ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನಿವೃತ್ತಿ ಸೌಲಭ್ಯ; ನಿಯಮಗಳಲ್ಲಿನ ಅನ್ಯಾಯ ಸರಿಪಡಿಸಿ

Lingaraj Badiger
Updated On : 11 Jun 2013, 11:26 am

ಕ.ಪ್ರ. ವಾರ್ತೆ, ಗುಲ್ಬರ್ಗ, ಜೂ.10
ಜಿಲ್ಲಾ ಗ್ರಾಮೀಣಾಬಿವೃದ್ಧಿ ಸಂಸ್ಥೆಯ ತಾಲೂಕು ಅಭಿವೃದ್ಧಿ ಮಂಡಳಿ ನೌಕರರನ್ನು ಜಿಲ್ಲಾ ಪರಿಷತ್‌ಗೆ ವಿಲೀನಗೊಳಿಸಿ ನೌಕರಿ ಸಕ್ರಮಗೊಳಿಸಿದ್ದರೂ 2009ರಿಂದ ಜಿಪಂ.ನಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದ ನೌಕರರಿಗೆ  ಯಾವುದೇ ಸೌಕರ್ಯ ನೀಡಲಾಗದು ಎಂದು ಸರ್ಕಾರ ಆದೇಶಿಸಿದೆ. ಈ ಆದೇಶ ವಾಪಸ್ ಪಡೆದು ಸೌಲಭ್ಯಗಳನ್ನು ಒದಗಿಸಬೇಕೆಂದು ಗುಲ್ಬರ್ಗ ಜಿಪಂ ನೌಕರರ ಸಂಘ ಸರ್ಕಾರವನ್ನು ಆಗ್ರಹಿಸಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎಸ್. ದೇಸಾಯಿ, ಜಿಪಂ ನೌಕರರ ಸಂಘದ ಅಧ್ಯಕ್ಷ ಸೂರ್ಯಕಾಂತ. ಕೆಬಿ, ಉಪಾಧ್ಯಕ್ಷ ಜನಾರ್ಧನ ಹೇಮನೂರ್ ನಗರದಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಈ ರೀತಿ ಅನ್ಯಾಯ ಮಾಡುತ್ತಿರುವುದರಿಂದ ನೌಕರರು ಅತಂತ್ರರಾಗಿದ್ದಾರೆ. ಪಿಂಚಣಿಯ ಯಾವ ಸೌಲಭ್ಯ ಹೊಂದದೆ ಪರದಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ರದ್ದುಪಡಿಸುವ ತೀರ್ಮಾನ: 15 ತಿಂಗಳ ವೇತನ ಮೀರದಂತೆ ನಿವೃತ್ತಿ ಉಪದಾನ ಮಂಜೂರು ಮಾಡುತ್ತೇವೆಂದು ಸರ್ಕಾರ 2009ರಲ್ಲಿ ಆದೇಶ ಹೊರಡಿಸಿ ಮೌನವಾಗಿದೆ. ಇದರಿಂದ ಅನೇಕ ನೌಕರರು ತೊಂದರೆಯಲ್ಲಿ ಸಿಲುಕುವಂತಾಗಿದೆ ಎಂದಿರುವ ಅವರು, ಈ ಅನ್ಯಾಯದ ಬಗ್ಗೆ ಈಗಾಗಲೇ ಸರ್ಕಾರದ ಗಮನ ಸೆಳೆಯಲಾಗಿತ್ತು. 2013ರ ಮಾರ್ಚ್ ಸಂಪುಟ ಸಭೆಯಲ್ಲಿ ಈ ಆದೇಶ ರದ್ದುಪಡಿಸಿ ಪಿಂಚಣಿ ಸವಲತ್ತು ಒದಗಿಸಲು ತೀರ್ಮಾನಿಸಲಾಗಿದೆ. ಆದರೂ ಇಂದಿಗೂ ಅದು ಜಾರಿಗೊಂಡಿಲ್ಲ.
ಸರ್ಕಾರ ತಕ್ಷಣ ಈ ದೋಷದ ಆದೇಶ ವಾಪಸ್ ಪಡೆಯಬೇಕು. ಪಿಂಚಣಿ ಸವಲತ್ತು ಜಿಪಂ ನೌಕರರಿಗೆ ನೀಡಬೇಕೆಂದು ಆಗ್ರಹಿಸಿರುವ ಸಂಘ, ಶೀಘ್ರವೇ ನಿಯೋಗದಲ್ಲಿ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಗಮನ ಸೆಳೆಯುತ್ತದೆ ಎಂದು ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹೇಳಿದ್ದಾರೆ.
ಗುಲ್ಬರ್ಗಕ್ಕೆ 'ಬಿ' ಸಿಟಿ ದರ್ಜೆ ಕೊಡಿ: ಜನಸಂಖ್ಯೆ ಆಧಾರದಲ್ಲಿ ನಡೆಯುವ ನಗರ ವರ್ಗೀಕರಣದಲ್ಲಿ ಗುಲ್ಬರ್ಗ ಮಹಾನಗರಕ್ಕೆ ಬಿ ಸಿಟಿ ದರ್ಜೆ ಕೊಡುವಂತೆ ಸರ್ಕಾರವನ್ನು ರಾಜ್ಯ ಸರ್ಕಾರಿ ನೌಕರರ ಸಂಘ ಆಗ್ರಹಿಸಿದೆ.  
 ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿರುವ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್. ದೇಸಾಯಿ, 2011ರ ಜನಸಂಖ್ಯೆ ಮಾಹಿತಿ ಹೊರಬಿದ್ದಿದೆ. ನಗರ ಜನಸಂಖ್ಯೆ 5.41 ಲಕ್ಷವೆಂದು ಮಾಹಿತಿ ಹೊರಬಿದ್ದಿದೆ.
ಜನಸಂಖ್ಯೆ ಆಧಾರದಲ್ಲಿ ಗುಲ್ಬರ್ಗಕ್ಕೆ ಬಿ ನಗರವೆಂದು ದರ್ಜೆ ಕೊಡಬೇಕು. ಇದರಿಂದ ನೌಕರರಿಗೆ ಮನೆ ಬಾಡಿಗೆ ಭತ್ಯೆ, ನಗರ ಭತ್ಯೆಗಳು ಹೆಚ್ಚಿಗೆ ದೊರಕುತ್ತವೆ. ಬಿ ದರ್ಜೆ ದೊರಕಿದಲ್ಲಿ ನೌಕರರಿಗೆ ಅಷ್ಟೇ ಅಲ್ಲ, ಗುಲ್ಬರ್ಗ ನಗರಕ್ಕೆ ಇನ್ನೂ ಅನೇಕ ಸೌಕರ್ಯಗಳು ದೊರಕುತ್ತವೆ. 'ನರ್ಮ್‌'ನಂತಹ ಪ್ರಗತಿಪರ ಯೋಜನೆಗಳು ಗುಲ್ಬರ್ಗಕ್ಕೂ ದೊರಕುತ್ತವೆ ಎಂದು ದೇಸಾಯಿ ಅಭಿಪ್ರಾಯಪಟ್ಟರು.
ಅಧಿಕಾರಿಗಳ ಹಿಂದೇಟಿಗೂ ಕಾರಣ: ಬಿ ನಗರವೆಂಬ ಸವಲತ್ತು ದೊರಕದೆ ಹೋಗಿದ್ದರಿಂದ ಅನೇಕ ಅಧಿಕಾರಿಗಳು ಬೆಂಗಳೂರು ಬಿಟ್ಟು ಗುಲ್ಬರ್ಗದತ್ತ ಹೆಜ್ಜೆ ಹಾಕುತ್ತಿಲ್ಲ. ಇಲ್ಲಿಗಿಂತ ಬೆಂಗಳೂರಲ್ಲೇ ಭತ್ಯೆಗಳು ಹೆಚ್ಚಿಗೆ ದೊರಕುವುದರಿಂದ ಇಲ್ಲೇಕೆ ಬಂದು ತೊಂದರೆ ಪಡಬೇಕೆಂಬ ಮನೋಭಾವನೆ ಬೆಳೆದಿದೆ.  
 ಇದರಿಂದ ಇಲ್ಲಿನ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆಯೂ ಕಾಡುತ್ತಿದೆ. ತಕ್ಷಣ ಸರ್ಕಾರ ಬಿ ನಗರ ದರ್ಜೆ ನೀಡಬೇಕೆಂದು ದೇಸಾಯಿ ಈ ಸಂದರ್ಭದಲ್ಲಿ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement