ಬಿತ್ತನೆ ಬೀಜ ವಿತರಣೆಗೆ ಆಗ್ರಹ
ಗುಲ್ಬರ್ಗ: ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಮತ್ತು ಬಿತ್ತನೆ ಬೀಜ ವಿತರಿಸಬೇಕೆಂದು ವೀರ ಕನ್ನಡಿಗರ ಸೇನೆ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದೆ.ಮುಂಗಾರು ಮಳೆ ಶುರುವಾಗಿ ಮುಂಗಾರು ಬಿತ್ತನೆ ಕೂಡ ಆರಂಭವಾಗಿದೆ. ಪ್ರತಿ ವರ್ಷವು ರೈತರಿಗೆ ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಸಲುವಾಗಿ ಪರದಾಡುವ ಪರಿಸ್ಥಿತಿ ಉಂಟಾಗುತ್ತಿದೆ. ಆದರೆ, ಈ ವರ್ಷ ಅಂತಹ ಪರಿಸ್ಥಿತಿ ನಿರ್ಮಾಣವಾಗಬಾರದು. ಸರಿಯಾದ ವೇಳೆಯಲ್ಲಿ ಸರಿಯಾದ ಸಮಯಕ್ಕೆ ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಮತ್ತು ಬಿತ್ತನೆ ಬೀಜ ವಿತರಿಸಬೇಕು ಎಂದು ಮುಖಂಡರು ಆಗ್ರಹಿಸಿದರು.ತಾಲೂಕುಗಳಲ್ಲಿ ಆಯಾ ಕೃಷಿ ಕೇಂದ್ರಗಳಲ್ಲಿ ರೈತರಿಗೆ ವಿತರಿಸಲು ವ್ಯವಸ್ಥೆ ಮಾಡಬೇಕು, ಈಗಾಗಲೇ ಖಾಸಗಿ ದಲ್ಲಾಳಿ ಮಾಲೀಕರು ರಸಗೊಬ್ಬರ, ಬಿತ್ತನೆ ಬೀಜಗಳನ್ನು ಕಳಪೆಯಿಂದ ಖರೀದಿಸಿ ಜಮಾಯಿಸಿಕೊಂಡಿದ್ದಾರೆ. ಇಂತಹವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಸೇನೆಯ ಸಂಸ್ಥಾಪಕ ಅಧ್ಯಕ್ಷ ಅಮೃತ ಪಾಟೀಲ್ ಸಿರನೂರ, ಮುಖಂಡರಾದ ಶಿವಾಜಿ ಚವ್ಹಾಣ, ದತ್ತು ಭಾಸಗಿ, ರವಿ ಒಂಟಿ, ಸಂತೋಷ ತಳವಾರ ಮನವಿ ಮಾಡಿದರು.
ಯುವಕನ ಕೊಲೆ
ಗುಲ್ಬರ್ಗ: ಮದುವೆ ಆಹ್ವಾನ ಪತ್ರಿಕೆಗಳೊಂದಿಗೆ ಸ್ನೇಹತನ ಜೊತೆಗೂಡಿ ಬೈಕ್‌ನಲ್ಲಿ ತೆರಳುತ್ತಿದ್ದ ಯುವಕನನ್ನು ಅಪರಿಚಿತರು ಕೊಲೆ ಮಾಡಿ ಪರಾರಿಯಾದ ಘಟನೆ ಅಫಜಲ್ಪುರ ತಾಲೂಕಿನ ದಿಕ್ಸಂಗಾ(ಕೆ)- ಮಾಶ್ಯಾಳ ರಸ್ತೆಯಲ್ಲಿ ನಡೆದಿದೆ.ಹತ್ಯೆಗೀಡಾದ ಯುವಕನನ್ನು ದಿಕ್ಸಂಗಾ(ಕೆ) ಗ್ರಾಮದ ಇಕ್ಬಾಲ್ ಎಂದು ಗುರುತಿಸಲಾಗಿದೆ. ಮದುವೆ ಆಹ್ವಾನ ಪತ್ರಿಕೆಗಳನ್ನು ಹಂಚಲು ಇಕ್ಬಾಲ್ ತನ್ನ ಸ್ನೇಹಿತ ಇರ್ಫಾನ್ ಜತೆ ಬೈಕ್ ಮೇಲೆ ಹೋಗುತ್ತಿದ್ದಾಗ ದುಷ್ಕರ್ಮಿಗಳು ಟಾಟಾ ಸುಮಾ ಡಿಕ್ಕಿ ಹೊಡೆಸಿದ್ದಾರೆ. ತಕ್ಷಣ ಇಬ್ಬರೂ ಆಯತಪ್ಪಿ ಬಿದ್ದಾಗ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಇಕ್ಬಾಲ್‌ನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸುದ್ದಿ ತಿಳಿದ ತಕ್ಷಣ ಅಫಜಲ್ಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ರಾಜೇಂದ್ರ ಮತ್ತು ಸಬ್ ಇನ್ಸ್‌ಪೆಕ್ಟರ್ ಎಸ್.ಮಂಜುನಾಥ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇಕ್ಬಾಲ್‌ನ ತಂದೆ ಮಲ್ಕಾ ಸಾಬ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಚಾಲಕ ಸಾವು
ಗುಲ್ಬರ್ಗ: ಅಫಜಲ್ಪುರ ತಾಲೂಕಿನ ಕರಜಗಿ, ಉಡಚಣ ಹಟ್ಟಿ ಕ್ರಾಸ್ ಬಳಿ ಜೀಪ್ ಚಾಲಕನ ನಿಯಂತ್ರಣ ಕಳೆದುಕೊಂಡು ಉರುಳಿ ಬಿದ್ದ ಪರಿಣಾಮ ಜೀಪ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ನಾಗನಾಥ ಗಾಮಣೆ ಎಂಬಾತ ಮೃತಪಟ್ಟಿದ್ದಾನೆ. ಈ ಕುರಿತು ಅಫಜಲ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.