ನಿಯಮ ಪಾಲಿಸದ ಖಾಸಗಿ ಬಸ್ ಆರ್ಟಿಒ ವಶಕ್ಕೆ
ಕ.ಪ್ರ. ವಾರ್ತೆ, ಶಹಾಪುರ, ಜೂ.10
ಸಾರಿಗೆ ಸಂಸ್ಥೆಗೆ ಸವಾಲಾಗಿರುವ ಖಾಸಗಿ ಬಸ್ಗಳ ದರ್ಬಾರ್ ತಡೆಗಟ್ಟಲು ಆರ್ಟಿಒ ಇಲಾಖೆ ಕೊನೆಗೂ ಕ್ರಮ ಕೈಗೊಂಡಿದೆ. ನಿಯಮ ಪಾಲಿಸದ ಖಾಸಗಿ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದೆ.
ಇತ್ತೀಚಿನ ದಿನಗಳಲ್ಲಿ ಖಾಸಗಿ ಟ್ರಾವೆಲ್ಸ್ಗಳು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಪ್ರಯಾಣಿಕರನ್ನು ಸಾಗಿಸುತ್ತಿದ್ದರು. ಸಂಬಂಧಿಸಿದ ಇಲಾಖೆ ಕಣ್ಮುಚ್ಚಿ ಕುಳಿತಿದ್ದು ಹಲವು ಅನುಮಾನಗಳಿಗೆ ಎಡೆಮಾಡಿತ್ತು.
ನಡು ರಸ್ತೆಯಲ್ಲೇ ಪಾರ್ಕಿಂಗ್ ಮಾಡುವುದು, ಪರವಾನಗಿ ಇಲ್ಲದ ವಾಹನ ಚಾಲಕರು, ತೆರಿಗೆ ಭರಿಸದೇ ಇರುವುದು, ಮನಬಂದಂತೆ ಪ್ರಯಾಣಿಕರನ್ನು ತುಂಬುವುದು ಮತ್ತು ಸರ್ಕಾರಿ ಬಸ್ಸುಗಳಿಗೆ ಪೈಪೋಟಿ ನೀಡುತ್ತಾ ಸರ್ಕಾರಿ ಸ್ವಾಮಿತ್ವದ ರಸ್ತೆ ಸಾರಿಗೆ ಸಂಸ್ಥೆಗೆ ತುಂಬಾ ಹಾನಿ ಮಾಡಿದ್ದಲ್ಲದೆ ಪಟ್ಟಣದಲ್ಲಿ ರಸ್ತೆಯ ಅಂಚಿಗೆ ನಿಲ್ಲಿಸಿ ಇತರ ವಾಹನಗಳಿಗೆ ಸರಾಗವಾಗಿ ಓಡಾಡಲು ತೊಂದರೆಯುಂಟು ಮಾಡುತ್ತಿರುವುದು ಹೆಚ್ಚಿತ್ತು.
ಕೊನೆಗೂ ಎಚ್ಚೆತ್ತ ಅಧಿಕಾರಿಗಳು: ಇದನ್ನು ನೋಡಿಯೂ ನೋಡದಂತಿರುವ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದುದು ಗಮನಿಸಿದರೆ ಖಾಸಗಿ ಬಸ್ಗಳಿಗೆ ಹೆಚ್ಚಿನ ಅನುಕೂಲ ಮಾಡುವ ಉದ್ದೇಶವಿದೆಯೇ ಎಂಬ ಸಂಶಯ ವ್ಯಕ್ತವಾಗಿತ್ತು. ಹೀಗಾಗಿ ಖಾಸಗಿಯವರು ಆಡಿದ್ದೇ ಆಟ ಎಂಬಂತಾಗಿತ್ತು. ಆದರೆ ಇತ್ತೀಚೆಗೆ ಅಧಿಕಾರಿಗಳು ಖಾಸಗಿ ಬಸ್ಗಳ ಮೇಲೆ ಕ್ರಮಕ್ಕೆ ಮುಂದಾಗಿರುವುದು ಅವುಗಳ ಮಾಲೀಕರಿಗೆ ಬಿಸಿಮುಟ್ಟಿಸಿದಂತಾಗಿದೆ.
ಸಾರ್ವಜನಿಕರ ಶ್ಲಾಘನೆ: ಖಾಸಗಿ ಬಸ್ಸುಗಳ ಆರ್ಭಟ ಹೆಚ್ಚಾಗಲು ಪರೋಕ್ಷವಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯೂ ಸ್ವಲ್ಪ ಮಟ್ಟಿಗೆ ಕಾರಣವಾಗಿದೆ. ಕೆಲ ಭಾಗಗಳಿಗೆ ಸಕಾಲದಲ್ಲಿ ಬಸ್ ಸೌಕರ್ಯ ನೀಡದೆ ಇರುವುದು, ಸಮಯ ಪರಿಪಾಲನೆಗೆ ಗಮನ ನೀಡದೆ ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ಹಿಂದೇಟು ಹಾಕಿದ್ದು ಕಾರಣವಾಗಿದೆ. ಆದರೆ ಈಗ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಇಂಥ ಖಾಸಗಿ ಬಸ್ಸುಗಳನ್ನು ವಶಕ್ಕೆ ತೆಗೆದುಕೊಂಡಿರುವುದಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ಇನ್ನು ಮುಂದಾದರೂ ಸಾರಿಗೆ ಸಂಸ್ಥೆ ಉತ್ತಮ ಬಸ್ ಸೌಕರ್ಯ, ಹೆಚ್ಚಿನ ಸೇವೆ ನೀಡುವಲ್ಲಿ ಸಫಲವಾದರೆ ಖಾಸಗಿ ಬಸ್ಸುಗಳಿಗೆ ಕಡಿವಾಣ ಹಾಕಬಹುದಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.