ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಧಿಕಾರಿಗಳ ಬೆವರಿಳಿಸಿದ ಸಿಇಒ

Lingaraj Badiger
Updated On : 14 Jun 2013, 10:57 am

ಕನ್ನಡಪ್ರಭ ವಾರ್ತೆ  ಯಾದಗಿರಿ  ಜೂ.13
ಕಂದಳ್ಳಿ ಬಳಿ ಭೀಮಾ ನದಿಗೆ ಕಟ್ಟಿರುವ ಬ್ಯಾರೇಜಿನಿಂದ ಕೋನಹಳ್ಳಿ ಹಾಗೂ ವಡಗೇರಾ ಗ್ರಾಮಗಳಿಗೆ ಮಂಗಳವಾರದೊಳಗೆ ಕುಡಿವ ನೀರನ್ನು ಬಿಡಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ. ಜಿಲಾನಿ ಎಚ್ಚರಿಕೆ ನೀಡಿದರು.
  ಶಹಾಪುರ ತಾಲೂಕಿನ ವಡಗೇರಾ ಸಮೀಪದಲ್ಲಿ ಸುಮಾರು ರು. 3 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಶಾಶ್ವತ ಕುಡಿವ ನೀರಿನ ಯೋಜನೆಯಾದ ಕಂದಳ್ಳಿ ಭೀಮಾ ಬ್ಯಾರೇಜ್ ಸ್ಥಳಕ್ಕೆ ಗುರುವಾರ ಅವರು ಭೇಟಿ ನೀಡಿ ಈ ಎಚ್ಚರಿಕೆ ನೀಡಿದರು.
ಹಾರಿಕೆ ಉತ್ತರ: ಆ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸಾರ್ವಜನಿಕರು ಮಾತನಾಡಿ, ಕುಡಿಯುವ ನೀರಿನ ಬಗ್ಗೆ ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕುಡಿಯಲು ನೀರಿಲ್ಲ ಎಂದು ಹೇಳಿದರೂ ಅಧಿಕಾರಿಗಳು ಹಾರಿಕೆ ಉತ್ತರವನ್ನು ಕೊಡುತ್ತಾರೆ ಎಂದು ದೂರಿದರು.
  ಇದರಿಂದ ಕೆಂಡಾಮಂಡಲರಾದ ಸಿಇಒ ಅಧಿಕಾರಿಗಳ ಮೇಲೆ ಹರಿಹಾಯ್ದರು. ಜನರು ನೀರಿಲ್ಲದೇ ಪರದಾಡುತ್ತಿರುವುದೂ ನಿಮಗೆ ಕಾಣಿಸುವುದಿಲ್ಲವೇ? ಯೋಜನೆ ಪೂರ್ಣಗೊಂಡರೂ ನೀರು ಹರಿಸಲು ಸಾಧ್ಯವಾಗದಿದ್ದರೆ ಯಾರು ಕೆಲಸ ಮಾಡಬೇಕು ಎಂದು ತರಾಟೆಗೆ ತೆಗೆದುಕೊಂಡರು.
  ಇನ್ನು ಒಂದು ವಾರ ಕಾಲಾವಕಾಶ ನೀಡುತ್ತೇನೆ. ಬರುವ ಮಂಗಳವಾರದಿಂದ ಈ ಗ್ರಾಮಗಳಿಗೆ ಕುಯುವ ನೀರನ್ನು ಸಮರ್ಪಕ ರೀತಿಯಲ್ಲಿ ಸರಬರಾಜು ಮಾಡಬೇಕು. ಇಲ್ಲದಿದ್ದರೆ ಅಂಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದರ ಜೊತೆಗೆ ನಾನೂ ಇಲ್ಲಿಯೇ ಮೊಕ್ಕಾಂ ಮಾಡುವುದಾಗಿ ಎಚ್ಚರಿಸಿದರು.
ಸಿಇಒ ಆದೇಶ: ಕಂದಳ್ಳಿ ಗ್ರಾಮಸ್ಥರು ಮಾತನಾಡಿ, ನಮಗೆ ಬ್ಯಾರೇಜ್ ನೀರು ಬೇಡ. ಭೀಮಾ ನದಿಯ ಪಕ್ಕದಲ್ಲಿ ಬೋರವೆಲ್ ಹಾಕಿಸಿಕೊಡಿ. ಅದಕ್ಕೆ ಮೋಟರ್ ಅಳವಡಿಸಿರೆ ಸಾಕು, ಆ ನೀರನ್ನೆ ನಾವು ಕುಡಿಯಲು ಬಳಕೆ ಮಾಡಿಕೊಳ್ಳುತ್ತೇವೆ ಎಂದು ಮನವಿ ಮಾಡಿದರು. ಶುಕ್ರವಾರವೇ ಈ ಕೆಲಸ ಮಾಡಿ ವರದಿ ನೀಡಬೇಕು ಎಂದು ಸ್ಥಳದಲ್ಲಿಯೇ ಇದ್ದ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸಿಇಒ ಆದೇಶ ಮಾಡಿದರು.
  ಕೋನಳ್ಳಿ ಗ್ರಾಮದಲ್ಲಿ ಒಂದು ನೀರು ಶುದ್ಧೀಕರಣ ಘಟಕವನ್ನು ಸ್ಥಾಪಿಸಬೇಕು. ಅದೇ ರೀತಿ ವಡಗೇರಾ ಗ್ರಾಮದಲ್ಲಿ ಮೂರು ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿ, ಬ್ಯಾರೇಜಿನಿಂದ ಬರುವ ನೀರನ್ನು ಈ ಘಟಕಗಳಿಗೆ ಸರಬರಾಜು ಮಾಡಿ ಅಲ್ಲಿ ನೀರು ಶುದ್ಧೀಕರಣಗೊಂಡ ನಂತರ ನಳಗಳಿಗೆ ಬಿಡಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ವಿದ್ಯುತ್ ಸಮಸ್ಯೆ: ನೀರು ಬಿಡಲು ಸಕಾಲದಲ್ಲಿ ವಿದ್ಯುತ್ ಇರುವುದಿಲ್ಲ. ಇದರಿಂದಾಗಿ ಕುಡಿಯುವ ನೀರು ಪೂರೈಕೆಗೆ ಸಮಸ್ಯೆಯಾಗುತ್ತಿದೆ ಎಂದು ಅಧಿಕಾರಿಗಳು ಸಿಇಒ ಗಮನಕ್ಕೆ ತಂದರು. ಆಗ ಜೆಸ್ಕಾಂ ಅಧಿಕಾರಿಗಳು ಎಲ್ಲಿದ್ದಾರೆ ಕರೆಯಿರಿ ಎಂದು ಎಂದಾಗ ಸ್ಥಳದಲ್ಲಿ ಯಾವೊಬ್ಬ ಜೆಸ್ಕಾಂ ಅಧಿಕಾರಿಗಳೂ ಇರಲ್ಲಿಲ್ಲ. ದಿನದ 24 ಗಂಟೆಯೂ ವಿದ್ಯುತ್ ಸರಬರಾಜು ಮಾಡುವ ವ್ಯವಸ್ಥೆ ಮಾಡುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸುವಂತೆ ಅಧಿಕಾರಿಗಳಿಗೆ ಅವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement