ಕಬ್ಬು ಬಾಕಿ ವಿಳಂಬ; ಆತ್ಮಹತ್ಯೆಗೆ ಮುಂದಾದ ರೈತರು
ಕನ್ನಡಪ್ರಭ ವಾರ್ತೆ, ಆಳಂದ, ಜೂ.11
ತಾಲೂಕಿನ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯು ರೈತರಿಗೆ ನೀಡಬೇಕಾದ ಕಬ್ಬಿನ ಬಾಕಿ ಹಣ ವಿತರಿಸಲು ಕಳೆದ ಆರು ತಿಂಗಳಿಂದ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ನೊಂದ ರೈತರು ಕ್ರಿಮಿನಾಶಕ ಔಷಧಿಯೊಂದಿಗೆ ಆವರಣದ ಒಳಗೆ ನುಗ್ಗಿದ ಘಟನೆ ಮಂಗಳವಾರ ನಡೆದಿದೆ.
ಮಾಡಿಯಾಳ ಗ್ರಾಮದ ರೈತ ಬಾಬುರಾವ ಪೊಲೀಸ್ ಪಾಟೀಲ್, ದಸ್ತಗೀರ ಸಾಬ್ ನಾಗೂರೆ, ಶರಣಬಸಪ್ಪ ಬೆಳಮಗಿ, ಶಿವರಾಯ ಪೂಜಾರಿ ಮಾತನಾಡಿ, ಕಾರ್ಖಾನೆಯ ಅಧಿಕಾರಿಗಳು ರೈತರಿಗೆ ನೀಡಬೇಕಾದ ಬಾಕಿ ಹಣ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ದಬ್ಬಾಳಿಕೆ ಮಾಡುವವರಿಗೆ ಜಮಾ..: ದಬ್ಬಾಳಿಕೆ, ಹೆದರಿಸುವ ವ್ಯಕ್ತಿಗಳ ಬ್ಯಾಂಕ್ ಖಾತೆಗೆ ಬಾಕಿ ಹಣ ಜಮಾ ಮಾಡುತ್ತಿದ್ದು, ಬಡ ರೈತರು ತಮ್ಮ ಬಾಕಿ ಹಣ ನೀಡುವಂತೆ ಒತ್ತಾಯಿಸಿದರೆ ನಾಳೆ, ನಾಡಿದ್ದು.. ಎಂದು ಹೇಳಿ ದಿನದೂಡುತ್ತ ಗ್ರಾಮ ಮತ್ತು ಕಾರ್ಖಾನೆಯವರೆಗೂ ಅಲೆದಾಡುವಂತಹ ಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ಹೀಗೆ ಅಲೆದಾಡುವುದರಿಂದ ಸಮಯ, ದುಡ್ಡು ವ್ಯರ್ಥವಾಗುತ್ತಿದೆ ಎಂದರು.
ರೈತರ ಅಳಲು: ಪ್ರಸ್ತಕ ವರ್ಷದಲ್ಲಿ ಶಾಲಾ- ಕಾಲೇಜುಗಳು ಆರಂಭಗೊಂಡಿದ್ದು, ಮಕ್ಕಳ ಉನ್ನತ ಶಿಕ್ಷಣಕ್ಕೆ ಹಣದ ಅವಶ್ಯಕತೆಯಿದೆ. ಉಳಿದ ಕಬ್ಬಿನ ಬೆಳೆ ಉಳಿಸಿಕೊಳ್ಳಬೇಕಾದರೆ ಗೊಬ್ಬರ, ಕಸ-ಕಡ್ಡಿ ತೆಗೆಯಲು, ಹೊಲದಲ್ಲಿ ದುಡಿದ ಕಾರ್ಮಿಕರಿಗೆ ನೀಡಲು ಹಣ ಬೇಕು. ಅವರಿಗೆ ಎಲ್ಲಿಂದ ಹಣ ನೀಡಬೇಕು. ನಮ್ಮ ಸಂಕಷ್ಟ ಯಾರ ಮುಂದೆ ತೊಡಿಕೊಳ್ಳಬೇಕೆಂದು ತಮ್ಮ ಅಳಲು ತೋಡಿಕೊಂಡರು.
ಇದರಿಂದ ಕಾರ್ಖಾನೆಯ ಅಧಿಕಾರಿಗಳು ನಿಗದಿ ಮಾಡಿದ ದಿನಾಂಕದೊಳಗೆ ಬಾಕಿ ಹಣ ವಿತರಣೆ ಮಾಡಬೇಕು. ಇಲ್ಲವಾದರೆ ಕಾರ್ಖಾನೆ ಆವರಣದಲ್ಲಿಯೇ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಾರ್ಖಾನೆ ಅಧಿಕಾರಿಗಳಿಗೆ ರೈತರು ಎಚ್ಚರಿಸಿದರು.
ಸಿದ್ದರಾಮ ಯಳಸಂಗಿ, ಸುಭಾಷ ಬಿರಾದಾರ, ಶಿವಾನಂದ ಕಂಬಾರ, ದತ್ತಾತ್ರೇಯ ಪೂಜಾರಿ, ಶಿವಾನಂದ ಪೊಲೀಸ್ ಪಾಟೀಲ್, ಅಲಿಸಾಬ್ ಜಮಾದಾರ, ಗೋವಿಂದ ರಾಠೋಡ ಸೇರಿದಂತೆ ಅನೇಕ ರೈತರಿದ್ದರು.