ಇಂದು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ
ಗುಲ್ಬರ್ಗ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘ, ಕಾರ್ಮಿಕ ಇಲಾಖೆ ಮತ್ತು ನ್ಯಾಯಾವಾದಿಗಳ ಸಂಯುಕ್ತಾಶ್ರಯದಲ್ಲಿ ಜೂ.12ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆ.10 ಗಂಟೆಗೆ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚಾರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗುಲ್ಬರ್ಗ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ವಿಜಯನ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾಧಿಕಾರಿ ಪ್ರಸನ್ನಕುಮಾರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಸತೀಶಕುಮಾರ್, ಜಿಪಂ ಸಿಇಒ ಪಲ್ಲವಿ ಆಕುರಾತಿ, ಉಪ ಕಾರ್ಮಿಕ ಆಯುಕ್ತ ಎಂ.ಎಸ್. ಚಿದಾನಂದ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯರಾಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರತ್ನಾ ಕಲಂದಾನಿ ಹಾಗೂ ನ್ಯಾಯಾವಾದಿಗಳ ಸಂಘದ ಅಧ್ಯಕ್ಷ ಡಿ.ಕೆ.ಯೂಸುಫ್ ಭಾಗವಹಿಸುವರು. ವಿಶೇಷ ಉಪನ್ಯಾಸಕರಾಗಿ ಕಾರ್ಮಿಕ ಅಧಿಕಾರಿ ಜಿ.ಸಿದ್ದಲಿಂಗಪ್ಪ ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಆನಂದರಾಜ ಭಾಗವಹಿಸುವರು. ಕಾರ್ಯಕ್ರಮ ನಿಮಿತ್ತ ಬೆ. 8.30ಕ್ಕೆ ನಗರದ ಚೌಕ್ ಪೊಲೀಸ್ ಸ್ಟೇಷನ್ದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಜಾಥಾ ನಡೆಸಲಾಗುವುದು.
ಟಿಕೆಟ್ ರಹಿತ ಪ್ರಯಾಣ; ದಂಡ
ಗುಲ್ಬರ್ಗ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗುಲ್ಬರ್ಗ ವಿಭಾಗ- 2ರ ವ್ಯಾಪ್ತಿಯ 1204 ವಾಹನಗಳನ್ನು ತಪಾಸಣೆ ಮಾಡಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತಿದ್ದ 168 ಪ್ರಯಾಣಿಕರಿಂದ 16,640 ನಗದನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ. ಟಿಕೆಟ್ ರಹಿತ ಪ್ರಯಾಣಿಕರಿಗೆ ಟಿಕೆಟ್ ದರಕ್ಕಿಂತ ಶೇ.10ರಷ್ಟು ಹೆಚ್ಚುವರಿ ದಂಡ ವಿಧಿಸಲಾಗುವುದು. ಪ್ರಯಾಣಿಕರು ನಿರ್ವಾಹಕರಿಂದ ಟಿಕೆಟ್ ಪಡೆದು ಪ್ರಯಾಣಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಬಾಗಬಾನ್ ತಿಳಿಸಿದ್ದಾರೆ.
ವೈಭವದ ಕಾಖಂಡಕಿ ಜಾತ್ರೆ
ಜೇವರ್ಗಿ: ತಾಲೂಕಿನ ಸುಕ್ಷೇತ್ರ ಕಾಖಂಡಕಿಯಲ್ಲಿ ಕಳೆದ ಭಾನುವಾರ ಗುರು ಮಲ್ಲಾರಾಧ್ಯರ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ಉತ್ಸವದ ನಿಮಿತ್ತ ನಾಲವಾರ ಕೋರಿಸಿದ್ಧೇಶ್ವರ ಮಠದ ಪೀಠಾಧಿಪತಿ ಡಾ. ಸಿದ್ಧತೊಟೇಂದ್ರ ಶಿವಾಚಾರ್ಯರು ಗುರು ಮಲ್ಲಾರಾಧ್ಯರಿಗೆ ವಿಶೇಷ ಪೂಜೆ ನೆರೆವೇರಿಸಿದರು. ಉತ್ಸವದ ನಿಮಿತ್ತ ಶನಿವಾರ ಮಧ್ಯರಾತ್ರಿ ನಾಲವಾರ ಶ್ರೀಗಳ ಸನ್ನಿಧಿಯಲ್ಲಿ ನೂರಾರು ಮುತ್ತೈದೆಯರ ತನಾರತಿ ಕಾರ್ಯಕ್ರಮ ನೆರವೇರಿಸಿದರು. ಭಾನುವಾರ ನೂರಾರು ಭಕ್ತಾದಿಗಳು ನಾಲವಾರ ಶ್ರೀಗಳ ಪಾದಪೂಜೆ ನೆರವೇರಿಸಿದರು. ಸಂಜೆ ಶ್ರೀಗಳು 500 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಸಹಸ್ರಾರು ಭಕ್ತ ಸಮೂಹದ ಜಯಘೋಷದ ಮಧ್ಯೆ ನಾಲವಾರ ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಿದರು.
--