ಸಂಚಾರಿ ನಿಯಮ ಪಾಲಿಸಲು ಸೂಚನೆ
ಶಹಾಪುರ: ಪಟ್ಟಣದ ಪ್ರದೇಶದಲ್ಲಿ ಸಂಚರಿಸುವ ಆಟೋ ಚಾಲಕರು ಕಡ್ಡಾಯವಾಗಿ ಚಾಲನಾ ಪರವಾನಗಿ ಹೊಂದಿರಬೇಕು, ಸಮವಸ್ತ್ರ ಧರಿಸಬೇಕು, ಕಾನೂನು ಬಾಹಿರ ಕ್ರಮಗಳಿಂದ ದೂರವಿರಬೇಕು, ನಿಗದಿಪಡಿಸಿದಷ್ಟೇ ಪ್ರಯಾಣಿಕರನ್ನು ಕರೆತರಬೇಕು, ಸಂಚಾರಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಶಹಾಪುರ ಪಟ್ಟಣದ ಸಿಪಿಐ ಪವನನಂದಿ ಕರೆ ನೀಡಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕರ ಹಾಗೂ ಮಾಲೀಕರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಅನಧಿಕೃತವಾಗಿ ಚಾಲನೆ ಮಾಡಿದರೆ ಕಾನೂನು ನಿಯಮದಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ ಪರವಾನಗಿ ಪಡೆಯದೇ ಆಟೋ ಓಡಿಸುವಂತಿಲ್ಲ. ಈ ನಿಟ್ಟಿನಲ್ಲಿ ಇಲಾಖೆ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ತರುತ್ತಿದ್ದು, ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಆದರೆ ಇದಕ್ಕೆ ಅವಕಾಶ ನೀಡದೇ ಚಾಲಕರು ಸಹಕರಿಸಬೇಕು ಎಂದು ತಿಳಿಸಿದರು. ಪಿಎಸ್‌ಐ ಸುನೀಲಕುಮಾರ ಮೂಲಿಮನಿ, ದೊಡಪ್ಪ ಇತರರು ಇದ್ದರು.