ವರ್ಷಕ್ಕೆ 3 ಕೋಟಿ ಖರ್ಚಾದ್ರೂ ಬೆರಳೆಣಿಕೆ ಗಿಡಗಳಿಲ್ಲ
ಕನ್ನಡಪ್ರಭ ವಾರ್ತೆ ಯಾದಗಿರಿ ಜೂ.13
ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಏನು ಮಾಡುತ್ತಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಅದು ನೆಟ್ಟ ಸಸಿಯೂ ಎಲ್ಲಿಗೆ ಹೋಯಿತೆಂದು ತಿಳಿಯುತ್ತಿಲ್ಲ. ಆದರೆ ಪ್ರತಿ ವರ್ಷ ಸಸಿ ಬೆಳೆಸಲು ಹಾಗೂ ನೆಡಲು ಸುಮಾರು ರು. 3 ಕೋಟಿ ಖರ್ಚು ಮಾಡುತ್ತಿರುವುದು ಮಾತ್ರ ಸತ್ಯ.
ಇಲ್ಲಿಯ ಪರಿಸರವನ್ನು ಒಮ್ಮೆ ಪರಿಶೀಲಿಸಿದರೆ ಅರಣ್ಯ ಇಲಾಖೆ ಸಸಿ ನೆಡಲು ಎಷ್ಟು ಶ್ರಮಿಸಿದೆ ಎನ್ನುವುದು ಗೊತ್ತಾಗುತ್ತದೆ. ನಗರಗಳ ರಸ್ತೆ ಪಕ್ಕದಲ್ಲಾಗಲಿ ಅಥವಾ ಗ್ರಾಮೀಣ ಭಾಗದಲ್ಲಾಗಲಿ ಇತ್ತೀಚೆಗೆ ನೆಟ್ಟು ಬೆಳೆದ ಗಿಡಗಳು ಒಂದೂ ಕಣ್ಣಿಗೆ ಕಾಣುವುದಿಲ್ಲ. ನಗರ ಪ್ರದೇಶದಲ್ಲಿ ಹತ್ತಾರು ರಸ್ತೆಗಳಿದ್ದರೂ ಅದರ ಅಕ್ಕಪಕ್ಕದಲ್ಲಿ ಹಸಿರು ಎನ್ನುವುದನ್ನು ಹುಡುಕಿದರೂ ಸಿಗುವುದಿಲ್ಲ. ಬಿಸಿಲಿನಲ್ಲಿ ಬೆಂಡಾಗಿ ನೆರಳನ್ನು ಹುಡುಕುತ್ತಾ ಸಾಗಿದರೆ ಮರವೇ ಕಾಣುವುದಿಲ್ಲ.
ಆದರೂ ಅರಣ್ಯ ಇಲಾಖೆ ದಾಖಲೆಗಳ ಪ್ರಕಾರ ಪ್ರತಿ ವರ್ಷ ಲಕ್ಷಾಂತರ ಸಸಿಗಳನ್ನು ನೆಡುತ್ತಿದೆ. ಇದಕ್ಕಾಗಿ ಕೋಟ್ಯಂತರ ರುಪಾಯಿ ವ್ಯಯಿಸುತ್ತಿದೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕಳೆದ ವರ್ಷ 13 ಲಕ್ಷ ಸಸಿ: ಜಿಲ್ಲೆಯಲ್ಲಿ ಅರಣ್ಯ ಭೂಮಿ ಇರುವುದೇ ಕಮ್ಮಿ. ಜಿಲ್ಲೆಯ ಒಟ್ಟೂ ವಿಸ್ತಾರದಲ್ಲಿ ಶೇ.5ರಷ್ಟೂ ಅರಣ್ಯ ಭೂಮಿಯಿಲ್ಲ. ಜಿಲ್ಲೆಯಲ್ಲಿ 27749 ಹೆಕ್ಟೇರ್ ಪ್ರದೇಶ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರುತ್ತದೆ. ಇಷ್ಟು ಕಡಿಮೆ ವ್ಯಾಪ್ತಿ ಹೊಂದಿದ್ದರೂ ಅವುಗಳನ್ನೂ ಸರಿಯಾಗಿ ಕಾಯ್ದುಕೊಳ್ಳುವಲ್ಲಿ ಅರಣ್ಯ ಇಲಾಖೆ ಆಸಕ್ತಿ ತೋರುತ್ತಿಲ್ಲ. 2012-13ನೇ ಸಾಲಿನಲ್ಲಿ ಅರಣ್ಯ ಇಲಾಖೆಯು 1368 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 13.4 ಲಕ್ಷ ಸಸಿಗಳನ್ನು ನೆಟ್ಟಿದೆ. ಗುಡ್ಡ, ರಸ್ತೆ ಪಕ್ಕ, ಸಾರ್ವಜನಿಕರಿಗೆ ಉಚಿತ ವಿತರಣೆ, ದೈವೀವನ, ಕೈಗಾರಿಕಾ ಪ್ರದೇಶ, ಪುನಾವಸತಿ ಕೇಂದ್ರ, ಶಾಲೆ ಸೇರಿದಂತೆ ವಿವಿಧ ರೀತಿಯಲ್ಲಿ ಈ ಸಸಿಗಳನ್ನು ವಿತರಿಸಿ ನೆಡಲಾಗಿದೆ. ಇದಕ್ಕಾಗಿ ಸುಮಾರು ರು. 3 ಕೋಟಿ ಅನುದಾನ ಖರ್ಚು ಮಾಡಲಾಗಿದೆ. ಮತ್ತೆ ಈ ವರ್ಷವೂ 988 ಹೆಕ್ಟೇರ್ ಪ್ರದೇಶದಲ್ಲಿ 11.5 ಲಕ್ಷ ಸಸಿ ನೆಡುವ ಗುರಿಯನ್ನು ಇಲಾಖೆ ಹಾಕಿಕೊಂಡಿದೆ. ಇದರಲ್ಲಿ ಸುಮಾರು 3.3 ಲಕ್ಷ ಸಸಿಗಳನ್ನು ಸಾರ್ವಜನಿಕ ವಿತರಣೆಗೆಂದೇ ಮೀಸಲಿಡಲಾಗಿದೆ. ಮತ್ತೆ ಹಿಂದಿನ ಬಾರಿಯಷ್ಟೇ ಹಣ ಖರ್ಚು ಮಾಡುತ್ತಿದೆ.
ಗಿಡ ಮಾತ್ರ ಕಾಣುತ್ತಿಲ್ಲ: ಜೂನ್ ತಿಂಗಳು ಬಂದಾಕ್ಷಣ ಎಲ್ಲರಿಗೂ ಪರಿಸರದ ಬಗ್ಗೆ ನೆನಪಾಗುತ್ತದೆ. ಗಿಡ ನೆಡಬೇಕು, ಅದನ್ನು ಸಂರಕ್ಷಿಸಬೇಕು ಎಂದು ಭಾಷಣ ಮಾಡುವವರೇ ಆಗಿದ್ದಾರೆ. ಆದರೆ ಇದುವರೆಗೆ ಸಸಿ ನೆಟ್ಟಿರುವುದು ಎಲ್ಲಿದೆ, ಅದಕ್ಕಾಗಿ ಖರ್ಚು ಮಾಡಿದ ಹಣವೆಷ್ಟು ಎಂದು ಕೇಳುವವರೇ ಇಲ್ಲ. ಎರಡು ವರ್ಷದ ಅರಣ್ಯ ಇಲಾಖೆ ಲೆಕ್ಕಾಚಾರವನ್ನೇ ತೆಗೆದುಕೊಂಡರೂ ಸುಮಾರು 25 ಲಕ್ಷ ಸಸಿಗಳು ಜಿಲ್ಲೆಯಲ್ಲಿ ಕಾಣಬೇಕು. ಹೀಗೆ ಕಳೆದ ಹತ್ತಾರು ವರ್ಷಗಳಿಂದ ನೆಟ್ಟ ಗಿಡಗಳಲ್ಲಿ ಅರ್ಧದಷ್ಟು ಬದುಕಿದರೂ ಜಿಲ್ಲೆ ಹಸಿರಾಗುತ್ತಿತ್ತು. ಆದರೆ ಬೆರಳೆಣಿಕೆಯಷ್ಟೂ ಗಿಡ, ಮರಗಳು ಕಾಣುವುದಿಲ್ಲ.
ಗಿಡ ಹುಡುಕಿಕೊಡಿ: ಅರಣ್ಯ ಇಲಾಖೆ ಕಾರ್ಯವೈಖರಿ ಬಗ್ಗೆ ಜನಪ್ರತಿನಿಧಿಗಳೂ ಬೇಸತ್ತಿದ್ದಾರೆ. ಜಿಪಂ ಉಪಾಧ್ಯಕ್ಷ ಶರಣಿಕಕುಮಾರ ದೋಖಾ ಅವರು ಕಳೆದ ಮೂರ್ನಾಲ್ಕು ಸಾಮಾನ್ಯ ಸಭೆಯಲ್ಲಿ ಈ ಪ್ರಶ್ನೆ ಎತ್ತಿದ್ದಾರೆ. ಈ ಕುರಿತು ಅವರನ್ನು ಕೇಳಿದಾಗ, ಅರಣ್ಯ ಇಲಾಖೆ ಇದುವರೆಗೆ ದಾಖಲೆಯಲ್ಲಿ ತೋರಿಸಿದಷ್ಟು ಸಸಿಗಳನ್ನು ನೆಟ್ಟಿದ್ದರೆ ಜಿಲ್ಲೆ ಮಲೆನಾಡಾಗುತ್ತಿತ್ತು. ನಾವು ಬಿಸಿಲಿಗೆ ತಲೆ ಸುಟ್ಟುಕೊಂಡು ತಿರುಗುವ ಪರಿಸ್ಥಿತಿ ಬರುತ್ತಿರಲಿಲ್ಲ. ಇಲಾಖೆ ತೋರಿಸುತ್ತಿರುವ ದಾಖಲೆಗಳೇ ಬೋಗಸ್. ಎಲ್ಲೆಲ್ಲಿ ಸಸಿಗಳನ್ನು ನೆಟ್ಟಿದ್ದೀರಿ ತೋರಿಸಿ ಎಂದು ಅನೇಕ ಬಾರಿ ಹೇಳಿದರೂ ಬರುತ್ತಿಲ್ಲ. ಆದರೆ ಈ ವಿಷಯದಲ್ಲಿ ಇನ್ನು ಸುಮ್ಮನಿರುವುದಿಲ್ಲ. ಶೀಘ್ರದಲ್ಲಿ ನೆಟ್ಟ ಗಿಡಗಳನ್ನು ಪರಿಶೀಲಿಸುವ ಕಾರ್ಯ ಮಾಡಲಾಗುವುದು. ಅಲ್ಲದೇ ಸಸಿ ನೆಡುವ ಕಾರ್ಯವನ್ನೂ ಚುರುಕುಗೊಳಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕರ ಸಹಕಾರವೂ ಬೇಕು: ಗಿಡ ಮರಗಳನ್ನು ಬೆಳೆಸುವುದು ಅರಣ್ಯ ಇಲಾಖೆ ಕೆಲಸ ಎಂದು ಹೇಳುವುದೂ ತಪ್ಪು. ನೆಟ್ಟ ಗಿಡಗಳನ್ನು ಸಂರಕ್ಷಿಸಿಕೊಳ್ಳುವುದು ಎಲ್ಲರ ಕರ್ತವ್ಯ. ತಮ್ಮ ಮನೆ ಸುತ್ತಮುತ್ತ ಗಿಡಗಳನ್ನು ಬೆಳೆಯಲು ಎಲ್ಲರಿಗೂ ಅವಕಾಶವಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರು ಗಮನ ನೀಡಬೇಕಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ದೌಲತ್ ಹುಸೇನ್ ಕೂಡ ಇದೇ ಮಾತನ್ನು ಹೇಳುತ್ತಾರೆ. ಸಿಬ್ಬಂದಿ ಕೊರತೆ ಮಧ್ಯೆಯೂ ಇಲಾಖೆ ಸಸಿ ಬೆಳೆಸುವ ಹಾಗೂ ನೆಡುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದೆ. ಆದರೆ ಬೇಸಿಗೆಯಲ್ಲಿ ಉಳಿಸಿಕೊಳ್ಳುವುದೇ ಕಷ್ಟವಾಗುತ್ತಿದೆ. ಗಿಡಗಳನ್ನು ಕಡಿಯದೇ ಉಳಿಸಿಕೊಳ್ಳುವ ಪ್ರಜ್ಞೆಯೂ ಜನರಿಗೆ ಇರಬೇಕು ಎಂದು ಹೇಳುತ್ತಾರೆ.
-ನಾರಾಯಣ ಹೆಗಡೆ