ನಿರ್ಲಕ್ಷ್ಯ; ಕಾಮಗಾರಿ ನೆನೆಗುದಿಗೆ
ಯಾದಗಿರಿ: ಇಲ್ಲಿಯ ಲಕ್ಷ್ಮೀನಗರದ ವಾರ್ಡ್ ನಂ. 26ರಲ್ಲಿ ಬಿಆರ್ಜಿಎಫ್ ಯೋಜನೆಯಲ್ಲಿ ಟೆಂಡರ್ ಕರೆದಿರುವ ಕಾಮಗಾರಿಯನ್ನು ಒಂದು ವರ್ಷ ಕಳೆದರೂ ಕೈಗೊಳ್ಳದಿರುವುದು ನಗರಸಭೆ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಜೈಕರವೇ ಜಿಲ್ಲಾಧ್ಯಕ್ಷ ಬಾಪುಗೌಡ ಮುಷ್ಟೂರ ಆರೋಪಿಸಿದ್ದಾರೆ.
ಕಾಮಗಾರಿಯನ್ನು ಕೂಡಲೇ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮಳೆಗಾಲ ಆರಂಭವಾದರೆ ವಾರ್ಡಿನಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ತಿರುಗಾಡಲು ಅನಾನುಕೂಲವಾಗುತ್ತದೆ. ಶಾಲಾ ಮಕ್ಕಳಿಗೆ ತೀವ್ರ ಸಮಸ್ಯೆ ಆಗುತ್ತದೆ. ಆದ್ದರಿಂದ ಆರ್ವಿ ಶಾಲೆ ಹತ್ತಿರ ಸಿಸಿ ಚರಂಡಿ ನಿರ್ಮಾಣ, ವೀರಣ್ಣ ಮನೆಯ ಹತ್ತಿರ ಸಿಸಿ ಚರಂಡಿ ಮತ್ತು ರಸ್ತೆ ನಿರ್ಮಾಣ, ಶರಣಪ್ಪ ಮನೆಯಿಂದ ರೋಹಿಣಿ ಫೋಟೋ ಸ್ಟುಡಿಯೋ ಮನೆಯವರೆಗೆ ಸಿಸಿ ಚರಂಡಿ ನಿರ್ಮಾಣವಾಗಬೇಕು. ಡಾ. ಅನವರ ಮನೆ ಹತ್ತಿರ ಸಿಸಿ ಚರಂಡಿ, ಲಕ್ಷ್ಮಿ ಗುಡಿ ಹತ್ತಿರ ಅರ್ಧಕ್ಕೆ ನಿಂತ ಕಾಮಗಾರಿ ಪೂರ್ಣಗೊಳಿಸಬೇಕು. ಈ ಎಲ್ಲ ಕಾಮಗಾರಿಗಳಿಗೆ ಟೆಂಡರ್ ಆಗಿದ್ದರೂ ಕೈಗೊಳ್ಳದಿರುವುದು ನಗರಸಭೆ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಶೀಘ್ರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳದಿದ್ದರೆ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಜೈಕರವೇ ನಗರಸಭೆ ಆಯುಕ್ತರಿಗೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಚೇತನ ಮಿಲ್ಟ್ರಿ, ಧನರಾಜ ತಂಗಡಗಿ, ಶ್ರೀಕಾಂತ ಭೀಮನಳ್ಳಿ, ಶಿವುಕುಮಾರ, ರಾಘು ಗುತ್ತೇದಾರ, ಧರ್ಮಣ್ಣ ಗಿರಪ್ಪನೋರ್, ಬಸವರಾಜ ಮುಧೋಳ ಇತರರು ಇದ್ದರು.