ಅಮ್ಮಾಪುರ ರಸ್ತೆ ಸುಧಾರಣೆಗೆ ಕನ್ನಡ ಸೇನೆ ಒತ್ತಾಯ
ಕನ್ನಡಪ್ರಭ ವಾರ್ತೆ, ಸುರಪುರ, ಜೂ.12
ತಾಲೂಕಿನ ಪೇಠ ಅಮ್ಮಾಪುರ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುವಂತ್ತಾಗಿದೆ. ಕೂಡಲೆ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಕನ್ನಡ ಸೇನೆ ಕರ್ನಾಟಕ ಸಂಘಟನೆ ಆಗ್ರಹಿಸಿದೆ.
ರು. 3.5 ಕೋಟಿ ವೆಚ್ಚದಲ್ಲಿ ಕುಂಬಾರಪೇಟದಿಂದ ಬೋನಾಳ ಕ್ರಾಸ್‌ವರೆಗಿನ 8 ಕಿಮೀ ರಸ್ತೆ ಕಾಮಗಾರಿಗೆ ವರ್ಷದ ಹಿಂದೆಯೆ ಟೆಂಡರ್ ಮುಗಿದಿದೆ. 6 ತಿಂಗಳ ಹಿಂದೆ ಗುತ್ತೇದಾರರು ಕಾಮಗಾರಿ ಆರಂಭಿಸಿ ಕೇವಲ ರಸ್ತೆ ಅಗೆತ ಮಾಡಿ ಅಷ್ಟಕ್ಕೆ ನಿಲ್ಲಿಸಿದ್ದಾರೆ. ಇದಕ್ಕೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಆರೋಪಿಸಿದೆ.
ಹದಗೆಟ್ಟ ರಸ್ತೆ: ತಾಲೂಕಿನ ಅಮ್ಮಾಪುರ, ಮಂಗಳೂರು, ಬೈಚಬಾಳ ಸೇರಿದಂತೆ ಸುಮಾರು ಇಪ್ಪತ್ತು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದೆ. ಈ ರಸ್ತೆಯಲ್ಲಿ ದಟ್ಟವಾದ ವಾಹನ ಸಂಚಾರವಿದೆ. ಆದರೆ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಲು ಯತ್ನಿಸುತ್ತಿದ್ದು, ಗುಣಮಟ್ಟದ ಕಾಮಗಾರಿ ಮಾಡುವಂತೆ ನಾಗರಿಕರು ಅವರನ್ನು ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸದ ಗುತ್ತಿಗೆದಾರ ಕೆಲಸವನ್ನು ನಿಲ್ಲಿಸಿದ್ದಾರೆ. ಇದರಿಂದ ರಸ್ತೆ ಮತ್ತಷ್ಟು ಹದಗೆಟ್ಟು ಹೋಗಿದೆ. ರಸ್ತೆ ಕಾಮಗಾರಿ ಆರಂಭಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಹಿಡಿ ಶಾಪ: ಈಗ ಮಳೆಗಾಲ ಆರಂಭವಾಗಿದೆ. ರಸ್ತೆ ಕೆಸರು ಗದ್ದೆಯಂತಾಗುತ್ತದೆ. ಕಳೆದ ಭಾನುವಾರ ಸುರಿದ ಮಳೆಗೆ 1 ಅಟೋ, 2 ಜೀಪುಗಳು ರಸ್ತೆ ಮಧ್ಯೆ ಸಿಕ್ಕು ಬಿದ್ದಿದ್ದವು. ಇದರಿಂದ ಇಡೀ ರಾತ್ರಿ ರಸ್ತೆ ಸಂಚಾರವೇ ಸ್ಥಗಿತಗೊಂಡಿತ್ತು. ಕೆಲವರು ತಮ್ಮ ಗ್ರಾಮಗಳಿಗೆ ನಡೆದು ತಲುಪಿದರು. ಕೆಲವರು ಬಸ್ ನಿಲ್ದಾಣದಲ್ಲೆ ವಸತಿ ಮಾಡಿದರು. ರಸ್ತೆಯ ಬಗ್ಗೆ ಆಸಕ್ತಿ ವಹಿಸದ ಜನಪ್ರತಿನಿಧಿಗಳಿಗೂ, ಇಲಾಖೆ ಆಧಿಕಾರಿಗಳಿಗೂ ಜನರು ನಿತ್ಯ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಸಂಘಟನೆ ಕಾರ್ಯಕರ್ತರು ಕಿಡಿಕಾರಿದ್ದಾರೆ.
ಕಾಮಗಾರಿ ನಿಲ್ಲಿಸಿದ ಗುತ್ತಿಗೆದಾರರ ಪರವಾನಗಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ಸೂಕ್ತ ಕ್ರಮ ಜರುಗಿಸಬೇಕು. ಶೀಘ್ರವೇ ಟೆಂಡರ್ ಕರೆದು ರಸ್ತೆ ಕಾಮಗಾರಿ ಆರಂಭಿಸಬೇಕು. ವಿಳಂಬವಾದಲ್ಲಿ ರಸ್ತೆಗೆ ಒಳಪಡುವ ವಿವಿಧ ಗ್ರಾಮಗಳ ನೂರಾರು ಜನರೊಂದಿಗೆ ಲೋಕೋಪಯೋಗಿ ಇಲಾಖೆ ಎದುರು ಧರಣಿ ಹಮ್ಮಿಕೊಳ್ಳಲಾಗುವುದೆಂದು ಸಂಘಟನೆಯ ಜಿಲ್ಲಾಧ್ಯಕ್ಷ ರಾಜು ಕುಂಬಾರ ಇಲಾಖೆಗೆ ಸಲ್ಲಿಸಿದ ದೂರಿನಲ್ಲಿ ಎಚ್ಚರಿಸಿದ್ದಾರೆ.