ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮುಂಗಾರು; ಬಿತ್ತನೆ ಬೀಜ, ಗೊಬ್ಬರಕ್ಕೆ ಉತ್ತಮ ಬೇಡಿಕೆ

Lingaraj Badiger
Updated On : 13 Jun 2013, 10:51 am

ಚಿಂಚೋಳಿ: ತಾಲೂಕಿನ ಅನೇಕ ಗ್ರಾಮಗಳಲ್ಲಿ ಮುಂಗಾರು ಮಳೆಯಾಗುತ್ತಿದ್ದು, ರೈತರು ತಮ್ಮ ಜಮೀನುಗಳಲ್ಲಿ ಮುಂಗಾರು ಬಿತ್ತನೆ ಚುರುಕುಗೊಳಿಸಿದ್ದಾರೆ. ರೈತರಿಗೆ ಸೋಯಾ ಬೀಜ ಮತ್ತು ಗೊಬ್ಬರ ಬೇಡಿಕೆ ಹೆಚ್ಚಾಗಿದೆ.
ತಾಲೂಕಿನಲ್ಲಿ ಕಳೆದೆರಡು ದಿನಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಸಂತಸದಲ್ಲಿಯೇ ಬೀಜ, ಗೊಬ್ಬರ ಖರೀದಿಸುತ್ತಿದ್ದಾರೆ. ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳಾಗಿರುವ ಚಿಂಚೋಳಿ, ಕೋಡ್ಲಿ, ಚಿಮ್ಮನಚೋಡ, ಸುಲೇಪೇಟ್‌ಗಳಿಂದ ರೈತರು ಬೀಜಗಳನ್ನು ಖರೀದಿಸುತ್ತಿದ್ದಾರೆ.
ಸರಬರಾಜು: ಮುಂಗಾರು ಬಿತ್ತನೆಗಾಗಿ ಪ್ರಸಕ್ತ ಸಾಲಿನಲ್ಲಿ ರೈತರಿಗೆ ಸೋಯಾ ಬೀಜದ ಹೆಚ್ಚಿನ ಬೇಡಿಕೆ ಇದೆ. ಸದ್ಯ ತಾಲೂಕಿಗೆ 128 ಟನ್ ಸೋಯಾ ಬೀಜ ಸರಬರಾಜು ಆಗಿದ್ದು, ರೈತರಿಗೆ ವಿತರಿಸಲಾಗಿದೆ. ಇನ್ನೂ 40 ಟನ್ ಸೋಯಾ ಬೀಜ ಜಿಲ್ಲಾ ಕೇಂದ್ರಗಳಿಂದ ಬೀಜಗಳನ್ನು ಸರಬರಾಜುಗೊಳ್ಳುತ್ತಿದೆ. ರೈತರಿಗೆ ಬೀಜದ ಕೊರತೆ ಆಗದಂತೆ ತಾಲೂಕು ಕೃಷಿ ಇಲಾಖೆ ಶ್ರಮ ವಹಿಸಿದೆ ಎಂದು ತಾ. ಸಹಾಯಕ ಕೃಷಿ ನಿರ್ದೇಶಕಿ ಜಾನಕಿಬಾಯಿ ಬಳವಾಟ್ ತಿಳಿಸಿದರು.
ತಾಲೂಕಿನ ಐನಾಪುರ ವಲಯದಲ್ಲಿ ಬಿತ್ತನೆ ಕಾರ್ಯ ಭರದಿಂದ ನಡೆದಿದೆ. ಶೇ.15ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಇನ್ನು ಸುಲೇಪೇಟ್, ಕೋಡ್ಲಿ, ಕುಂಚಾವರಂ, ನಿಡಗುಂದಾ, ಗಡಿಕೇಶ್ವರ, ಸಾಲೇಬೀರನಳ್ಳಿ, ಹಸರಗುಂಡಗಿ, ರಟಕಲ್, ಚಂದನಕೇರಾ, ಚೇಂಗಟಾ, ಮಿರಿಯಾಣ, ಶಾದೀಪುರ, ಗಡಿಲಿಂಗದಳ್ಳಿ, ಕನಕಪುರ, ಚಿಮ್ಮನಚೋಡ, ಮೋಘಾ, ಸಲಗರ ಬಸಂತಪುರ ಗ್ರಾಮಗಳಲ್ಲಿ ಬಿತ್ತನೆ ಕಾರ್ಯ ನಡೆಯುತ್ತಿದೆ ಎಂದು ಸ. ಕೃಷಿ ನಿರ್ದೇಶಕರು ತಿಳಿಸಿದರು.
ಯಶಸ್ವಿನಿ ನೋಂದಣಿ ಪ್ರಾರಂಭ
ಗುಲ್ಬರ್ಗ: ಜಿಲ್ಲೆಯ 2013-14ನೇ ಸಾಲಿಗೆ ಯಶಸ್ವಿನಿ ಸಹಕಾರಿ ರೈತರ ಆರೋಗ್ಯ ರಕ್ಷಣಾ ಯೋಜನೆಯಡಿ ಫಲಾನುಭವಿಗಳನ್ನು ನೋಂದಾಯಿಸುವ ಕಾರ್ಯ ಸರ್ಕಾರದ ನಿರ್ದೇಶನದಂತೆ  ಜುಲೈ 15 ರಿಂದ ಆರಂಭವಾಗುವುದು. ಯಶಸ್ವಿನಿ ಸದಸ್ಯರು ಸದಸ್ಯತ್ವ ನವೀಕರಿಸಿಕೊಳ್ಳಲು ಆಗಸ್ಟ್ 31 ಹಾಗೂ ಯಶಸ್ವಿನಿ ಸದಸ್ಯರನ್ನು ನೋಂದಾಯಿಸಲು ಅಕ್ಟೋಬರ್ 15 ಕೊನೆಯ ದಿನವಾಗಿರುತ್ತದೆ. ಗ್ರಾಮೀಣ ಸಹಕಾರಿಗಳು ಸಂಬಂಧಿಸಿದ ಸಹಕಾರ ಸಂಘಗಳಲ್ಲಿ ತಮ್ಮ ಹಾಗೂ ಕುಟುಂಬ ಸದಸ್ಯರ ಹೆಸರಿನಿಂದ ವಂತಿಕೆ ಹಣ ಪಾವತಿಸಿ ಸರ್ಕಾರದ ಈ ಯೋಜನೆ ಲಾಭ ಪಡೆದುಕೊಳ್ಳಬೇಕು ಎಂದು ಗುಲ್ಬರ್ಗ ಉಪ ವಿಭಾಗದ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement