ಸುರಿದ ಮಳೆ, ಮನೆಗಳಿಗೆ ನುಗ್ಗಿದ ನೀರು
ಕನ್ನಡಪ್ರಭ ವಾರ್ತೆ ಕೆಂಭಾವಿ ಜೂ.13
ಪಟ್ಟಣದಲ್ಲಿ ಗುರುವಾರ ಸುರಿದ ಮಳೆಗೆ ಹಳೆ ಬಸ್ ನಿಲ್ದಾಣ ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಬಡಾವಣೆಯ ಜನ ಪರದಾಟ ನಡೆಸುವಂತಾಯಿತು.
ಮಳೆಗಾಲ ಆರಂಭವಾಗಿ ಎರಡು ವಾರ ಕಳೆದರೂ ಇದುವರೆಗೆ ಜೋರಾಗಿ ಮಳೆ ಬಂದಿರಲಿಲ್ಲ. ಆದರೆ ಗುರುವಾರ ಸಂಜೆ ಏಕಾಏಕಿಯಾಗಿ ಮಳೆ ಸುರಿಯಿತು. ಇದರಿಂದ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಮನೆಗಳಿಗೆ ನುಗ್ಗಿತು. ನೀರನ್ನು ಹೊರಹಾಕಲು ಜನರು ಪರದಾಡುವಂತಾಯಿತು.
ದಿನಬಳಕೆ ವಸ್ತುಗಳು ನೀರುಪಾಲು: ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಮನೆಯಲ್ಲಿದ್ದ ದವಸಧಾನ್ಯಗಳು ಹಾಗೂ ದಿನಬಳಕೆ ವಸ್ತುಗಳು ನೀರುಪಾಲಾಗಿದ್ದು, ಬಡ ಕುಟುಂಬಗಳು ತೊಂದರೆ ಪಡುವಂತಾಗಿದೆ. ಮನೆಗೆ ನೀರು ನುಗ್ಗಿದ್ದು ನೀರು ಹೊರಹಾಕಲು ಮಹಿಳೆಯರು ಹರಸಾಹಸಪಟ್ಟರು.
ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿದ್ದರಿಂದ ಪ್ರತಿ ಬಾರಿ ಮಳೆ ಬಂದಾಗಲೆಲ್ಲ ಈ ಬಡಾವಣೆಯಲ್ಲಿ ಮನೆಗಳಿಗೆ ನೀರು ನುಗ್ಗುತ್ತಿದೆ. ಇದಕ್ಕೆ ಅಧಿಕಾರಿಗಳೇ ನೇರ ಹೊಣೆ ಎಂದು ಕೆಜೆಪಿ ಮುಖಂಡ ಸಂಗಣ್ಣ ತುಂಬಗಿ ಆಕ್ರೋಶ ವ್ಯಕ್ತಪಡೆಸಿದ್ದಾರೆ.
ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ರಾಜಕಾಲುವೆ ಕಾಮಗಾರಿಯು ಅವೈಜ್ಞಾನಿಕವಾಗಿದೆ. ಇನ್ನೂ ಕಾಮಗಾರಿ ಪೂರ್ಣಗೊಳ್ಳದಿರುವುದು ಹಲವಾರು ಬಡಾವಣೆಗಳಲ್ಲಿ ನೀರು ನುಗ್ಗಲು ಕಾರಣವಾಗುತ್ತಿದೆ. ಶೀಘ್ರದಲ್ಲಿ ಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಹಳೇ ಬಸ್ ನಿಲ್ದಾಣ ಪ್ರದೇಶದ ಜನರು ಆಗ್ರಹಿಸಿದ್ದಾರೆ.
--