'ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಖಚಿತ'
ಸುರಪುರ: ಪಣಜಿಯಲ್ಲಿ ಭಾನುವಾರ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಆಯ್ಕೆಯಾಗುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಇಲ್ಲಿಯ ಗಾಂಧೀ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ವೇಣುಗೋಪಾಲ ಜೇವರ್ಗಿ ಹಾಗೂ ತಾಲೂಕಾಧ್ಯಕ್ಷ ಮಲ್ಲೇಶಿ ಪಾಟೀಲ ನಾಗರಾಳ ಮಾತನಾಡಿ, ರಾಷ್ಟ್ರಮಟ್ಟದಲ್ಲಿ ಅತ್ಯಂತ ಪ್ರಭಾವ ಹೊಂದಿರುವ ಮತ್ತು ದಕ್ಷ ಹಾಗೂ ಪ್ರಾಮಾಣಿಕ ವ್ಯಕ್ತಿಗೆ ಚುನಾವಣೆಯ ಪ್ರಚಾರ ಸಮಿತಿ ಅಧ್ಯಕ್ಷರನ್ನು ಆಯ್ಕೆ ಮಾಡಿರುವುದು ಸಂತಸದ ಸಂಗತಿ. ಇದರಿಂದ ಪಕ್ಷಕ್ಕೆ ಆನೆ ಬಲಬಂದಂತ್ತಾಗಿದೆ ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಲಿದೆ. ಕಾಂಗ್ರೆಸ್ ತನ್ನ ಆಡಳಿತದಲ್ಲಿ ದೊಡ್ಡ ಭ್ರಷ್ಟಾಚರ ನಡೆಸಿ ಜನರ ವಿಶ್ವಾಸ ಕಳೆದುಕೊಂಡಿದೆ. ಹೀಗಾಗಿ ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹುಲಕಲ್, ಬಸವರಾಜ ಜಡಿಮರಳ, ಮಲ್ಹಾರಾವು ಕುಲಕರ್ಣಿ, ಭೀಮರಾವ ರಫುಗಾರ, ರಜಾಕ ಭಾಗವಾನ, ರಂಗಪ್ಪ ನಾಯಕ, ಬಸವರಾಜ ಪೂಜಾರಿ, ಬೀಮಣ್ಣ, ಅರವಿಂದ ಎಲಿತೋಟದ, ಭಿಮರಾಯ ಹೋಕಳಿ, ಅಂಭ್ರೇಶ ನಾಯಕ, ಮಲ್ಲು ಹೂಗಾರ, ಯಂಕಪ್ಪ ಜಾಲಹಳ್ಳಿ, ಮಲ್ಲಣ್ಣ ಶಾರದಳ್ಳಿ, ಮುಪ್ಪಯ್ಯ ಸ್ವಾಮಿ ಕಕ್ಕೇರಾ ಇತರರಿದ್ದರು.