ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪ್ರಗತಿಗೆ ಬಾಲಕಾರ್ಮಿಕ ಪದ್ಧತಿ ಮಾರಕ: ಡಿಸಿ

Lingaraj Badiger
Updated On : 13 Jun 2013, 10:51 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.12
ರಾಷ್ಟ್ರದ ಪ್ರಗತಿಗೆ ಮಾರಕವಾಗಿರುವ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಮಾಜದ ಎಲ್ಲ ವರ್ಗದ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಬುಧವಾರ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ  ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ್ ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸಂಘ, ಕಾರ್ಮಿಕ ಇಲಾಖೆ ಮತ್ತು ಗುಲ್ಬರ್ಗ ನ್ಯಾಯವಾದಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಶೇಷ ಶಾಲೆ: ಬಾಲಕಾರ್ಮಿಕರನ್ನು ಕೆಲಸದಿಂದ ಮುಕ್ತಗೊಳಿಸಲು ಸರ್ಕಾರದ ಯೋಜನೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅವರಿಗೆಂದೇ ಪುನರ್ವಸತಿ ಕೇಂದ್ರಗಳನ್ನು ಆರಂಭಿಸಲಾಗಿದೆ. ವಿಶೇಷ ಶಾಲೆ ಹಾಗೂ ವಸತಿ ಶಾಲೆಗಳನ್ನು ತೆರೆಯಲಾಗಿದೆ ಎಂದರು.
ಸಾರ್ವಜನಿಕರು ಬಾಲಕಾರ್ಮಿಕರನ್ನು ಕಂಡಲ್ಲಿ ಅವರನ್ನು ಸರ್ಕಾರ ಆರಂಭಿಸಿರುವ ಈ ಪುನರ್ವಸತಿ ಕೇಂದ್ರಗಳಲ್ಲಿ ದಾಖಲು ಮಾಡಬಹುದು. ಸಮಾಜದಲ್ಲಿ ಎಲ್ಲ ವರ್ಗದ ನಾಗರೀಕರು ಈ ಕಾರ್ಯವನ್ನು ಮಾಡಿದ್ದಲ್ಲಿ ಬಾಲ ಕಾರ್ಮಿಕರ ಪ್ರಮಾಣವನ್ನು ತಗ್ಗಿಸಬಹುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ. ವಿಜಯನ್ ಮಾತನಾಡಿ, ಮಕ್ಕಳು ಸಮಾಜಕ್ಕೆ ದೇವರ ಕೊಡುಗೆ. ಆರಂಭದಲ್ಲೇ ಅವರಿಗೆ ಉತ್ತಮ ಶಿಕ್ಷಣ ಒದಗಿಸಿ ಭದ್ರ ಅಡಿಪಾಯ ಹಾಕಿಕೊಟ್ಟರೆ ಮುಂದೆ ಉತ್ತಮ ನಾಗರಿಕರಾಗುತ್ತಾರೆ ಎಂದರು.
ಮಕ್ಕಳ ಹಕ್ಕು: ಬಡತನದ ನಿವಾರಣೆಗೆಂದು ಎಳೆ ವಯಸ್ಸಿನ ಮಕ್ಕಳನ್ನು ದುಡಿಮೆಗೆ ದೂಡುವುದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಬಾಲ್ಯದಲ್ಲಿ ಸ್ಬಚ್ಛಂದವಾಗಿರಬೇಕಾದ ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದರು.
ಬಾಲ ಕಾರ್ಮಿಕ ಪದ್ಧತಿ ನಿವಾರಣೆಗೆ ಸರ್ಕಾರದಿಂದ ಪುನರ್ವಸತಿ ಕೇಂದ್ರಗಳನ್ನು, ವಿಶೇಷ ಶಾಲೆಗಳನ್ನು ಹಾಗೂ ವಸತಿ ಶಾಲೆಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ತಮ್ಮ ಪರಿಸರದಲ್ಲಿ ಕಂಡು ಬರುವ ಬಾಲ ಕಾರ್ಮಿಕರನ್ನು ತಮ್ಮ ಸಮೀಪದ ಪೊಲೀಸ್ ಠಾಣೆಗಳಿಗೆ ಕರೆದೊಯ್ದರೆ, ಪೊಲೀಸರು ಬಾಲ ಕಾರ್ಮಿಕರನ್ನು ಪುನರ್ವಸತಿ ಕೇಂದ್ರಗಳಿಗೆ ದಾಖಲು ಮಾಡುತ್ತಾರೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಲ್ಲವಿ ಆಕುರಾತಿ ಮಾತನಾಡಿದರು. ಮಹಾನಗರ ಪಾಲಿಕೆ ಆಯುಕ್ತ ರವೀಂದ್ರ, ಕಾರ್ಮಿಕ ಉಪ ಆಯುಕ್ತ ಎಂ.ಎಸ್. ಚಿದಾನಂದ, ಕಾರ್ಮಿಕ ಅಧಿಕಾರಿ ಜಿ. ಸಿದ್ದಲಿಂಗಪ್ಪ, ಗುಲ್ಬರ್ಗ ನ್ಯಾಯವಾದಿ ಸಂಘದ ಅಧ್ಯಕ್ಷ ಡಿ.ಕೆ. ಯೂಸೂಫ್, ಗುಲ್ಬರ್ಗ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಆನಂದರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement