ಶಾಲಾ ಮಕ್ಕಳಿಗೆ ಪುಸ್ತಕ ಹೊರಿಸಿದ ಶಿಕ್ಷಕರು!
ಯಾದಗಿರಿ: ಬುಧವಾರವಷ್ಟೇ ಎಲ್ಲೆಡೆ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ ಆಚರಿಸಲಾಗಿದೆ. ಆದರೆ ಇದರ ಪರಿವೇ ಇಲ್ಲದಂತೆ ಶಹಾಪುರ ತಾಲೂಕಿನ ತುಮಕೂರು ಸರ್ಕಾರಿ ಉರ್ದು ಶಾಲೆಯ ಶಿಕ್ಷಕರು ವರ್ತಿಸಿದ್ದಾರೆ. 'ಬೇಲಿಯೇ ಎದ್ದು ಹೊಲ ಮೇಯ್ದಂತೆ' ಎನ್ನುವಂತೆ ವಿದ್ಯಾರ್ಥಿಗಳಿಂದಲೇ ವಡಗೇರಾ ಸರ್ಕಾರಿ ಶಾಲೆಯಿಂದ ಪುಸ್ತಕಗಳನ್ನು ಹೊರಿಸಿದ್ದಾರೆ.
ಸಮಾಜದಲ್ಲಿರುವ ಅನಿಷ್ಟ ಪದ್ಧತಿ, ಅನ್ಯಾಯ, ಶೋಷಣೆ ಇತ್ಯಾದಿಗಳನ್ನು ತೊಡೆದು ಹಾಕಲು ಶ್ರಮಿಸಬೇಕಿದ್ದ ಶಿಕ್ಷಕರು ಶಾಲೆಯಲ್ಲಿಯೇ ಕುಳಿತು ಮಕ್ಕಳ ತಲೆ ಮೇಲೆ ಪುಸ್ತಕ ಹೊರಿಸಿದ್ದು ಪಾಲಕರ ಅಸಮಾಧಾನಕ್ಕೆ ಕಾರಣವಾಗಿದೆ. ತುಮಕೂರು ಗ್ರಾಮದ ಉರ್ದು ಶಾಲೆಯ ಮಕ್ಕಳು ಬುಧವಾರ ವಡಗೇರಾ ಸರ್ಕಾರಿ ಶಾಲೆಗೆ ಬಂದು ಪುಸ್ತಕಗಳನ್ನು ಹೊತ್ತುಕೊಂಡು ಹೋಗಿರುವುದನ್ನು ನೋಡಿದರೆ ಶಿಕ್ಷಕರೇನು ಮಾಡುತ್ತಿದ್ದಾರೆಂಬುವುದು ಪಾಲಕರ ಪ್ರಶ್ನೆ.
ನಿಯಮದ ಪ್ರಕಾರ ಶಾಲೆಯಿಂದ ಇನ್ನೊಂದು ಶಾಲೆಗೆ ಪುಸ್ತಕ ತೆಗೆದುಕೊಂಡು ಹೋಗಬೇಕಾದರೆ ಆಯಾ ಶಾಲಾ ಶಿಕ್ಷಕರು, ಮುಖ್ಯ ಶಿಕ್ಷಕರು ಖಾಸಗಿ ವಾಹನದಲ್ಲಿ ತೆಗೆದುಕೊಂಡು ಹೋಗಬೇಕು. ಆದರೆ ಮಕ್ಕಳಿಂದ ಶಾಲಾ ಪುಸ್ತಕಗಳನ್ನು ಹೊತ್ತುಕೊಂಡು ಬರಲು ಹೇಳಿದ್ದು ಯಾವ ನ್ಯಾಯ? ಪ್ರಯಾಣದ ವೇಳೆ ಹೆಚ್ಚುಕಮ್ಮಿಯಾದರೆ ಯಾರು ಜವಾಬ್ದಾರಿ? ಎನ್ನುವುದು ಪಾಲಕರ ಪ್ರಶ್ನೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಸಂಬಂಧಪಟ್ಟ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮಕ್ಕಳ ಪೋಷಕರು ಆಗ್ರಹಿಸಿದ್ದಾರೆ.