಷ ಕುಪೇಂದ್ರ ಪಾಟೀಲ್, ಡಾ. ಈಶ್ವರಯ್ಯ ಮಠ, ಪ್ರಧಾನ ಕಾರ್ಯದರ್ಶಿ ಪ್ರೊ. ಕಲ್ಯಾಣರಾವ ಪಾಟೀಲ್, ಕಾರ್ಯದರ್ಶಿ ಶಿವರಾಜ ಅಂಡಗಿ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ್ ಇತರ, ವಿಜಯಕುಮಾರ ತೇಗಲತಿಪ್ಪಿ, ಶಿವಾನಂದ ಕಶೆಟ್ಟಿ, ಗಣ್ಯರು, ಶರಣ ಸಾಹಿತಿಗಳು ಇದ್ದರು.
ಇದೇ ವೇಳೆ ಸಾಹಿತಿ ಎಲ್‌ಬಿಕೆ ಆಲ್ದಾಳ, ಶಿವಶರಣಪ್ಪ ತರನಳ್ಳಿ, ರವೀಂದ್ರ ಶಾಬಾದಿ, ಹುಚ್ಚಪ್ಪ ಬೋದನ, ಬಸವರಾಜ ಧೂಳಾಗುಂಡಿ, ಸಿದ್ರಾಮಪ್ಪ ಬಾಲಪಗೋಳ, ಆರ್. ಎಸ್. ಸ್ವಾಮಿ, ಶಂಕರರಾವ ಹುಲ್ಲೂರ, ಮಹಾಲಿಂಗಪ್ಪ ಇಂಗಿನಶೆಟ್ಟಿ ಸೇರಿದಂತೆ ಹಲವಾರು ಶರಣರಿಗೆ ಸನ್ಮಾನಿಸಲಾಯಿತು.

ಸಮ್ಮೇಳನದ ನಿರ್ಣಯಗಳು...
1. ಬಸವಾದಿ ಶರಣರ ವನಗಳನ್ನು ವಿವಿಧ ಭಾಷೆಗಳಲ್ಲಿ ಅನುವಾದಿಸಿ, ಪ್ರಕಟಿಸಲು ಅನುದಾನ ನೀಡಿದ ಸರ್ಕಾರಕ್ಕೆ ಸಮ್ಮೇಳನ ಅಭಿನಂದನೆ ಸಲ್ಲಿಸಿತು.
2. ಗುಲ್ಬರ್ಗ ವಿವಿಗೆ ಬಸವೇಶ್ವರ ವಿಶ್ವವಿದ್ಯಾಲಯ ಎಂದು ನಾಮಕರಣಕ್ಕೆ ಆಗ್ರಹ.
3. ಶರಣರ ತೀರ್ಥ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಪ್ರತ್ಯೇಕವಾದ ಕರ್ನಾಟಕ ರಾಜ್ಯ ಶರಣರ ತೀರ್ಥಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಒತ್ತಾಯಿಸಿತು.
4. ಈ ಪ್ರದೇಶದ ಅಭಿವೃದ್ಧಿಗಾಗಿ ರಚನೆಯಾಗುವ ಹೈ.ಕ. ಅಭಿವೃದ್ಧಿ ಮಂಡಳಿಯನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಎಂದು ನಾಮಕರಣ ಮಾಡಲು ಸರ್ಕಾರಕ್ಕೆ ಒತ್ತಾಯಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement