ಮಾಹಿತಿ ಕೊರತೆ; ಅಪಘಾತ ಹೆಚ್ಚಳ
ಯಾದಗಿರಿ: ಅಪಘಾತಗಳ ನಿಯಂತ್ರಣಕ್ಕೆ ಪ್ರತಿಯೊಬ್ಬರು ರಸ್ತೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದಕ್ಕೆ ಪೂರಕವಾಗಿ ಶಿಸ್ತು ಅಳವಡಿಸಿಕೊಳ್ಳಬೇಕೆಂದು ಸಿಪಿಐ ಶಂಕರಗೌಡ ಪಾಟೀಲ್ ಹೇಳಿದರು. ತಾಲೂಕಿನ ರಾಮಸಮುದ್ರ ಗ್ರಾಮ ಪಂಚಾಯಿತಿಯಲ್ಲಿ ಯಾದಗಿರಿ ಗ್ರಾಮೀಣ ಠಾಣೆಯ ವತಿಯಿಂದ ಸ್ವತ್ತಿನ ಅಪರಾಧ ತಡೆಯುವ ಮತ್ತು ಸಂಚಾರ ನಿಯಂತ್ರಣ ಕುರಿತು ಹಮ್ಮಿಕೊಂಡಿದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಜನರಲ್ಲಿ ಮಾಹಿತಿ ಕೊರತೆಯಿಂದ ರಸ್ತೆ ಅಪಘಾತ ಮತ್ತು ಅನಾಹುತಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು. ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಗುರುಶಾಂತ ದಾಶ್ಯಾಳ ಮಾತನಾಡಿ, ರಸ್ತೆ ಸಂಚಾರ ನಿಯಮಗಳ ಪಾಲನೆ ಪ್ರತಿಯೊಬ್ಬರ ಕರ್ತವ್ಯ. ಇದರಿಂದ ಅಪಘಾತಗಳನ್ನು ಸಂಪೂರ್ಣ ನಿಯಂತ್ರಿಸಬಹುದು ಎಂದು ಹೇಳಿದರು. ಅಪರಾಧ ವಿಭಾಗದ ಪಿಎಸ್‌ಐ ಬಸವರಾಜ ಅದಟಿ, ಗ್ರಾಪಂ ಅಧ್ಯಕ್ಷ ವಿಶ್ವನಾಥ ಬಾಗಲಿ ಸೇರಿದಂತೆ ಅಟೋ ಚಾಲಕರು, ಟ್ರ್ಯಾಕ್ಟರ್ ಹಾಗೂ ಇನ್ನಿತರ ವಾಹನ ಚಾಲಕರು ಇದ್ದರು.
'ಸತ್ಸಂಗದಿಂದ ಮಾತ್ರ ಮನಃಶುದ್ಧಿ'
ಯಾದಗಿರಿ: ಮಾನವ ಸದಾಚಾರಿಯಾಗಿರಬೇಕು ಹಾಗೂ ಸದ್ವಿಚಾರಗಳನ್ನು ಆಲಿಸಬೇಕು. ಸತ್ಸಂಗದಿಂದ ಮನಶುದ್ಧಿಯಾಗುತ್ತದೆ ಎಂದು ಅಬ್ಬೆತುಮಕೂರು ಸಿದ್ಧಸಂಸ್ಥಾನ ಮಠದ ಪೀಠಾಧೀಪತಿ ಡಾ. ಗಂಗಾಧರ ಸ್ವಾಮೀಜಿ ನುಡಿದರು. ಶ್ರೀಮಠದಲ್ಲಿ ಬದಾಮಿ ಅಮವಾಸ್ಯೆ ನಿಮಿತ್ತ ಹಮ್ಮಿಕೊಂಡಿದ್ದ ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮನುಷ್ಯ ಸಂಸಾರಿಕ ಜೀವನದಲ್ಲಿ ಮೋಹ ಪರವಾಶನಾಗುತ್ತಾನೆ. ಹಾಗಾಗಿ ಅನೇಕ ಸಮಸ್ಯೆಗಳಿಗೆ, ಒತ್ತಡಗಳಿಗೆ, ಜಂಜಾಟಗಳಿಗೆ ಸಿಲುಕಿ ನರಳುತ್ತಾನೆ. ಜೀವನವೇ ದುಸ್ತರವಾಗಿ ಬಳಲಿ ಬೆಂಡಾಗುತ್ತಾನೆ. ಮಾನಸಿಕ ನೆಮ್ಮದಿಯಿಲ್ಲದೆ ಬದುಕು ಭಾರವಾಗುತ್ತದೆ. ಇದರಿಂದ ಮುಕ್ತನಾಗಿ, ಸಹಜವಾದ ಆನಂದವನ್ನು ಪಡೆಯಲು ನಡೆ- ನುಡಿಯಲ್ಲಿ ಸಮನ್ವಯ ಸಾಧಿಸಬೇಕು. ಮಹಾತ್ಮರ ದರ್ಶನ-ಆಶೀರ್ವಾದಗಳಿಂದ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ ಎಂದು ನುಡಿದರು. ಶಿವಾನುಭವ ಗೋಷ್ಠಿಯಲ್ಲಿ ಡಾ. ಸುಭಾಶ್ಚಂದ್ರ ಕೌಲಗಿ, ಚನ್ನಪ್ಪಗೌಡ ಮೋಸಂಬಿ, ಬಸವರಾಜಪ್ಪ ಬಿಳ್ಹಾರ, ಎನ್.ಎನ್. ಮಿಂಚಿನಾಳ, ಮಲ್ಲಿಕಾರ್ಜುನ ಶಾಸ್ತ್ರಿ ಇತರರು ಇದ್ದರು. ನಂತರ ಶ್ರೀಮಠದ ಕಲಾವಿದರಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.