ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇದ್ದೂ ಇಲ್ಲದಂತಿರುವ ಕೆಂಭಾವಿ ಬಸ್ ನಿಲ್ದಾಣ

Lingaraj Badiger
Updated On : 13 Jun 2013, 10:54 am

ಕನ್ನಡಪ್ರಭ ವಾರ್ತೆ  ಕೆಂಭಾವಿ  ಜೂ.12
ಕೆಂಭಾವಿ: ಪಟ್ಟಣವು ದಿನೇ ದಿನೇ ವೇಗವಾಗಿ ಬೆಳೆಯುತ್ತಿದ್ದು ಜನರು ತಮ್ಮ ಪ್ರತಿನಿತ್ಯದ ಕೆಲಸ ಕಾರ್ಯಗಳಿಗಾಗಿ ಪ್ರಯಾಣ ಮಾಡುವ ಅನಿವಾರ್ಯತೆ ಹೆಚ್ಚಾಗಿದೆ. ಪಟ್ಟಣಕ್ಕೆ ಬಸ್ಸಿನ ಸೌಕರ್ಯ ಇದ್ದರೂ, ಬಸ್ ನಿಲ್ದಾಣ ಮಾತ್ರ ಇದ್ದೂ ಇಲ್ಲದಂತಾಗಿದೆ.
  ಈಗಿರುವ ಬಸ್ ನಿಲ್ದಾಣವು ಪಟ್ಟಣದ ಹೊರಭಾಗದಲ್ಲಿದ್ದು ಮಹಿಳೆಯರು, ಮಕ್ಕಳು, ವೃದ್ಧರಿಗೆ ಅಲ್ಲಿಯವರೆಗೆ ಹೋಗಲಾಗದೇ ಹಳೆಯ ಬಸ್ ನಿಲ್ದಾಣದಲ್ಲೇ ನಿಲ್ಲುತ್ತಾರೆ. ಹೊಸ ಬಸ್ ನಿಲ್ದಾಣದಲ್ಲಿ  ಉಪಾಹಾರ ಗೃಹ, ಪುಸ್ತಕ ಮಳಿಗೆ ಕೂಡಾ ಇವೆ. ಇವುಗಳನ್ನು ಟೆಂಡರ್ ಮೇಲೆ ಪಡೆದು ವ್ಯಾಪಾರ ಮಾಡಬೇಕೆಂದರೆ ಊರ ಹೊರಗಿರುವುದರಿಂದ ಜನರು ಇಲ್ಲದೇ ವ್ಯಾಪಾರ ಕೂಡಾ ಆಗದೇ ಮುಚ್ಚಿಕೊಂಡು ಹೋಗಿದ್ದಾರೆ.
  ಅಲ್ಲದೇ ನಿಯಂತ್ರಕರ ಕೊಠಡಿ, ಮಹಿಳಾ ಕೊಠಡಿ ಇದ್ದರೂ ಯಾವೊಬ್ಬ ಪ್ರಯಾಣಿಕರು ಅಲ್ಲಿಯವರೆಗೆ ಹೋಗುತ್ತಿಲ್ಲ. ಹೀಗಾಗಿ ಬಸ್‌ಗಳು ಕೂಡಾ ಹಳೆಯ ಬಸ್ ನಿಲ್ದಾಣದ ಮುಖ್ಯರಸ್ತೆಯ ಮೇಲೆಯೇ ನಿಂತು ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿರುವುದು ಸಾಮಾನ್ಯ.
ನೀರು ಸಿಕ್ಕಲ್ಲ: ಚಾಲಕರು ಮತ್ತು ನಿರ್ವಾಹಕರು ಬಸ್‌ಗಳನ್ನು ಊರ ಹೊರಗಿರುವ ಬಸ್ ನಿಲ್ದಾಣದಲ್ಲೇ ನಿಲ್ಲಿಸಿದರೆ ಅಲ್ಲಿ ಕುಡಿಯಲು ನೀರು ಕೂಡಾ ಸಿಗುವುದಿಲ್ಲ. ಅಲ್ಲಿರುವ ಕೊಳವೆ ಬಾವಿಯ ಉಪ್ಪು ನೀರನ್ನೇ ಕುಡಿಯಬೇಕು. ಈ ನಿಲ್ದಾಣವು ಮಳೆ ಬಂತೆಂದರೆ ಬತ್ತದ ಗದ್ದೆಯಂತಾಗುತ್ತದೆ. ನಿಲ್ದಾಣ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ಅನಿವಾರ್ಯವಾಗಿ ಅವರೂ ಹಳೇ ಬಸ್ ನಿಲ್ದಾಣದ ರಸ್ತೆಯ ಮೇಲೆಯೇ ಬಸ್‌ಗಳನ್ನು ನಿಲ್ಲಿಸುತ್ತಾರೆ.
ಪ್ರಯಾಣಿಕರ ದುಃಸ್ಥಿತಿ: ಜಿಲ್ಲೆಯಲ್ಲಿ ಸುರಪುರ ಹಾಗೂ ಶಹಾಪುರ ಘಟಕಕ್ಕೆ ಕೆಂಭಾವಿ ವಲಯ ಹೆಚ್ಚಿನ ಲಾಭ ತಂದುಕೊಡುವ ಏಕೈಕ ಮಾರ್ಗವಾಗಿದೆ. ಆದರೆ ಇಲ್ಲಿಯ ಪ್ರಯಾಣಿಕರ ದುಃಸ್ಥಿತಿ ಮಾತ್ರ ಯಾರಿಗೂ ಕಾಣಿಸುವುದಿಲ್ಲ. ಹೀಗಾಗಿ ಈ ಬಸ್ ನಿಲ್ದಾಣವು ನಿರ್ಜನ ಪ್ರದೇಶವಾಗಿದ್ದರಿಂದ ಅಲ್ಲಿ ಜೂಜು ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಈ ಮೊದಲು ಬಸ್ ನಿಲ್ದಾಣಕ್ಕೆ ಅನುಕೂಲವಾದ ಪ್ರದೇಶಗಳನ್ನು ನಿಗದಿಮಾಡಿದ್ದರೂ ರಾಜಕೀಯ ಹಿತಾಸಕ್ತರು ಸ್ವಾರ್ಥಕ್ಕೋಸ್ಕರ ಅದನ್ನು ಬೇರೆಡೆಗೆ ವರ್ಗಾಯಿಸಿದರು. ಆದರೆ ಅದು ಜನತೆಗೆ ಅನುಕೂಲವಾಗುವುದಕ್ಕಿಂತ ಹೆಚ್ಚು ತೊಂದರೆ ಅನುಭವಿಸಬೇಕಾಗಿದೆ.
  ಎಲ್ಲಾ ಪ್ರಯಾಣಿಕರು ಹಳೇ ಬಸ್ ನಿಲ್ದಾಣದಲ್ಲೇ ಬಸ್‌ಗಾಗಿ ಕಾಯುತ್ತಿರುತ್ತಾರೆ. ಆದರೆ ಅಲ್ಲಿ ನೆರಳಿನ ವ್ಯವಸ್ಥೆ, ಕೂಡಲು ಆಸನ ವ್ಯವಸ್ಥೆ ಇಲ್ಲ. ರಸ್ತೆಯ ಮೇಲೆ ಮಳೆ, ಬಿಸಿಲು ಲೆಕ್ಕಿಸದೇ ಬಸ್‌ಗಾಗಿ ಕಾಯುತ್ತ ನಿಲ್ಲುವ ಪರಿಸ್ಥಿತಿಯಿಂದ ಪ್ರಯಾಣಿಕರು ಬೇಸತ್ತಿದ್ದಾರೆ.
  ಈಗಲಾದರೂ ಈಗಿರುವ ಬಸ್ ನಿಲ್ದಾಣದಲ್ಲಿ ಮಹಿಳೆಯರು ಮಕ್ಕಳು ಮತ್ತು ವೃದ್ದರು ಸೇರಿದಂತೆ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಂಗುದಾಣವನ್ನು ನಿರ್ಮಿಸಿ ನಾಗರಿಕರಿಗೆ ಅನುಕೂಲ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement