ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಡೆಂಘೀ: ಮುಂಜಾಗ್ರತೆ ಅಗತ್ಯ

Lingaraj Badiger
Updated On : 14 Jun 2013, 10:58 am

ಕ.ಪ್ರ. ವಾರ್ತೆ  ಯಾದಗಿರಿ  ಜೂ.13
ಡೆಂಘೀ ಜ್ವರ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುವಂತಹ ಸೋಂಕು ಕಾಯಿಲೆಯಾಗಿದೆ. ಆದ್ದರಿಂದ ಡೆಂಘೀ ಜ್ವರದ ಬಗ್ಗೆ ಮುಂಜಾಗ್ರತೆ ವಹಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಬೇಕೆಂದು ರಾಮಸಮುದ್ರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಾಜಿದಾ ಹೇಳಿದರು.
  ತಾಲೂಕಿನ ರಾಮಸಮುದ್ರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಶಾಲೆಯ ಸಿಬ್ಬಂದಿಗೆ ಡೆಂಘೀ ನಿಯಂತ್ರಣ ಕುರಿತು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೋಗದ ಲಕ್ಷಣಗಳು: ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು ಕಾಣಿಸುವುದು ಈ ರೋಗದ ಲಕ್ಷಣಗಳಾಗಿವೆ. ಹಲವು ಬಾರಿ ಮೂಗು, ಬಾಯಿ ಮತ್ತು ವಸಡುಗಳಲ್ಲಿ ರಕ್ತಸ್ರಾವ ಕಂಡುಬರುತ್ತವೆ. ಇಂತಹ ಲಕ್ಷಣಗಳು ಕಂಡುಬಂದ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ರಕ್ತ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಮುಂಜಾಗ್ರತೆ ಅವಶ್ಯ: ಡೆಂಘೀ, ಚಿಕೂನ್‌ಗುನ್ಯಾ ಕಾಯಿಲೆಗಳನ್ನು ತಡೆಗಟ್ಟಲು ಕೆಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಮನೆಯಲ್ಲಿ ನೀರು ಶೇಖರಿಸುವ ಸಿಮೆಂಟ್ ತೊಟ್ಟಿಗಳು, ಬ್ಯಾರೆಲ್, ಡ್ರಮ್‌ಗಳು, ಏರ್ ಕೂಲರ್, ಹೂ ಕುಂಡದ ನೀರಿನ ಸಂಗ್ರಹಗಳು ಇತ್ಯಾದಿಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ಅವುಗಳನ್ನು ವಾರಕ್ಕೊಮ್ಮೆ ಸಂಪೂರ್ಣವಾಗಿ ಶುಚಿಗೊಳಿಸಬೇಕು. ಯಾವಾಗಲೂ ಭದ್ರವಾದ ಮುಚ್ಚಳದಿಂದ ಮುಚ್ಚಿ ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರ ವಹಿಸಬೇಕು.
  ಬಯಲಿನಲ್ಲಿ ಪೈರು, ಎಳನೀರಿನ ಚಿಪ್ಪು, ತ್ಯಾಜ್ಯ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ವಿಲೇವಾರಿ ಮಾಡುವುದು ಅಥವಾ ನಾಶಗೊಳಿಸುವುದು ಅಗತ್ಯ. ರೋಗ ಹರಡುವ ಸೊಳ್ಳೆಗಳು ಹಗಲಿನಲ್ಲಿ ಕಚ್ಚುವುದರಿಂದ ಸೊಳ್ಳೆ ಕಡಿತದಿಂದ ಪಾರಾಗಲು ಮಕ್ಕಳು, ವಿಶ್ರಾಂತಿ ಪಡೆಯುವ ವಯೋವೃದ್ಧರು, ಕಾಯಿಲೆಯಿಂದ ಬಳಲುವವರು ತಪ್ಪದೇ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕೆಂದು ಹೇಳಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಧಿಕಾರಿ ವಿಜಯಕುಮಾರಿ ಮಾತನಾಡಿದರು.
 ಗ್ರಾಪಂ ಅಧ್ಯಕ್ಷ ವಿಶ್ವನಾಥ ಬಾಗ್ಲಿ, ಸದಸ್ಯರಾದ ವೆಂಕಟೇಶ, ಹಣಮಂತ ಕಲಾಲ, ಕೇಶವ, ಆರೊಗ್ಯ ಕೇಂದ್ರದ ಸಿಬ್ಬಂದಿ ವೆಂಕಟೇಶ ಕುಲಕರ್ಣಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement