ದುಡಿಮೆಗೆ ಬಾಲಕರ ಬಳಕೆ ಅಪರಾಧ
ಕನ್ನಡಪ್ರಭ ವಾರ್ತೆ, ಯಾದಗಿರಿ, ಜೂ.12
ಬಾಲ ಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯನ್ವಯ 14 ವರ್ಷರೊಳಗಿನ ಮಕ್ಕಳನ್ನು ಯಾವುದೇ ಉದ್ದಿಮೆಗಳಲ್ಲಿ ತೊಡಗಿಸುವುದು ಶಿಕ್ಷಾರ್ಹ ಅಪರಾಧ. ಬಾಲಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ಅಪಾಯಕಾರಿ ಹಾಗೂ ಅಪಾಯಕಾರಿವಲ್ಲದ ಉದ್ದಿಮೆಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ತಪ್ಪಿತಸ್ಥ ಮಾಲೀಕರ ವಿರುದ್ಧ ಪ್ರಕರಣವನ್ನು ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ನಗರದ ಬಸವೇಶ್ವರ ಕಲ್ಯಾಣಮಂಟಪದಲ್ಲಿ ಬುಧವಾರ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಉದ್ಫಾಟಿಸಿ ಅವರು ಮಾತನಾಡಿದರು. ಅಪಾಯಕಾರಿ ಹಾಗೂ ಅಪಾಯಕಾರಿಯಲ್ಲದ ಉದ್ದಿಮೆಗಳಾದ ಕಾರ್ಖಾನೆಗಳು, ದಾಬಾ, ಗ್ಯಾರೇಜ್, ಅಂಗಡಿಗಳು ಸೇರಿದಂತೆ ಇಂತಹ ಹಲವು ಕಡೆಗಳಲ್ಲಿ 14 ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಳ್ಳುತ್ತಿರುವುದು ಶಿಕ್ಷಾರ್ಹ ಅಪರಾಧವಾಗಿದೆ. ಮಕ್ಕಳ ಭವಿಷ್ಯವನ್ನು ಅಂಧಕಾರದಲ್ಲಿ ತಳ್ಳುವ ಈ ಪದ್ಧತಿ ನಿರ್ಮೂಲನೆಗೊಳಿಸುವ ಅವಶ್ಯಕತೆ ಇದೆ. ಅಧಿಕಾರಿಗಳು ನಿರ್ಲಕ್ಷ್ಯ ತೋರದೆ ಬಾಲಕಾರ್ಮಿಕರನ್ನಾಗಿ ಇಟ್ಟುಕೊಂಡಿರುವ ಮಾಲೀಕರ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಕಾರ್ಯವನ್ನು ಚುರುಕುಗೊಳಿಸಬೇಕೆಂದು ಸೂಚನೆ ನೀಡಿದರು.
ಪ್ರಕರಣ ದಾಖಲಿಸಿ: ಕಾರ್ಮಿಕ ಇಲಾಖೆ ಅಧಿಕಾರಿಗಳು ಕಂದಾಯ ಇಲಾಖೆ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಕಾರವನ್ನು ಈ ವಿಷಯದಲ್ಲಿ ಪಡೆಯಬೇಕು. ತಾವು ಸಹ ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ ಜಿಲ್ಲಾಧಿಕಾರಿಗಳು, ಕಾರ್ಮಿಕ ಅಧಿಕಾರಿಗಳು ಭಯವಿಲ್ಲದೇ ನಿಷ್ಠೆಯಿಂದ ಕಾರ್ಯ ನಿರ್ವಹಿಸಿ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಅನಿರೀಕ್ಷಿತವಾಗಿ ಉದ್ದಿಮೆಗಳ ಮೇಲೆ ದಾಳಿ ನಡೆಸಿ ಬಾಲಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಬೇಕು. ಅದೇ ರೀತಿ ಮಕ್ಕಳ ಪಾಲಕರು ಹಾಗೂ ಸಮಾಜದ ಪ್ರಜ್ಞಾವಂತ ನಾಗರಿಕರು ಸಹ ಈ ಪದ್ಧತಿ ನಿರ್ಮೂಲನೆಗೆ ಸಹಕರಿಸಬೇಕು ಎಂದರು.
ಬಾಲ ಕಾರ್ಮಿಕರನ್ನು ನಿಯೋಜಿಸಿಕೊಂಡಿರುವ ಬಗ್ಗೆ ಗುರುತಿಸಲು ಕಾರ್ಮಿಕ ಇಲಾಖೆ ಅಧಿಕಾರಿಗಳು ಸಹಾಯವಾಣಿ ಕೇಂದ್ರ ಸ್ಥಾಪಿಸಬೇಕು. ಇದರಿಂದ ಸಾರ್ವಜನಿಕರು ದೂರವಾಣಿ ಮೂಲಕ ದೂರು ಸಲ್ಲಿಸಿ ತಪ್ಪಿತಸ್ಥ ಮಾಲೀಕರ ಬಗ್ಗೆ ತಿಳಿಸುವುದರ ಜತೆಗೆ ಬಾಲಕಾರ್ಮಿಕ ಮಕ್ಕಳನ್ನು ಗುರುತಿಸಲು ಸಹಕಾರಿಯಾಗುತ್ತದೆ. ಅಪರಾಧ: ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡಿದ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಕಾರಬಾರಿ ರವೀಂದ್ರ ಮಾತನಾಡಿ, ಬಡತನ, ಅನಕ್ಷರತೆ, ಜನಸಂಖ್ಯೆ ಹೆಚ್ಚಳ, ನಿರುದ್ಯೋಗ, ಪಾಲಕರ ನಿರ್ಲಕ್ಷ್ಯ ಹಾಗೂ ವಿವಿಧ ಉದ್ದಿಮೆಗಳ ಮಾಲೀಕರ ನಿರ್ಲಕ್ಷ್ಯದಿಂದಾಗಿ ಬಾಲಕಾರ್ಮಿಕ ಪದ್ದತಿ ಇನ್ನೂ ಜೀವಂತವಾಗಿದೆ. ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನು ರೀತಿಯಲ್ಲಿ ಅಪರಾಧವಾಗಿದ್ದು, ಒಂದು ವರ್ಷ ಜೈಲು ಹಾಗೂ ರು. 20 ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ. ಕಾರಣ ಇಂತಹ ಮಕ್ಕಳನ್ನು ತಮ್ಮ ಉದ್ದಿಮೆಗಳಲ್ಲಿ ಮಾಲೀಕರು ನಿಯೋಜಿಸಿಕೊಳ್ಳಬಾರದು ಮತ್ತು ಪಾಲಕರು ಸಹ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶಾಲೆಗೆ ಸೇರಿಸುವಂತೆ ಕರೆ ನೀಡಿದರು.
ಉತ್ತಮ ಪ್ರಜೆಗಳಾಗಲಿ: ಜೆಎಂಎಫ್‌ಸಿ ಸಿವಿಲ್ ನ್ಯಾಯಾಧೀಶ ಟಿ.ಶ್ರೀನಿವಾಸ, ಬಾಲಕಾರ್ಮಿಕರಿಂದಾಗಿ ಭಾರತವು ಉತ್ತಮ ಪ್ರಜೆ ಪಡೆಯಲು ಸಹ ತೊಂದರೆಯಾಗುತ್ತದೆ. ಕಾರಣ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪ್ರಜ್ಞಾವಂತ ನಾಗರಿಕರು ಇಂತಹ ಮಕ್ಕಳನ್ನು ಗುರುತಿಸಿ ಶಾಲೆ ಸೇರಿಸುವ ಕಾರ್ಯವನ್ನು ಮಾಡುವಂತೆ ಕರೆ ನೀಡಿದರು. ಗುರುಮಠಕಲ್ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ.ಅಶೋಕ ಮಟ್ಟಿ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗರ್ಟ್ರೂಡ್ ವೇಗಸ್ ಪ್ರತಿಜ್ಞಾ ವಿಧಿ ಬೋಧಿಸಿದರು. ಡಿಡಿಪಿಐ ರಾಮಾಂಜನೇಯ, ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಬಿ.ಅನ್ಸಾರಿ, ಡಿವೈಎಸ್ಪಿ ಎಸ್.ಡಿ. ಕಟ್ಟಿಮನಿ ಇದ್ದರು. ರಿಯಾಜ್ ಪಟೇಲ್ ಪ್ರಾರ್ಥಿಸಿದರು. ಜಿಲ್ಲಾ ಬಾಲ ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಘುವೀರಸಿಂಗ್ ಠಾಕೂರ್ ಕಾರ್ಯಕ್ರಮ ನಿರ್ವಹಿಸಿದರು.