ಸಾರಿಗೆ ಜಿಲ್ಲಾಧಿಕಾರಿ ಅಮಾನತಿಗೆ ಒತ್ತಾಯಿಸಿ ಧರಣಿ
ಕನ್ನಡಪ್ರಭ ವಾರ್ತೆ, ಸುರಪುರ, ಜೂ.11
ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಅಂಟಿಸಿರುವ ಅಂಬೇಡ್ಕರ್ ಭಾವಚಿತ್ರಗಳನ್ನು ತೆಗೆದು ಹಾಕುವಂತೆ ಆದೇಶ ನೀಡಿರುವ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಯನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಸುರಪುರದ ಬಸ್ ಘಟಕದ ಮುಂದೆ ಧರಣಿ ನಡೆಸಿದರು.
ನೇತೃತ್ವ ವಹಿಸಿದ್ದ ದಲಿತ ಸಂಘಟನೆಗಳ ಮುಖಂಡರಾದ ರಾಮಚಂದ್ರ ವಾಗಣಗೇರಿ, ಶರಣಪ್ಪ ವಾಗಣಗೇರಿ, ಮಾನಪ್ಪ ಕಟ್ಟಿಮನಿ, ನಾಗಣ್ಣ ಕಲ್ಲದೇವನಹಳ್ಳಿ, ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಇದೇ ತಿಂಗಳು 7ರಂದು ಶಹಾಪುರ ಘಟಕದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಗಿತ್ತು. ಜಯಂತಿಯ ಅಂಗವಾಗಿ ಅಂಬೇಡ್ಕರ್ ಭಾವಚಿತ್ರದ ಸ್ಟಿಕರ್‌ಗಳನ್ನು ಸಾರಿಗೆ ಬಸ್‌ಗಳಿಗೆ ಅಂಟಿಸಲಾಗಿತ್ತು. ವಿಭಾಗೀಯ ನಿಯಂತ್ರಣಾಧಿಕಾರಿ ಈ ಭಾವಚಿತ್ರವನ್ನು ತೆಗೆಯುವ ಆದೇಶ ನೀಡಿದ್ದು ದಲಿತ ವಿರೋಧಿ ನೀತಿ ಎಂದು ದೂರಿದರು.
ಆದೇಶ ಹಿಂಪಡೆಯಲು ಒತ್ತಾಯ: ದಲಿತರಿಗೆ ಡಾ. ಅಂಬೇಡ್ಕರ್ ಅವರೇ ದೇವರು. ಅವರ ಭಾವಚಿತ್ರವನ್ನು ಬಸ್‌ಗೆ ಅಂಟಿಸಿ ದಿನಾಲೂ ನಮಸ್ಕರಿಸಿ ಚಾಲಕರು ವಾಹನ ಚಾಲನೆ ಮಾಡುತ್ತಾರೆ. ಏಕಾಏಕಿ ಅಂಬೇಡ್ಕರ್ ಭಾವಚಿತ್ರವನ್ನು ತೆಗೆಯುವಂತೆ ಸೂಚಿಸಿರುವುದು ದಲಿತರ ಭಾವನೆಯನ್ನು ಕೆರಳಿಸಿದೆ. ಇದರಿಂದ ದಲಿತರು ಹತಾಶರಾಗಿದ್ದಾರೆ. ತಕ್ಷಣ ಈ ಆದೇಶ ಹಿಂಪಡೆಯಬೇಕು. ಆಧಿಕಾರಿಯನ್ನು ಅಮಾನತುಗೊಳಿಸಬೇಕು. ವಿಳಂಬವಾದಲ್ಲಿ ಚಳವಳಿ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಸಿದರು.
ಬಸ್ ತಡೆದು ಆಕ್ರೋಶ: ಬಸ್ ನಿಲ್ದಾಣದಲ್ಲಿ ದಲಿತ ಸಂಘಟನೆಯ ಕಾರ್ಯಕರ್ತರು ಬಸ್‌ಗಳನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನೂರಾರು ಬಸ್‌ಗಳು ಸಾಲುಗಟ್ಟಿ ನಿಂತಿದ್ದವು. ಆದೇಶ ಹಿಂಪಡೆಯುವವರೆಗೂ ರಸ್ತೆ ತಡೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ದೂರದ ಪ್ರಯಾಣಿಕರಿಗೆ ಇದರಿಂದ ತೊಂದರೆಯಾಯಿತು.
ಘಟನಾ ಸ್ಥಳಕ್ಕೆ ತಹಸೀಲ್ದಾರ್ ಗೌಸುದ್ದೀನ್, ಪಿಐ ರಾಜಕುಮಾರ ವಾಜಂತ್ರಿ, ಪಿಎಸ್‌ಐ ಹಣಮಂತಪ್ಪ ಪಟ್ಟೇದ, ಡಿಪೋ ವ್ಯವಸ್ಥಾಪಕ ಸಿದ್ದಪ್ಪ ಮಸ್ಕಿ ಭೇಟಿ ನೀಡಿದ್ದರು. ಮೂರ್ತಿ ಬೊಮ್ಮನಳ್ಳಿ, ರಾಜು ಶಖಾಪುರ, ಭೀಮರಾಯ ಕಡಿಮನಿ, ಬಸಪ್ಪ ದೋರನಹಳ್ಳಿ, ಶರಣು ಹೊಸಕೇರಾ, ಶೇಖರ ಜೀವಣಗಿ, ಭೀಮಾಶಂಕರ ದೇವಪುರ, ಸಾರಿಗೆ ಸಿಬ್ಬಂದಿ ಭೀಮಣ್ಣ ಚಂದಲಾಪುರ, ಭೀಮಣ್ಣ ತಳವಾರಗೇರಾ, ನೀಲಕಂಠ ಬೀರನೂರ, ನಿಂಗಪ್ಪ ಕನ್ನೆಳ್ಳಿ, ಸಂಗಪ್ಪ ಇದ್ದರು.
ಶಹಾಪುರದಲ್ಲೂ ಪ್ರತಿಭಟನೆ...: ಬಸ್ಸುಗಳಿಗೆ ಅಂಟಿಸಲಾಗಿದ್ದ ಡಾ. ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ತೆಗೆಸಿ ಹಾಕುವ ಮೂಲಕ ದಲಿತರು ಹಾಗೂ ಅಂಬೇಡ್ಕರ್ ಅಭಿಮಾನಿಗಳಿಗೆ ಅವಮಾನ ಮಾಡಿದ ಎನ್‌ಇಕೆಆರ್‌ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಸಂತೋಷಕುಮಾರ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಒತ್ತಾಯಿಸಿ ಶಹಾಪುರ ಈಕರಸಾಸಂಸ್ಥೆಯ ಎಸ್‌ಸಿ, ಎಸ್‌ಟಿ ನೌಕರರ ಸಂಘ ಮತ್ತು ವಿವಿಧ ದಲಿತಪರ ಸಂಘಟನೆಗಳು ಸೇರಿ ಬಸ್ ಡಿಪೋ ಮುಂದಗಡೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಸಂಘದ ಅಧ್ಯಕ್ಷ ಮಾನಯ್ಯ ಹತ್ತಿಗುಡೂರ ಮತ್ತು ಸಂಘಟನೆಯ ಪದಾಧಿಕಾರಿಗಳು ಹಾಗೂ ಭೀಮರಾಯ ಹೊಸಮನಿ, ನಾಗಣ್ಣ ಬಡಿಗೇರ, ಮರೆಪ್ಪ ಇದ್ದರು.