ಬಾಲಕಿ ನಿಶ್ಚಿತಾರ್ಥ ತಡೆದ ವ್ಯಕ್ತಿ ಮೇಲೆ ಹಲ್ಲೆ; 6 ಜನರ ಬಂಧನ
ಗುಲ್ಬರ್ಗ: ಬಾಲಕಿಯೊಬ್ಬಳ ನಿಶ್ಚಿತಾರ್ಥ ಬೇಡ ಎಂದು ತಿಳಿಹೇಳಲು ಹೋದ ವ್ಯಕ್ತಿ ಮೇಲೆ 8 ಜನರು ಹಲ್ಲೆ ಮಾಡಿದ ಘಟನೆ ಇತ್ತೀಚೆಗೆ ಅಫಜಲ್ಪುರ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಕರ್ಜಗಿ ಗ್ರಾಮದ ಮಲಕಪ್ಪ ಧರ್ಮಣ್ಣ ಮಠದ ಎಂಬಾತನ 14 ವರ್ಷದ ಮಗಳ ನಿಶ್ಚಿತಾರ್ಥ ಅದೇ ಗ್ರಾಮದ 35 ವರ್ಷದ ವ್ಯಕ್ತಿಯೊಂದಿಗೆ ನಡೆಯುವುದರಲ್ಲಿತ್ತು. ಇದನ್ನು ಅರಿತ ಬಾಲಕಿ ತನ್ನ ಚಿಕ್ಕಪ್ಪ ಚಂದ್ರಕಾಂತನ ಬಳಿ ಹೋಗಿ ಅಳಲು ತೋಡಿಕೊಂಡಳು.
ಇಬ್ಬರು ಪರಾರಿ: ಬಾಲಕಿಯಿಂದ ಮಾಹಿತಿ ತಿಳಿದ ಬಳಿಕ ಚಂದ್ರಕಾಂತ, ತನ್ನ ಅಣ್ಣ ಮಲಕಪ್ಪನ ಬಳಿ ಬಂದು ಚಿಕ್ಕ ಮಗುವಿಗೆ ಈಗಲೇ ಮದುವೆ ತಯಾರಿ ಮಾಡುವುದು ಸರಿ ಅಲ್ಲ ಎಂದು ತಿಳಿ ಹೇಳಿದ. ಇದಕ್ಕೆ ಒಪ್ಪದ ಬಾಲಕಿ ತಂದೆ ಮಲಕಪ್ಪ, ತಾಯಿ ರಾಜೇಶ್ವರಿ, ಅಣ್ಣ ಪ್ರದೀಪ, ಅತ್ತೆಯಂದಿರಾದ ಸುಮಿತ್ರಾಬಾಯಿ, ಲಕ್ಷ್ಮೀಬಾಯಿ ಸಮೀಪದ ಕೇರಿಯ ರಮೇಶ ಹಾಗೂ ಬಾಬು ಮತ್ತು ವರ ಸೇರಿ ಚಂದ್ರಕಾಂತನ ಮೇಲೆ ಹಲ್ಲೆ ಮಾಡಿದ್ದಾರೆ. ಚಂದ್ರಕಾಂತ ಪಟ್ಟಣದ ಪೊಲೀಸ್ ಠಾಣೆ ತೆರಳಿ ಹಲ್ಲೆ ಮಾಡಿದ 8 ಜನರ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಿಎಸ್ಐ ಮಂಜುನಾಥ ಹಾಗೂ ಸಿಬ್ಬಂದಿ ಕರ್ಜಗಿ ಗ್ರಾಮಕ್ಕೆ ತೆರಳಿ 6 ಜನರನ್ನು ಬಂಧಿಸಿದ್ದಾರೆ. ರಮೇಶ ಹಾಗೂ ಬಾಬು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲ ಮಂದಿರಕ್ಕೆ: ಪಿಎಸ್ಐ ಮಂಜುನಾಥ ಠಾಣೆಗೆ ಮರಳಿ ಬರುವಾಗ ಬಾಲಕಿಯನ್ನು ಕರೆ ತಂದರು. ಅವಳೊಂದಿಗೆ ಚಿಕ್ಕಪ್ಪ ಚಂದ್ರಕಾಂತ ಮತ್ತು ಚಿಕ್ಕಮ್ಮ ಸಹ ಬಂದಿದ್ದರು. ಬಾಲಕಿ ನಿಶ್ಚಿತಾರ್ಥ ಸಂಬಂಧ ನಡೆದ ಘಟನೆ ಕುರಿತು ವಿವರಿಸಿ ತಮ್ಮ ರಕ್ಷಣೆಗೆ ಬರುವಂತೆ ಮನವಿ ಮಾಡಿದರು. ಬಾಲಕಿಯನ್ನು ಜಿಲ್ಲಾ ಸುಧಾರಣೆ ಸಂಸ್ಥೆಯ ಸರ್ಕಾರಿ ಬಾಲಕಿಯರ ಬಾಲ ಮಂದಿರಕ್ಕೆ ಒಪ್ಪಿಸಿದರು.