ಕಾಲರಾಕ್ಕೆ ಬಾಲಕಿ ಬಲಿ
ಗುಲ್ಬರ್ಗ: ಗುಲ್ಬರ್ಗ ತಾಲೂಕಿನ ಕವಲಗಾ (ಬಿ) ಗ್ರಾಮದ ಬಾಲಕಿಯೊಬ್ಬಳು ಕಾಲರಾ ರೋಗಕ್ಕೆ ಬಲಿಯಾದ ಘಟನೆ ನಡೆದಿದೆ. ರುದ್ರಮ್ಮ ತಂದೆ ಚಂದ್ರಕಾಂತ (5) ಎಂಬ ಬಾಲಕಿ ಕಾಲರಾದಿಂದ ಉಂಟಾದ ವಾಂತಿ ಬೇಧಿಗೆ ಈಡಾಗಿ ಸಾವಿಗೀಡಾಗಿದ್ದಾಳೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ ತಿಳಿಸಿದ್ದಾರೆ.ಜಿಲ್ಲೆಯ ಕವಲಗಾ (ಬಿ) ಗ್ರಾಮದಲ್ಲಿ 27 ಕಾಲರಾ ಪ್ರಕರಣಗಳು ಪತ್ತೆಯಾಗಿವೆ. ಜೇವರ್ಗಿ ತಾಲೂಕಿನ ಮಂದೇವಾಲದಲ್ಲಿ 5 ಪ್ರಕರಣ ಹಾಗೂ ಚಿತ್ತಾಪುರ ತಾಲೂಕಿನ ಲಕ್ಷ್ಮೀಪುರ ತಾಂಡಾದಲ್ಲಿ 25 ಪ್ರಕರಣಗಳು ಪತ್ತೆಯಾಗಿವೆ ಎಂದು ವಿವರಿಸಿದ್ದಾರೆ. ಕಲುಷಿತ ನೀರಿನಿಂದ ವಾಂತಿ ಬೇಧಿ ಕಾಣಿಸಿಕೊಂಡಿದ್ದು, ಈಗಾಗಲೇ ಅಲ್ಲಿ ವೈದ್ಯರ ಮೂಲಕ ಚಿಕಿತ್ಸೆ ನೀಡಲಾಗಿದ್ದು, ಪರಿಸ್ಥಿತಿ ಸುಧಾರಿಸಿದೆ. ಕವಲಗಾ (ಬಿ) ಮತ್ತು ಲಕ್ಷ್ಮೀಪುರ ತಾಂಡಾಗಳಿಗೆ ಸ್ವಚ್ಛ, ಶುದ್ಧ, ಕುಡಿವ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.