ಬೆಕ್ಕಿನ ಕೊರಳಿಗೆ ಗಂಟೆ ಕಟ್ಟೋರ್ಯಾರು?
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.11
ಜಿಲ್ಲೆಯ ಭೀಮಾ ಹಾಗೂ ಕಾಗಿಣಾ ತೀರದಲ್ಲೀಗ ಅಕ್ರಮ ಮರಳುಗಾರಿಕೆ ಸದ್ದು ಜೋರಾಗಿದೆ. 2011ರಲ್ಲೇ ಹೊಸ ಮರಳು ನೀತಿಯನ್ವಯ ಈ ನದಿದಡಗಳಲ್ಲಿ ಮರಳು ಸಾಗಾಣಿಕೆ ಕೇವಲ 16 ಪಾಯಿಂಟ್ ಗುರುತಿಸಿ ಟೆಂಡರ್ ಮಾಡಲಾಗಿತ್ತು.
ಆದರೀಗ ಈ 16 ಪಾಯಿಂಟ್ ಹೊರತುಪಡಿಸಿ 50ಕ್ಕೂ ಹೆಚ್ಚು ಪಾಯಿಂಟ್ಗಳಲ್ಲಿ ಅಕ್ರಮ ಮರಳುಗಾರಿಕೆ ದಂಧೆ ಜೋರಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಇದು ಮಾಫಿಯಾ ಸ್ವರೂಪ ಪಡೆದುಕೊಂಡಿದೆ. ಅನೇಕರು ಜಿಲ್ಲೆಯ ಭೀಮಾ ಹಾಗೂ ಕಾಗಿಣಾ ತೀರದಿಂದ ನಿತ್ಯವೂ ಉಸುಕು ತುಂಬಿಕೊಂಡು ಓಡಾಡುತ್ತಿರುವ ನೂರಾರು ಟ್ರಾಕ್ಟರ್, ಟಿಪ್ಪರ್, ಲಾರಿಗಳನ್ನು ಕಂಡು ಈ ನೋಟವನ್ನು ದೂರದ ಬಳ್ಳಾರಿಯ ಗಣಿ ಅಕ್ರಮಕ್ಕೆ ಹೋಲಿಕೆ ಮಾಡುತ್ತಿದ್ದಾರೆ.
ಜಿಲ್ಲಾಡಳಿತ ಜಾಣ ಕುರುಡು: ಮರಳು ನೀತಿಯನ್ನೇ ಗಾಳಿಗೆ ತೂರಿ ಇಲ್ಲಿನ ಹಲವು ಹಂತಗಳಲ್ಲಿ ಸಾಗಿರುವ ಅಕ್ರಮ ದಂಧೆಗೆ ಕಡಿವಾಣ ಹಾಕುವುದೇ ಬಹುದೊಡ್ಡ ಸವಾಲಿಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಮರಳು ಸಮೀತಿ ತಾನೇ ಇಂತಹ ಸ್ಥಾನಗಳಲ್ಲಿ ಮಾತ್ರ ಮರಳು ಎತ್ತುವಂತೆ ಸೂಚಿಸಿದ್ದರೂ ತನ್ನ ಕಣ್ಣ ಮುಂದೆಯೇ ಸಿಕ್ಕಲ್ಲಿ ಶಿವಾಯನಮಃ ಎಂದು ಬೇಕಾಬಿಟ್ಟಿ ಮರಳು ಅಗೆಯಲ್ಪಡುತ್ತಿದ್ದರೂ ಚಲ್ತೆ ಕಾ ನಾಮ್ ಗಾಡಿ... ಎಂಬಂತೆ ಸುಮ್ಮನಾಗಿದೆ.
ಮರಳು ನೀತಿಯಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಲು ಜಿಲ್ಲಾಧಿಕಾರಿಗಳು, ತಾಲೂಕು ದಂಡಾಧಿಕಾರಿಗಳು, ಪೊಲೀಸ್ ನೇತೃತ್ವದಲ್ಲಿ ದಾಳಿಗಳಿಗೂ ಅವಕಾಶವಿದೆ. ಮರಳು ಸಾಗಾಣಿಕೆಯ ಅಕ್ರಮ ಯಾವ ಕಾರಣಕ್ಕೂ ಸಹಿಸಲಾಗದು ಎಂದೇ ಸರ್ಕಾರ ಮರಳು ನೀತಿ ಹೊಸತಾಗಿ ಹೆಣೆದಿದ್ದರೂ ಗುಲ್ಬರ್ಗದಲ್ಲಿ ಮರಳು ಕಳ್ಳರು ರಂಗೋಲಿ ಕೆಳಗೇ ತೂರಿದ್ದಾರೆ. ಎಲ್ಲ ಹಂತಗಳಲ್ಲಿ ತಮ್ಮ ಕಂಬಂಧ ಬಾಹು ಚಾಚಿಕೊಂಡು ಉಭಯ ನದಿಗಳಲ್ಲಿನ ಟನ್ಗಟ್ಟಲೇ ಇರುವ ಮರಳು ನಿಕ್ಷೇಪ ಕೊಳ್ಳೆ ಹೊಡೆಯುತ್ತಿದ್ದಾರೆ.
ದಾಳಿ- ಜಪ್ತಿಗಳೇ ಇಲ್ಲ: ಅಕ್ರಮ ಮರಳುಗಾರಿಗೆ ಸಾಗಿದ್ದರೂ ಇಂದಿಗೂ ಅಧಿಕಾರಿಗಳನ್ನು ಒಳಗೊಂಡ ದಾಳಿಗಳು ಇಲ್ಲಿ ನಡೆದದ್ದೇ ಅಪರೂಪ. ಇತ್ತೀಚೆಗೆ ಸೇಡಂ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಶಹಾಬಾದ್ ಸುತ್ತ ನಡೆದ ದಾಳಿ ಹೊರತುಪಡಿಸಿದಲ್ಲಿ ಉಳಿದ್ಯಾವ ಕಡೆಗಳಲ್ಲೂ ದಾಳಿಗಳು ಕಂಡಿಲ್ಲ.
ಇನ್ನೂ ದೊಡ್ಡ ದುರಂತವೆಂದರೆ- ಮೇ 13ರಂದು ಫರತಾಬಾದ್ ವಲಯದಲ್ಲಿ ಅಕ್ರಮ ಮರಳುಗಾರಿಕೆಗೆ ಬಳಸಿದ್ದ ಹಿಟಾಚಿ ಜಪ್ತಿ ಮಾಡಿ ಅಲ್ಲಿನ ಉಪ ತಹಸೀಲ್ದಾರ್ ಪೊಲೀಸರಿಗೆ ಒಪ್ಪಿಸಿದ್ದರೆ ಮೇಲಧಿಕಾರಿಗಳು ಮೌಖಿಕ ಆದೇಶ ನೀಡಿ ಪೊಲೀಸ್ ವಶದಲ್ಲಿದ್ದ ವಾಹವನನ್ನು ಮರಳಿ ಮಾಲೀಕರ ಕೈ ಸೇರುವಂತೆ ಮಾಡಿದ್ದು ಜಿಲ್ಲೆಯಲ್ಲಿ ಮರಳು ಮಾಫಿಯಾ ಕಂಬಂಧ ಬಾಹು ಅದೆಷ್ಟರವರೆಗೂ ಕೆಲಸ ಮಾಡುತ್ತಿದೆ, ಚಾಚಿಕೊಂಡಿದೆ ಎಂಬುದರ ವಿಶ್ವರೂಪ ಪ್ರದರ್ಶನ ಮಾಡಿಸಿದೆ.
ಮಾಫಿಯಾದಲ್ಲಿ ಆಡಳಿತ- ಶಂಕೆ: ಫರತಾಬಾದ್ ಉಪ ತಹಸೀಲ್ದಾರರು ಪೊಲೀಸ್ ಠಾಣೆಗೆ ಬರೆದ ಪತ್ರದಲ್ಲಿ ಸಹಾಯಕ ಆಯುಕ್ತರು ಜಿಲ್ಲಾಧಿಕಾರಿಗಳ ಮೌಖಿಕ ಆದೇಶದ ಮೇರೆಗೆ ತಮಗೆ ಫೋನಾಯಿಸಿ ವಾಹನ ಬಿಡುಗಡೆಗೆ ಸೂಚಿಸಿದ್ದಾರೆಂದೇ ಸ್ಪಷ್ಟವಾಗಿ ನಮೂದಿಸಿದ್ದರಿಂದ ಮರಳು ಮಾಫಿಯಾ ಜೊತೆಗೇ ಆಡಳಿತವೂ ಕೈ ಮಿಲಾಯಿಸಿದೆಯೇ ಎಂಬ ಗುಮಾನಿಗೆ ಕಾರಣವಾಗಿದೆ.
ಇದಕ್ಕೆ ಪೂರಕವೆಂಬಂತೆ ಜಿಲ್ಲೆಯ ಎಲ್ಲಿಯೂ ಅಕ್ರಮ ಮರಳು ಹೊತ್ತು ಓಡಾಡುವ ವಾಹನಗಳ ಜಪ್ತಿಯಾಗುತ್ತಿಲ್ಲ. ಮರಳು ಸಾವಿರಾರು ಟನ್ ಅಕ್ರಮವಾಗಿ ಆಸರೆ ಮನೆಗಳ ಅಂಗಳದಲ್ಲೇ(ಜೇವರ್ಗಿಯಲ್ಲಿ) ಶೇಖರಣೆಯಾಗಿದ್ದು, ಮಾಧ್ಯಮಗಳಲ್ಲಿ ಪ್ರಮುಖವಾಗಿ ವರದಿಯಾದರೂ ಅತ್ತಲೂ ಕಣ್ಣು ಹಾಯಿಸುತ್ತಿಲ್ಲ. ಹೀಗಾಗಿ ಅಕ್ರಮ ದಂಧೆಗೆ ಜಿಲ್ಲಾಡಳಿತ, ಪೊಲೀಸ್ ತಾಳಿರುವ ಜಾಣ ಮೌನ ಜಿಲ್ಲೆಯ ಜನತೆಯ ಪಾಲಿಗೆ ಅಚ್ಚರಿಯ ಸಂಗತಿಯಾಗಿದೆ.
ಅಕ್ರಮ ಮರಳು ಇಲ್ಲಿ ಮಾಮೂಲು: ಮರಳು ಅಕ್ರಮದ ಜಾಡು ಹಿಡಿದು ಸಾಗಿರುವ 'ಕನ್ನಡಪ್ರಭ' ಜೊತೆ ಜಿಲ್ಲೆಯ ಅಫಜಲ್ಪುರ ತಾಲೂಕಿನ ಗಾಣಗಾಪುರ, ಇಟಗಾ, ರದ್ದೇವಾಡ್ಗಿಯಲ್ಲಿ ಮನಬಿಚ್ಚಿ ಮಾತನಾಡಿದ ಜನತೆ ಅಕ್ರಮ ಮರಳು ದಂಧೆ ಇಲ್ಲೆಲ್ಲಾ ಮಾಮೂಲು ಬಿಡ್ರಿ ಸಾಹೇಬ್ರ ಎಂದರು.
ಅಕ್ರಮ ದಂಧೆಯನ್ನೇ ತಮ್ಮ ವಾರದ, ತಿಂಗಳ ಮಾಮೂಲಿಗೂ ಇಲ್ಲಿನ ವಿವಿಧ ಇಲಾಖೆಯ ಮಂದಿ ಬಳಸಿಕೊಳ್ಳುತ್ತಿದ್ದಾರೆಂದು ಅನೇಕ ಮಾಹಿತಿಗಳನ್ನು, ತಮ್ಮ ಕಣ್ಣ ಮುಂದೆಯೇ ನಡೆದಂತಹ ಕಟು ವಾಸ್ತವದ ಘಟನಾವಳಿಗಳನ್ನೆಲ್ಲ ಬಿಚ್ಚಿಟ್ಟರು. ಅಕ್ರಮ ಮರಳಿನ ವಾಹನ ಕಂಡರೆ ಕೆಲವು ಇಲಾಖೆಯವರಿಗೆ ಸುಗ್ಗಿ. ಮುಖ ಅರಳುತ್ತದೆ. ವ್ಯವಹಾರ ಕುದುರುತ್ತದೆ. ಗಾಡಿ ಮುಂದೆ ಸಾಗುತ್ತದೆ ಎಂದು ಸೂಕ್ಷ್ಮವಾಗಿ, ನಾಲ್ಕೇ ಶಬ್ದಗಳಲ್ಲಿ ಜಿಲ್ಲೆಯ ಮರಲು ಮಾಫಿಯಾ ಹೇಗೆ ಸಾಗುತ್ತಿದೆ ಎಂಬುದನ್ನು ವಿವರಿಸಿದರು.
ಭೀಮಾನದಿ ಹರಿದು ಹೋಗಿರುವ ಗುಲ್ಬರ್ಗ, ಜೇವರ್ಗಿ, ಚಿತ್ತಾಪುರಗಳಲ್ಲಿ, ಕಾಗಿಣಾ ನದಿ ತೀರದ ಸೇಡಂ, ಚಿತ್ತಾಪುರ ತಾಲುಕುಗಳಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ಸಾಗಿದೆ. ಇಲ್ಲಿ ಭೀಮಾ ಪ್ರವಾಹವನ್ನೇ ಈ ಕಳ್ಳದಂಧೆ ನುಂಗಿ ಹಾಕುವ ಹಂತದಲ್ಲಿದ್ದರೂ ಇಂದಿಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ.
ಮಾಹಿತಿ ಸಲ್ಲಿಸಿದರೂ ಕ್ರಮ ಇಲ್ಲ...
ಗುಲ್ಬರ್ಗ/ಶಹಾಬಾದ್: ಭಂಕೂರ ಗ್ರಾಮ ಸೇರಿದಂತೆ ಶಹಾಬಾದ್ ಕಂದಾಯ ವಿಭಾಗದ ಅಡಿಯಲ್ಲಿ ಬರುವ ಸ್ಥಳಗಳಲ್ಲಿ ಆಕ್ರಮವಾಗಿ ಮರಳು ಶೇಖರಿಸಿರುವ ಬಗ್ಗೆ ಗ್ರಾಮ ಲೇಖಪಾಲಕರು ಕಂದಾಯ ನಿರೀಕ್ಷಕರ ಗಮನಕ್ಕೆ ತಂದರು ಸಹ ಉಪ ತಹಸೀಲ್ದಾರರು, ತಹಸೀಲ್ದಾರರು ಯಾವುದೆ ಕ್ರಮ ಕೈಗೊಂಡಿಲ್ಲ.
ಭಂಕೂರ ಗ್ರಾಮದ ವಿವಿಧೆಡೆ ಅಕ್ರಮವಾಗಿ ಮರಳು ಶೇಖರಣೆ ಮಾಡಿದ ಬಗ್ಗೆ ಗ್ರಾಮ ಲೇಖಪಾಲಕರು ಉಪ ತಹಸೀಲ್ದಾರರಿಗೆ ಜೂ. 5 ಮತ್ತು 8ರಂದು ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಗ್ರಾಮದ ವಿವಿಧ ಭಾಗದಲ್ಲಿ ಪರವಾನಗಿ ಇಲ್ಲದೆ, ರಾಜಧನ ಕಟ್ಟದೆ ಭಂಕೂರ ಗ್ರಾಮ ಲೇಖಪಾಲಕರ ಕಚೇರಿಯ ಮುಂದೆ 35 ಟಿಪ್ಪರ್ ಮರಳು, ಗ್ರಾಮದ ಸರ್ವೆ ಸಂ. 337/1 ಮಲ್ಲಿಕಾರ್ಜುನ ಎಂಬುವವರ ಜಮೀನಿನಲ್ಲಿ 15 ಟಿಪ್ಪರ್ ಮರಳು, ದೊಡ್ಡ ಗಣಪತಿ ದೇವಸ್ಥಾನದ ಎದುರು 45ರಿಂದ 50 ಟಿಪ್ಪರ್ ಮರಳು, ಸಣ್ಣ ಗಣಪತಿ ದೇವಸ್ಥಾನದ ಎದುರು 25-30 ಟಿಪ್ಪರ್ ಮರಳು, ಬಸವ ಸಮಿತಿ ಶಾಲೆ ಎದುರು 25-30 ಟಿಪ್ಪರ್ ಮರಳು, ಪಾಗದ ಮಾಸ್ಟರ್ ಮನೆ ಹತ್ತಿರ 15ರಿಂದ 20 ಟಿಪ್ಪರ್ ಮರಳು, ಶಿಲ್ಪಾ ಬಾರ್, ಆಶ್ರಮ ಶಾಲೆ ಹಿಂದಿನ ಓಣಿ, ಗುರುನಾಥ ಅವರ ಹೊಸ ಪೆಟ್ರೋಲ್ ಬಂಕ್ ಹಿಂದೆ ಕೂಡ ಮರಳು ಶೇಖರಿಸಲಾಗಿದೆ ಎಂದು ಲಿಖಿತ ಮಾಹಿತಿ ನೀಡಲಾಗಿದೆ.
ಕಾಟಮದೇವರಹಳ್ಳಿ ಗ್ರಾಮದ ಬೆಟ್ಟದ ಸುತ್ತಲು ಸುಮಾರು 120ರಿಂದ 125 ಟಿಪ್ಪರ್ ಮರಳು ಸಂಗ್ರಹಿಸಿ, ಟ್ರ್ಯಾಕ್ಟರ್, ಲಾರಿ, ಟಿಪ್ಪರ್ಗಳ ಮೂಲಕ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಆಶ್ಚರ್ಯವಾಗಿದೆ. ಈ ಬಗ್ಗೆ ಸೇಡಂ ಉಪ ಆಯುಕ್ತರು, ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಅಕ್ರಮಕ್ಕೆ ಕಡಿವಾಣ ಹಾಕುವಲ್ಲಿ ಡಿಸಿ ವಿಫಲ
ಭೀಮಾ ಹಾಗೂ ಕಾಗಿಣಾ ತೀರದಲ್ಲಿನ ಅಕ್ರಮ ಮರಳುಗಾರಿಕೆ ಸಾಗಿದ್ದರೂ ಇದನ್ನು ನೋಡಿಯೂ ನೋಡದಂತೆ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ ಕುಳಿತಿದೆ. ಅಕ್ರಮ ತಡೆಯುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಇದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆಗಾರರು. ಕಳ್ಳ ದಂಧೆಯಿಂದ ಭೀಮಾ ಹಾಗೂ ಕಾಗಿಣಾ ನದಿಗೇ ಕುತ್ತು ಬಂದಿದೆ. ಇದು ಗೊತ್ತಿದ್ದರೂ, ಟೆಂಡರ್ ಅವಧಿ ಮುಗಿದಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಿದ್ದು ನದಿಯ ಮರಳು ನಿಕ್ಷೇಪ ಕೊಳ್ಳೆಗೆ ಅನುಕೂಲ ಮಾಡಿಕೊಡುತ್ತಿದೆ. ಜಿಲ್ಲಾಡಳಿತದ ಮೌನ ಹೀಗೆಯೇ ಮುಂದುವರಿದಲ್ಲಿ ಜಿಲ್ಲಾಧಿಕಾರಿಗಳ ವಿರುದ್ಧವೇ ಹೋರಾಟ ಮಾಡಬೇಕಾಗುತ್ತದೆ.
- ಶಂಕರ ಕಟ್ಟಿಸಂಗಾವಿ, ಹೋರಾಟಗಾರರು, ಜೇವರ್ಗಿ
-ಶೇಷಮೂರ್ತಿ ಅವಧಾನಿ