ಚಿಂಚೋಳಿ; ಮುಂಗಾರು ಬಿತ್ತನೆ ಕಾರ್ಯ ಚುರುಕು
ಕನ್ನಡಪ್ರಭ ವಾರ್ತೆ, ಚಿಂಚೋಳಿ, ಜೂ.10
ತಾಲೂಕಿನಲ್ಲಿ ಕಳೆದೆರಡು ದಿನಗಳಲ್ಲಿ ಸುರಿಯುತ್ತಿದ್ದ ಮುಂಗಾರು ಮಳೆಯಿಂದಾಗಿ ತಾಲೂಕಿನಲ್ಲಿ ಮುಂಗಾರಿ ಹಂಗಾಮಿನ ಬಿತ್ತನೆ ಕಾರ್ಯ ಚುರುಕುಗೊಂಡಿದೆ.
ತಾಲೂಕಿನಲ್ಲಿ ಕಳೆದ ಎರಡು ದಿನಗಳಲ್ಲಿ ಚಿಂಚೋಳಿ ವಲಯದಲ್ಲಿ 60.2 ಮಿಮಿ ಮಳೆಯಾಗಿದ್ದು, ಬಿತ್ತನೆಗೆ ಭೂಮಿ ಹದವಾಗಿರುವುದರಿಂದ ಐನಾಪುರ ವಲಯದಲ್ಲಿ ಗುರುವಾರ ದಿನವೇ ಮುಂಗಾರು ಬಿತ್ತನೆ ಚುರುಕುಗೊಂಡಿದೆ.
ಸಲಗರ ಬಸಂತಪುರ, ಬೆನಕೆಪಳ್ಳಿ, ಪಾಲತ್ಯಾತಾಂಡಾ, ಎಲಮಡಗಿ, ಚಂದನಕೇರಾ, ಚೆಂಗಟಾ, ಭೂಯಾರ (ಕೆ), ರಾಣಾಪುರ, ಚಿಮ್ಮನಚೋಡ ಇನ್ನೀತರ ಗ್ರಾಮಗಳಲ್ಲಿ ಬಿತ್ತನೆ ಕಾರ್ಯ ಬಿರುಸುಗೊಂಡಿದೆ.
ರೈತರು ತಮ್ಮ ಜಮೀನುಗಳಲ್ಲಿ ಹೆಸರು, ಉದ್ದು, ತೊಗರೆ, ಎಳ್ಳು, ಸೂರ್ಯಕಾಂತಿ ಇನ್ನೀತರ ಬೀಜಗಳನ್ನು ಬಿತ್ತನೆ ಮಾಡುತ್ತಿದ್ದಾರೆ. ಕಳೆದ ವರ್ಷ ಮುಂಗಾರು ಹಂಗಾರು ಜೂನ್ ಮೊದಲ ವಾರದಲ್ಲಿಯೇ ಪ್ರಾರಂಭಗೊಂಡಿತ್ತು.
ಈಗ ಪ್ರಸಕ್ತ ಸಾಲಿನಲ್ಲಿಯೂ ಸಹ ಜೂನ್ ಮೊದಲ ವಾರದಲ್ಲಿಯೇ ಪ್ರಾರಂಭವಾಗಿದೆ. ಒಟ್ಟಿನಲ್ಲಿ ಈಗಾಗಲೇ ರೈತರು ಮುಂಗಾರು ಬಿತ್ತನೆಯಲ್ಲಿ ಅತ್ಯಂತ ಹರ್ಷದಿಂದ ಬಿತ್ತನೆಯಲ್ಲಿ ತೊಡಗಿದ್ದಾರೆ.