ಮಠ-ಮಾನ್ಯ ಜಾಗೃತಿ ಮೂಡಿಸುವ ಕೇಂದ್ರಗಳಾಗಲಿ
ಕನ್ನಡಪ್ರಭ ವಾರ್ತೆ, ಯಾದಗಿರಿ, ಜೂ.9
ಆಧುನಿಕ ಜಗತ್ತಿನಲ್ಲಿ ಮಠ ಮಾನ್ಯಗಳು ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ನೊಂದ ಜೀವಿಗಳಿಗೆ ಆತ್ಮವಿಶ್ವಾಸ ತುಂಬುವ ಕೇಂದ್ರಗಳಾಗಿ ಮಾರ್ಪಟ್ಟರೆ ಮಾತ್ರ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ ಎಂದು ಗುರುಮಠಕಲ್ ಖಾಸಾಮಠದ ಶಾಂತವೀರ ಸ್ವಾಮೀಜಿ ನುಡಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ವಿಕಾಸ ಅಕಾಡೆಮಿ ಯಾದಗಿರಿ, ವೀರಮಾಹೇಶ್ವರ ಜಂಗಮ ಕ್ಷೇಮಾಭಿವೃದ್ಧಿ ಸಂಘ ಹಾಗೂ ರಾಚೋಟಿ ವೀರಣ್ಣ ಸದ್ಭಕ್ತ ಮಂಡಳಿ ಸಹಯೋಗದಲ್ಲಿ ರಾಚೋಟಿ ವೀರಣ್ಣ ದೇವಸ್ಥಾನದ ಚಿತ್ರ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಹಾಯಕ: ಪುರಾತನ ದೇವಸ್ಥಾನಗಳು ನಾಡಿನ ಆಸ್ತಿ. ಕಾರಣ ಅವುಗಳ ರಕ್ಷಣೆ ಮಾಡುವುದು ಅವಶ್ಯಕವಾಗಿದೆ. ಅವುಗಳಿಂದ ಯುವ ಜನತೆಗೆ ಹಿಂದಿನ ಸಂಸ್ಕೃತಿ, ಪರಂಪರೆ ತಿಳಿದುಕೊಳ್ಳಲು ಸಹಾಯಕವಾಗುತ್ತದೆ ಎಂದರು.
ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ್ ಸೇಡಂ ಚಿತ್ರ ಪುಸ್ತಕ ಲೋಕಾರ್ಪಣೆ ಮಾಡಿ, ಜಿಲ್ಲೆಯ ಪವಿತ್ರ ಹಾಗೂ ಐತಿಹಾಸಿಕ ದೇವಸ್ಥಾನದ ಪರಿಚಯ ಪುಸ್ತಕ ಹೊರತಂದಿರುವುದು ಇತಿಹಾಸ ಅಧ್ಯಯನ ವಿದ್ಯಾರ್ಥಿಗಳಿಗೆ ಮತ್ತು ಭಕ್ತರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ಹೇಳಿದರು.
ನಗರ ವೀರಶೈವ ಸಮಾಜದ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ ಮಾತನಾಡಿ, ಭಕ್ತರು ಹಾಗೂ ಜಿಲ್ಲಾಡಳಿತ ದೇವಸ್ಥಾನ ಅಭಿವೃದ್ಧಿಪಡಿಸಿದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ ಎಂದರು.
ವಿಶ್ವಸೇವಾ ಮಿಷನ್ ಅಧ್ಯಕ್ಷ ವಿಶ್ವನಾಥ ಸ್ವಾಮಿಜಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಮಾಹೇಶ್ವರ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೀರಭದ್ರಯ್ಯ ಸ್ವಾಮಿ ಮಳಿಬಗಿಮಠ ವಹಿಸಿ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ನೀಲಯ್ಯ ಸ್ವಾಮಿ ಚಿತ್ತಾಪುರ ಉಪಸ್ಥಿತರಿದ್ದರು. ಸಾಹಿತಿ ಮಹಾದೇವಯ್ಯ ಕರದಳ್ಳಿ ಪ್ರಾಸ್ತಾವಿಕ ಮಾತನಾಡಿ, ಪುಸ್ತಕ ಪರಿಚಯ ಮಾಡಿದರು. ವೀರಶೈವ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಚೋಟಿ ಸ್ವಾಮಿ ಎಣ್ಣಿ ಸ್ವಾಗತಿಸಿದರು. ನೀಲಕಂಠರಾಯ ಯಲ್ಹೇರಿ ವಂದಿಸಿದರು.