ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧ
ಆಳಂದ: 14 ವರ್ಷದೊಳಗಿನ ಮಕ್ಕಳನ್ನು ದುಡಿಸುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದನ್ನು ಕಡೆಗಣಿಸಿ ದುಡಿಸಿಕೊಳ್ಳುವುದು ಅಥವಾ ದುಡಿಯಲು ಹಚ್ಚುವುದು ಅಪರಾಧ. ಒಂದು ವೇಳೆ ಇಂಥ ಪ್ರಕರಣ ಸಾಬೀತಾದಲ್ಲಿ ಆರೋಪಿಗೆ ಎರಡು ವರ್ಷ ಜೈಲು ಮತ್ತು ರು. 50 ಸಾವಿರ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಸ್ಥಳೀಯ ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರಭು ಎನ್. ಬಡಗೇರ ಎಚ್ಚರಿಸಿದರು.
ಪಟ್ಟಣದ ಸಮತಾ ಲೋಕ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನ್ಯಾಯವಾದಿ ಎಂ.ವಿ. ಎಕಬೋಟೆ ಭಾರತೀಯ ಸಂವಿಧಾನದ ಹಕ್ಕು ಹಾಗೂ ಕರ್ತವ್ಯಗಳು ಕುರಿತು ಮಾತನಾಡಿದರು.ಪ್ರಾಚಾರ್ಯ ಅಶೋಕ ರೆಡ್ಡಿ ಮಾತನಾಡಿದರು. ನ್ಯಾಯವಾದಿ ಸಂಘದ ಅಧ್ಯಕ್ಷ ಎಸ್.ಡಿ. ಬೋಸಗೆ, ಪ್ರಧಾನ ಕಾರ್ಯದರ್ಶಿ ಸ್ವಾಮಿರಾವ್ ಚನ್ನಿಗುಂಡ ಉಪಸ್ಥಿತರಿದ್ದರು.
1 ಲಕ್ಷ ಮೌಲ್ಯದ ನಗ- ನಾಣ್ಯ ಕಳವು
ಗುಲ್ಬರ್ಗ: ಮನೆಯ ಹಿಂದಿನ ಕಿಟಕಿಯ ಗ್ರಿಲ್ ಮುರಿದು 25 ಗ್ರಾಂ ಚಿನ್ನ, 30 ಸಾವಿರ, 10 ಸೀರೆ ಸೇರಿದಂತೆ ಸುಮಾರು 1 ಲಕ್ಷ ಮೌಲ್ಯದ ನಗ- ನಾಣ್ಯ ದೋಚಿಕೊಂಡು ಹೋದ ಘಟನೆ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದಲ್ಲಿ ನಡೆದಿದೆ.
ಜೇರಟಗಿ ಗ್ರಾಮದ ರೇವಣಸಿದ್ದಪ್ಪ ತಂದೆ ಭಾಗಪ್ಪ ಕೇರಿ ಎಂಬುವರ ಮನೆಯೇ ಕಳ್ಳತನವಾಗಿರುವುದು. ಮನೆಯ ಹಿಂದಿನ ಕಿಟಕಿಯ ಗ್ರಿಲ್ ಮುರಿದು ನಗ- ನಾಣ್ಯ ದೋಚಿಕೊಂಡು ಹೋಗಲಾಗಿದ್ದು, ಇವರು ಮನೆಗೆ ಬೀಗ ಹಾಕಿ ಮನೆಯ ಮುಂದೆ ಮಲಗಿದ್ದ ವೇಳೆ ಕಳ್ಳರು ಈ ಕೃತ್ಯ ವೆಸಗಿದ್ದಾರೆ. ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.