ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದಿನಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

Lingaraj Badiger
Updated On : 15 Jun 2013, 10:57 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.14
ಜೂ. 15 ಮತ್ತು 16ರಂದು ನಗರದ ಕನ್ನಡ ಭವನದಲ್ಲಿ ನಡೆಯಲಿರುವ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ ಮುಗಿದಿದೆ.
ಭೀಮಸೇನರಾವ್ ತವಗ, ಪ್ರಭುಲಿಂಗ ಮಲ್ಲಾಪುರ, ಬಿ. ಮಹಾದೇವಪ್ಪ ಮತ್ತು ಶಿವಶರಣ ಪಾಟೀಲ್ ಜಾವಳಿ ಒಟ್ಟು ನಾಲ್ಕು ಮಹಾದ್ವಾರಗಳು ಸಜ್ಜಾಗಿವೆ. ಶರಣಬಸವೇಶ್ವರ ಮತ್ತು ಹಜರತ್ ಖ್ವಾಜಾ ಬಂದೇನವಾಜ್ ಶ್ರದ್ಧಾ ಕೇಂದ್ರಗಳ ಹೆಸರಿನ ಎರಡು ಮಹಾ ವೇದಿಕೆಗಳು ನಿರ್ಮಿಸಲಾಗಿದೆ.
1500 ಪ್ರತಿನಿಧಿಗಳ ನಿರೀಕ್ಷೆ: 28 ಅಡಿ ಉದ್ದ ಹಾಗೂ 12 ಅಡಿ ಎತ್ತರದ ಪರದೆ ಸಿದ್ಧವಾಗಿದ್ದು, ಇದರಲ್ಲಿ ತತ್ರಾಣಿ, ಸೀರೆಗಳು, ರೊಟ್ಟಿ ಬುಟ್ಟಿ ಇತ್ಯಾದಿ ವಸ್ತುಗಳನ್ನು ಕಲಾತ್ಮಕವಾಗಿ ಜೋಡಿಸಲಾಗಿದೆ. ಇದೊಂದು ಫ್ಲೆಕ್ಸ್‌ರಹಿತ ಸಮ್ಮೇಳನ ಎನ್ನಬಹುದು.
ಸಮ್ಮೇಳನಕ್ಕೆ ಒಟ್ಟು 1500 ಪ್ರತಿನಿಧಿಗಳ ಆಗಮನದ ನಿರೀಕ್ಷೆಯನ್ನು ಸ್ವಾಗತ ಸಮಿತಿ ಹೊಂದಿದೆ. ಸಮ್ಮೇಳನದಲ್ಲಿ ನೋಂದಾಯಿಸಿಕೊಳ್ಳುವವರಿಗೆ ರು. 150 ಶುಲ್ಕ ನಿಗದಿ ಮಾಡಲಾಗಿದೆ. ನೋಂದಾಯಿಸಿಕೊಂಡ ಪ್ರತಿನಿಧಿಗೆ ಒಂದು ಬ್ಯಾಗ್, ಪುಸ್ತಕ ಹಾಗೂ ಲೇಖನಿ ನೀಡಲಾಗುತ್ತಿದೆ. ಪ್ರತಿನಿಧಿಗಳಿಗೆ ಸೂಕ್ತ ಊಟದ ವ್ಯವಸ್ಥೆಗೆ ಯೋಜನೆ ಸಿದ್ಧವಾಗಿದೆ.
ಪುಸ್ತಕ ಮಳಿಗೆಗಳು: ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳು ಜಿಡಿಎ ಕಚೇರಿ ಆವರಣ ಮತ್ತು ಮಿನಿ ವಿಧಾನಸೌಧದ ಆವರಣದಲ್ಲಿ ವಾಹನ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯದ ವಿವಿಧ ಕಡೆಗಳಿಂದ 10 ಪುಸ್ತಕ ಮಳಿಗೆಗಳು ಸಮ್ಮೇಳನದಲ್ಲಿ ಭಾಗವಹಿಸುತ್ತಿವೆ.
ಕನ್ನಡ ಭವನದ ಮೇಲಿನ ವೇದಿಕೆಯಲ್ಲಿ ಒಂದು ಸಾವಿರ ಪ್ರತಿನಿಧಿಗಳು ಕುಳಿತುಕೊಳ್ಳಲು ಅವಕಾಶವಿದೆ. ನೆಲ ಅಂತಸ್ತಿನಲ್ಲಿ ಕುಳಿತುಕೊಳ್ಳುವ ಪ್ರತಿನಿಧಿಗಳಿಗಾಗಿ ನಾಲ್ಕು ಎಲ್‌ಸಿಡಿ ಪರದೆಗಳನ್ನು ಅಳವಡಿಸಲಾಗುತ್ತಿದೆ.
ಅಕ್ಷರ ಜಾತ್ರೆಯಲ್ಲಿ ಅಕ್ಷರ ಪ್ರೀತಿ ಹೆಚ್ಚಿಸಲು ಹಾಗೂ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸಲು ಹಲವು ಹೊಸ ಆಯಾಮಗಳನ್ನು ಈ ಬಾರಿಯ ಜಿಲ್ಲಾ ಸಮ್ಮೇಳನ ಅಳವಡಿಸಿಕೊಂಡಿರುವುದು ವಿಶೇಷ. ಮೊದಲನೆಯದ್ದು ಅಂತರ್ಜಾಲ ತಾಣ ಉದ್ಘಾಟನೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಹಿಂದಿನ ಬಹುತೇಕ ಅಧ್ಯಕ್ಷರನ್ನು ಸಮ್ಮೇಳನದಲ್ಲಿ ಸಕ್ರಿಯಗೊಳಿಸಿಕೊಂಡಿರುವುದು.
ಸಮ್ಮೇಳನಾಧ್ಯಕ್ಷ ಮೆರವಣಿಗೆ: ಜೂ. 15ರಂದು ಬೆಳಗ್ಗೆ 8ಕ್ಕೆ ಕನ್ನಡ ಭವನದಲ್ಲಿ ಗುಲ್ಬರ್ಗ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ, ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಪರಿಷತ್ತಿನ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಬೆಳಗ್ಗೆ 8.30ಕ್ಕೆ ಸಮ್ಮೇಳನದ ರಾಜ ಬೀದಿ ಉತ್ಸವ ನಡೆಯಲಿದೆ. ಮಹಾಮಾನವತಾದಿ ಬಸವೇಶ್ವರ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ, ನಂತರ ಜಗತ್ ವೃತ್ತದಿಂದ ಪ್ರಧಾನ ರಸ್ತೆ ಮೂಲಕ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ- ಕನ್ನಡ ಭವನದವರೆಗೆ ಸಮ್ಮೇಳನ ಅಧ್ಯಕ್ಷ ಎಲ್‌ಬಿಕೆ ಆಲ್ದಾಳ ಅವರ ಮೆರವಣಿಗೆ ಸಾಗಿ, ಪ್ರಧಾನ ವೇದಿಕೆ ತಲುಪಲಿದೆ.
ಸಚಿವೆ ಉಮಾಶ್ರೀಯಿಂದ ಸಮ್ಮೇಳನ ಉದ್ಘಾಟನೆ: ಈ ಉತ್ಸವವನ್ನು ಗುಲ್ಬರ್ಗ ಮಹಾನಗರ ಪಾಲಿಕೆ ಆಯುಕ್ತ ಪಿ. ಎನ್. ರವೀಂದ್ರ ಉದ್ಘಾಟನೆ ಮಾಡಲಿದ್ದಾರೆ. ಬೆಳಗ್ಗೆ 10.30 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಉಮಾಶ್ರೀ ಸಮ್ಮೇಳನ ಉದ್ಘಾಟಿಸಲಿದ್ದಾರೆ.
ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ವೆಬ್‌ಸೈಟ್ ಉದ್ಘಾಟಿಸಲಿದ್ದಾರೆ. ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ್ ಸೇಡಂ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ.
13 ಕೃತಿಗಳ ಲೋಕಾರ್ಪಣೆ: ಸಾಹಿತ್ಯ ಸಾರಥಿ, ರಂಗ ಸಾಮ್ರಾಟ, ಮಾಧ್ಯಮ ಲೋಕ, ಗಂಜಿಫಾ ಕಲೆ, ಜ್ಞಾನಪೀಠ ಪುರಸ್ಕೃತ ಉಮಾಶಂಕರ, ಲಲಿತ ಪ್ರಬಂಧ ಸಾಹಿತ್ಯ ಸಮೀಕ್ಷೆ, ಜಮಖಂಡಿ ಶಿವಶರಣ ಅಯ್ಯಣ್ಣ, ಮುತ್ಯಾ ಮಹಾತ್ಮೆ, ದೋರನಳ್ಳಿ ಮಹಾಂತೇಶ್ವರ ಪುರಾಣ, ಬೆಳ್ಳಿ ಮೂಡಿತು, ಹೃದಯಾಂತರಾಳ, ಹುತಾತ್ಮ ಅಪ್ಪಾರಾವ್ ಪಾಟೀಲ್, ನೊಂದು ನಲಿದವರು ಮತ್ತು ಇತಿಹಾಸ ಬೋಧನಾ ವಿಧಾನ ಎಂಬ ಕೃತಿಗಳು ಲೋಕಾರ್ಪಣಗೊಳ್ಳಲಿವೆ.
ಮಧ್ಯಾಹ್ನ 12ಕ್ಕೆ ಕಲಬುರ್ಗಿ ಸಾಹಿತ್ಯ ಮಂಥನ ಎಂಬ ಮೊದಲ ಗೋಷ್ಠಿ ನಡೆಯಲಿದೆ. 2ಕ್ಕೆ ಕವಿತೆಗಳ ತನನಂ, ತನನಂ ಎಂಬ ಶೀರ್ಷಿಕೆಯಡಿ ಕವಿಗೋಷ್ಠಿ ನಡೆಯಲಿದೆ. ಕಲಬುರ್ಗಿ ಕಲಾ ಚೇತನ ಎಂಬ ಎರಡನೇ ಗೋಷ್ಠಿ ನಡೆಯಲಿದೆ.
16ರಂದು ವಿವಿಧ ಗೋಷ್ಠಿಗಳು: ಜೂ.16ರಂದು ಬೆಳಗ್ಗೆ 9 ಗಂಟೆಗೆ ದಲಿತ ಸಾಹಿತ್ಯ ಚಿಂತನ ಕುರಿತು 3ನೇ ಗೋಷ್ಠಿ ನಡೆಯಲಿದೆ. ಬೆಳಗ್ಗೆ 10.30 ಗಂಟೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಹಾಗೂ 4ನೇ ಗೋಷ್ಠಿ ನಡೆಯಲಿದೆ.
ವರ್ತಮಾನದ ತಲ್ಲಣಗಳು ಕುರಿತು 5ನೇ ಗೋಷ್ಠಿ ನಡೆಯಲಿದೆ. ಯುವ ಕವಿತೆಗಳ ತೋಂ ತನನ ಕುರಿತು ಮಧ್ಯಾಹ್ನ 2ಕ್ಕೆ ಕವಿಗೋಷ್ಠಿ ನಡೆಯಲಿದೆ. 3.30ಕ್ಕೆ ಕಲಬುರ್ಗಿ ಸಂಕೀರ್ಣ ಸಾಹಿತ್ಯ ಕುರಿತು 6ನೇ ಗೋಷ್ಠಿ ನಡೆಯಲಿದೆ. ಸಂಜೆ 5ಕ್ಕೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement