ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕುಡಿವ ನೀರು, ಉತ್ತಮ ಶಿಕ್ಷಣ ದೊರಕಲಿ

Lingaraj Badiger
Updated On : 12 Jun 2013, 11:16 am

ಕನ್ನಡಪ್ರಭ ವಾರ್ತೆ  ಯಾದಗಿರಿ  ಜೂ.11
ಶಾಲಾ ಮಕ್ಕಳಿಗೆ ಪೂರೈಸಿರುವ ಸಮವಸ್ತ್ರ ಕಳಪೆಯಾಗಿದ್ದು ಬಿಲ್ ಪಾವತಿ ಮಾಡಬಾರದು, ಕುಡಿವ ನೀರಿನ ಯೋಜನೆಗೆ ವಿದ್ಯುತ್ ಸಂಪರ್ಕ ನೀಡದಿರುವುದರಿಂದ ಜೆಸ್ಕಾಂ ಅಧಿಕಾರಿಗಳ ಮೇಲೆ ಕ್ರಮ, 371 ಕಲಂ ಜಾರಿಯಾಗುವವರೆಗೆ ನೌಕರರ ವರ್ಗಾವಣೆ ತಡೆಯಬೇಕು, ಗ್ರಾಪಂಗಳ ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಎಂಬ ಮಹತ್ವದ ನಿರ್ಣಯಗಳನ್ನು ಜಿಪಂ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಯಿತು.
ಮಹತ್ವದ ನಿರ್ಣಯ: ಜಿಪಂ ಸಭಾಭವನದಲ್ಲಿ ಮರೆಮ್ಮ ಶಾಣ್ಯಾನೋರ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿದ ಜಿಪಂ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಯ ಪ್ರಗತಿಯ ಮೇಲೆ ಚರ್ಚೆ ನಡೆಸಿ ಕೆಲ ಮಹತ್ವದ ನಿರ್ಣಯಗಳನ್ನು ಸರ್ವಾನುಮತದಿಂದ ಕೈಗೊಳ್ಳಲಾಯಿತು. ಸಭೆ ಆರಂಭವಾಗುತ್ತಿದ್ದಂತೆ ಜಿಪಂ ವಿರೋಧ ಪಕ್ಷದ ನಾಯಕ ಎಚ್.ಸಿ.ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಜಿಪಂ ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಜನತೆಯಲ್ಲಿ ಅನುಮಾನ ಮೂಡಿದೆ. ಹೊಸ ಹಾಣಕಾಸಿನ ವರ್ಷ ಪ್ರಾರಂಭವಾಗಿ ಮೂರು ತಿಂಗಳು ಕಳೆದರೂ ಒಂದೂ ಕ್ರಿಯಾ ಯೋಜನೆ ಮಂಜೂರಿಯಾಗಿಲ್ಲ. ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಇದರಿಂದ ಜನಪ್ರತಿನಿಧಿಗಳನ್ನು ಜನರು ಅನುಮಾನದಿಂದ ನೋಡುವಂತಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ವಸತಿ ಯೋಜನೆಯಲ್ಲಿ ನಿರ್ಮಾಣಗೊಂಡ ಮನೆಗಳಿಗೆ ಬಿಲ್ ಪಾವತಿಸುತ್ತಿಲ್ಲ. ಕೂಡಲೇ ಬಿಲ್ ಪಾವತಿಸಲು ಕ್ರಮ ಜರಗಿಸಲು ಆಗ್ರಹಿಸಿದರು. ಸದಸ್ಯ ಹನುಮೇಗೌಡ ಮರ್ಕಲ್ ಮಾತನಾಡಿ, ಶಿಕ್ಷಣ ಇಲಾಖೆ ಹಾಗೂ ಕೃಷಿ ಇಲಾಖೆ ಬಗ್ಗೆಯೂ ಸಮಗ್ರ ಚರ್ಚೆಯಾಗಬೇಕು. ಈ ವಿಷಯದ ನಂತರವೇ ಉಳಿದ ವಿಷಯಗಳ ಚರ್ಚೆ ನಡೆಯಲಿ ಎಂದು ಒತ್ತಾಯಿಸಿದರು. ಇದಕ್ಕೆ ಎಲ್ಲ ಸದಸ್ಯರು ಒಪ್ಪಿಗೆ ವ್ಯಕ್ತಪಡಿಸಿದರು.
ಕಳಪೆ ಸಮವಸ್ತ್ರ ಆರೋಪ: ಶಾಲೆಗಳು ಪ್ರಾರಂಭವಾದರೂ ಇನ್ನೂ ಅನೇಕ ಶಾಲೆಗಳ ಮಕ್ಕಳಿಗೆ ಪುಸ್ತಕಗಳು ವಿತರಣೆಯಾಗಿಲ್ಲ. 10ನೇ ತರಗತಿಯ ಇಂಗ್ಲಿಷ್, ಕನ್ನಡ ಮತ್ತು ಹಿಂದಿ ಪುಸ್ತಕಗಳು ಬಂದಿಲ್ಲ ಎಂದು ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಡಿಡಿಪಿಐ ರಾಮಾಂಜನೇಯ, ಜಿಲ್ಲೆಯಲ್ಲಿ ಶೇ.90ರಷ್ಟು ಪುಸ್ತಕಗಳನ್ನು ವಿತರಣೆ ಮಾಡಲಾಗಿದೆ. ವಿವಿಧ ತರಗತಿಗಳ 36 ಟೈಟಲ್‌ಗಳ ಪುಸ್ತಕಗಳು ಬರಬೇಕಿದೆ ಎಂದರು.
ಮಧ್ಯ ಪ್ರವೇಶಿಸಿದ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮರಾಯ ಕಂದಕೂರು, ಕಳಪೆ ಮಟ್ಟದ ಸಮವಸ್ತ್ರಗಳನ್ನು ಮಕ್ಕಳಿಗೆ ನೀಡಲಾಗಿದೆ. ಆದ್ದರಿಂದ ಇವುಗಳನ್ನು ವಾಪಸ್ಸು ಪಡೆಯಬೇಕು ಎಂದು ಸಮವಸ್ತ್ರವನ್ನು ಪ್ರದರ್ಶಿಸಿದರು. ರಾಜ್ಯ ಮಟ್ಟದ ಎಜೆನ್ಸಿಯಿಂದ ಸರಬರಾಜು ಮಾಡಿದ್ದು, ಎಸ್‌ಡಿಎಂಸಿಯವರು ಹಣ ಪಾವತಿ ಮಾಡುತ್ತಾರೆ ಎಂದು ಡಿಡಿಪಿಐ ತಿಳಿಸಿದರು. ಹಾಗಾದರೆ ಸಮವಸ್ತ್ರದ ಚೆಕ್‌ಅನ್ನು ನೀಡದಂತೆ ಎಲ್ಲಾ ಎಸ್‌ಡಿಎಂಸಿಗಳಿಗೆ ತಿಳಿಸಬೇಕು. ಕಳಪೆ ಸಮವಸ್ತ್ರ ಬಂದಿದ್ದರಿಂದ ಹಣ ಪಾವತಿ ಮಾಡಬಾರದು ಎಂದು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯಿತು. ಅಲ್ಲದೇ ಕಲಂ 371 ಜಾರಿಯಾಗುವವರೆಗೆ ಶಿಕ್ಷಕರು ಸೇರಿದಂತೆ ಯಾವುದೇ ನೌಕರರನ್ನು ವರ್ಗಾವಣೆ ಮಾಡಬಾರದು ಹಾಗೂ ವರ್ಗಾವಣೆಯಾದರೂ ಬಿಡುಗಡೆ ಮಾಡಬಾರದು ಎಂಬ ಠರಾವು ಅಂಗೀಕರಿಸಲಾಯಿತು.
ಕುಡಿನ ನೀರಿನ ಸಮಸ್ಯೆ: ಕುಡಿವ ನೀರಿನ ಕುರಿತು ನಡೆದ ಚರ್ಚೆಯಲ್ಲಿ ಜೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಜರಗಿತು. ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಗಂಭೀರ ಕುಡಿವ ಸಮಸ್ಯೆ ಇದ್ದರೂ ಅಧಿಕಾರಿಗಳು ಸ್ಫಂದಿಸುತ್ತಿಲ್ಲ ಎಂದು ಬಸವರಾಜ ಖಂಡ್ರೆ, ಸಿದ್ದನಗೌಡ ಪಾಟೀಲ, ಅನಸೂಯಾ ಬೋರಬಂಡಾ ಮತ್ತು ಬಸವರಾಜೇಶ್ವರಿ ಆರೋಪಿಸಿದರು. ನಾವು ಕಾಮಗಾರಿ ಪೂರ್ಣಗೊಳಿಸಿದ್ದೇವೆ. ಆದರೆ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ ಎಂದು ಪಿಆರ್‌ಐ ಹಾಗೂ ತಾಪಂ ಅಧಿಕಾರಿಗಳು ಸಭೆಗೆ ತಿಳಿಸಿದರು.
ಕರಿಬಾವಿಯಲ್ಲಿ 4 ತಿಂಗಳಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದು, ಪೂರೈಕೆ ಮಾಡಿದವರಿಗೆ 3 ತಿಂಗಳಿಂದ ಬಿಲ್ ನೀಡುತ್ತಿಲ್ಲ. ಕೇಳಿದರೆ ಸಾಕಷ್ಟು ಅನುದಾನ ಇದೆ ಎಂದು ಹೇಳುತ್ತೀರಿ. ಆದರೂ ಮಾನವೀಯತೆ ಹಿನ್ನೆಲೆಯಲ್ಲಿ  ನೀರು ಪೂರೈಸುತ್ತಿದ್ದಾರೆ ಎಂದು ಗಮನ ಸೆಳೆದರು. ತಕ್ಷಣ ನೀರು ಟ್ಯಾಂಕರ್ ಮೂಲಕ ನೀರು ಪೂರೈಸಿದವರಿಗೆ ಬಿಲ್ ಪಾವತಿಸುವಂತೆ ಜಿಪಂ ಸಿಇಒ ಎಸ್.ಎ. ಜಿಲಾನಿ ತಿಳಿಸಿದರು.
ಜೆಸ್ಕಾ ಅಧಿಕಾರಿ ತರಾಟೆಗೆ: ಕುಡಿನ ನೀರಿನ ಯೋಜನೆಗೆ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ ಎಂಬ ವಿಷಯ ಚರ್ಚೆಯಾಗುತ್ತಿದ್ದಾಗ ಜೆಸ್ಕಾಂ ಅಧಿಕಾರಿ ಸಭೆಗೆ ಆಗಮಿಸದೇ ಇರುವುದು ಸದಸ್ಯರು ಮತ್ತಷ್ಟು ಕೋಪಗೊಳ್ಳಲು ಕಾರಣವಾಯಿತು. ನಂತರ ಜೆಸ್ಕಾಂ ಅಧಿಕಾರಿ ಸಭೆಗೆ ಬಂದು ವಿವರಿಸಲು ಮುಂದಾದರು. ಆಗ ಸದಸ್ಯ ದೇವರಾಜ ನಾಯಕ ಮಾತನಾಡಿ, ಜೆಸ್ಕಾಂ ಇಲಾಖೆಗೆ ಸರ್ಜರಿ ಮಾಡಬೇಕಿದೆ. ಯಾವೊಬ್ಬ ಅಧಿಕಾರಿಯೂ  ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಟಿಸಿ ಸುಟ್ಟರೆ ತಿಂಗಳಾದರೂ ದುರಸ್ತಿ ಮಾಡುವುದಿಲ್ಲ. ಜೆಸ್ಕಾಂನಿಂದಲೇ ಕುಡಿವ ನೀರಿನ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ಆದ್ದರಿಂದ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಬಸವರಾಜ ಖಂಡ್ರೆ ಸಹಮತ ಸೂಚಿಸಿದರು.
 ಜೆಸ್ಕಾಂ ಅಧಿಕಾರಿಗಳೊಂದಿಗೆ ಸಿಇಒ ಅವರೇ ಪ್ರತ್ಯೇಕ ಸಭೆ ನಡೆಸಬೇಕು ಎಂದು ಮನವಿ ಮಾಡಿದರು. ಜೂ.13ರಂದು ಡಿಸಿ ಹಾಗೂ ತಮ್ಮ ನೇತೃತ್ವದಲ್ಲಿ ಜೆಸ್ಕಾಂ ಅಧಿಕಾರಿಗಳ ಸಭೆ ನಡೆಸಲಾಗುವುದು. ಸಭೆಗೆ ಸಮಗ್ರ ಮಾಹಿತಿಯೊಂದಿಗೆ ಹಾಜರಾಗಬೇಕು ಎಂದು ಜೆಸ್ಕಾಂ ಅಧಿಕಾರಿಗೆ ಜಿಪಂ ಸಿಇಒ ಸೂಚಿಸಿದರು.
ಜಿಲ್ಲೆಯಲ್ಲಿ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸಮರ್ಪಕ ರಸಗೊಬ್ಬರ ಮತ್ತು ಬೀಜ ವಿತರಣೆಗೆ ಕ್ರಮ ಕೈಗೊಳ್ಳಬೇಕು. ನಕಲಿ ರಸಗೊಬ್ಬರ ಮಾರಾಟದ ಬಗ್ಗೆ ನಿಗಾ ಇಟ್ಟು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಜಿಪಂ ಉಪಾಧ್ಯಕ್ಷ ಶರಣಿಕುಮಾರ ದೋಖಾ, ಯೋಜನಾಧಿಕಾರಿ  ಬಸವರಾಜ ಇತರರು ಇದ್ದರು.

ರು. 333.65 ಕೋಟಿ ಕ್ರಿಯಾ ಯೋಜನೆ
ಜಿಲ್ಲೆಗೆ 2013-14ನೇ ಸಾಲಿಗಾಗಿ ಯೋಜನೆ ಹಾಗೂ ಯೋಜನೇತರ ಕಾರ್ಯಕ್ರಮದ ಅಡಿಯಲ್ಲಿ ಜಿಪಂ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ರು. 333.65 ಕೋಟಿ ನಿಗದಿಪಡಿಸಿ ಕ್ರಿಯಾ ಯೋಜನೆ ತಯಾರಿಸಲಾಗಿದೆ.
ಜಿಪಂಗೆ ರು. 96.88 ಕೋಟಿ, ತಾಪಂಗೆ ರು. 225.04 ಕೋಟಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ರು. 11.72 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಇದರಲ್ಲಿ ರು. 104.75 ಕೋಟಿ ಯೋಜನೆ ಕಾರ್ಯಕ್ರಮಗಳಿಗಾಗಿ ಹಾಗೂ ರು. 228.89 ಕೋಟಿ ಯೋಜನೇತರ ಕಾರ್ಯಕ್ರಮಗಳಿಗೆ ನಿಗದಿಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement